ತುಮಕೂರು

ನಾನು ಜಾತಿವಾದಿಯಲ್ಲ: ಬಿಎಸ್ವೈ

Published On :

ತುಮಕೂರು: ನಾನು ಜಾತಿವಾದಿಯಲ್ಲ. ಜಾತಿವಾದಿಯಾಗಿದ್ದರೆ ಡಿ.ವಿ.ಸದಾನಂದಗೌಡರನ್ನು ಸಿಎಂ ಮಾಡುತ್ತಿರಲಿಲ್ಲ ಎಂದು ಮಾಜಿ ಸಿಎಂ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು. ಅವರು ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ ಏರ್ಪಾಟಾಗಿದ್ದ ಕೆಜೆಪಿ ಸಮಾವೇಶ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂಬಿಕಸ್ಥ ಅಂತ ಸದಾನಂದಗೌಡರನ್ನು ಮುಖ್ಯಮಂತ್ರಿಯಾಗಲು ಸಹಕರಿಸಿದೆ. ಆದರೆ ಅವರೂ ಕೂಡ ನಂಬಿಕೆ ದ್ರೋಹ ಬಗೆದರು. ಬೆನ್ನಿಗೆ ಚೂರಿ ಹಾಕಿದರು. ನಂತರ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದೆ. ಅವರೇನು ಮಾಡುತ್ತಿದ್ದಾರೆ ಎಂಬುದು ತಿಳಿದೇ ಇದೆ ಎಂದರು.
'ಜನ್ಮ ಕೊಟ್ಟ ತಾಲೂಕನ್ನು ಬಿಡಲಾರೆ'
ಶಿರಾ: ಜನ್ಮ ಕೊಟ್ಟ ತಾಲೂಕನ್ನು ಬಿಟ್ಟು ಪರದೇಶಿಯಾಗಿ ಮತ ಭಿಕ್ಷೆಗೆ ಪಕ್ಕದ ಕ್ಷೇತ್ರಕ್ಕೆ ಬಂದ ವ್ಯಕ್ತಿ ನಾನಲ್ಲ ಎಂದು ರಾಜ್ಯ  ಜೆಡಿಎಸ್ ಮುಖಂಡ ಮಾಜಿ ಸಚಿವ ಬಿ.ಸತ್ಯನಾರಾಯಣ ಪರೋಕ್ಷವಾಗಿ ಟಿ.ಬಿ.ಜಯಚಂದ್ರ ಅವರನ್ನು ಟೀಕಿಸಿದರು. ಅವರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ತಾಲೂಕಿನ ಭೂತಪ್ಪನ ಗುಡಿ ಸಮೀಪ ನಡೆದ ಸಮಾವೇಶದಲ್ಲಿ ನನ್ನನ್ನು ರಣಹೇಡಿ ಎಂದು ಜಯಚಂದ್ರ ಜರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಈ ತಾಲೂಕಿನಲ್ಲಿ ಯಾದವ ಜನಾಂಗಕ್ಕೆ ರಾಜಕೀಯ ಶಕ್ತಿ ನೀಡಿದವನು ನಾನು ಎಂದೂ ಯಾರಲ್ಲೂ ಹೇಳಿಲ್ಲ. ಇದು ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡಿಲ್ಲ. ನನ್ನ ಜೀವ ಇರುವವರೆಗೂ ಈ ತಾಲೂಕಿನ ಜನರ ಸೇವೆ ಮಾಡುವೆ ಎಂದರು.
ಗೆಲವು ನನ್ನದೇ: ಒಬ್ಬ ಶಾಸಕನನ್ನು ಜೊತೆಗೆ ಕರೆದುಕೊಂಡು ಬರಲು ಆಗದವರು, ತಮ್ಮ ಕೃಷಿ ಸಚಿವ ಸ್ಥಾನದಿಂದ ಕಿತ್ತುಹಾಕಿಸಿಕೊಂಡವರನ್ನು ಮುಖ್ಯಮಂತ್ರಿ ಮಾಡುತ್ತಾರಾ ಎಂದು ಪ್ರಶ್ನಿಸಿದ ಬಿ.ಸತ್ಯನಾರಾಯಣ ಅವರು ಶಿರಾ ಕ್ಷೇತ್ರದಲ್ಲಿ ಗೆಲವು ನಮ್ಮದೆ. ಶತಸಿದ್ಧವಾಗಿ ಗೆಲ್ಲುತ್ತೇವೆ. ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಮತದಾರರು ಮುಖಂಡರು, ತಂಡೋಪ ತಂಡದಲ್ಲಿ ಜೆಡಿಎಸ್ ಸೇರುತ್ತಿರುವುದನ್ನು ನೋಡಿ ಟಿ.ಬಿ.ಜಯಚಂದ್ರ ಅವರಿಗೆ ದಿಗಿಲು ಉಂಟಾಗಿದೆ. ಅದಕ್ಕಾಗಿ ತಲೆ ಬುಡವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯ ಸಮಯದಲ್ಲಿ 50 ಕ್ಕೂ ಹೆಚ್ಚು ಯುವ ಮುಖಂಡರು ವಿವಿಧ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆಗೊಂಡರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ವಕ್ತಾರ ಬಾಂಬೆ ರಾಜಣ್ಣ, ನಗರಸಭೆ ಮಾಜಿ ಸದಸ್ಯ ಆರ್.ರಾಮು, ಹುಲಿಕುಂಟೆ ಲಕ್ಕಪ್ಪ, ಅರೆಹಳ್ಳಿ ಬಾಬು, ಅಂದುಕುಂಟೆ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.