ತುಮಕೂರು

ಕಡೆಗೂ ಭಾರ್ಗವನ ಬಂಧನ

Published On :

ಕ.ಪ್ರ. ವಾರ್ತೆ , ತುಮಕೂರು , ಏ.12
ಸ್ವೀಟಿ ಮರ್ಲಿನ್ ಆತ್ಮಹತ್ಯೆಗೆ ಕಾರಣ ಎನ್ನಲಾದ ಖಾಸಗಿ ಸುದ್ದಿವಾಹಿನಿಯೊಂದರ  ಕ್ಯಾಮರಾಮನ್ ಭಾರ್ಗವ (30) ನನ್ನು ತುಮಕೂರು ಪೊಲೀಸರು ಕಡೆಗೂ ಬಂಧಿಸಿದ್ದಾರೆ.
ಪ್ರಕರಣ ನಡೆದು 13 ದಿನಗಳು ಕಳೆದರೂ ಆರೋಪಿಯ ಸುಳಿವು ಇಲ್ಲದ್ದರಿಂದ ಪೊಲೀಸರು ಈ ಸಂಬಂಧ ಕಂಗಾಲಾಗಿದ್ದರು. ಪೊಲೀಸ್ ಇಲಾಖೆ ನಿಷ್ಕ್ರಿಯತೆ, ಪೊಲೀಸರು ಉದ್ದೇಶಪೂರ್ವಕವಾಗಿ ಆರೋಪಿಯನ್ನು ರಕ್ಷಿಸುತ್ತಿದ್ದಾರೆ. ಆರೋಪಿಗೆ ರಾಜಕಾರಣಿಗಳ ರಕ್ಷಣೆಯೂ ಇದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಆರೋಪಿ ಬಂಧನಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಸ್ವೀಟಿ ಮರ್ಲಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಭಾರ್ಗವನನ್ನು ಮಡಿಕೇರಿಯಲ್ಲಿ ಬಂಧಿಸಲಾಗಿದೆ. ಆರೋಪಿ ಕಳೆದ 13 ದಿನಗಳಿಂದ ತಲೆ ಮರೆಸಿಕೊಂಡು, ಸ್ನೇಹಿತರ ಜತೆಯಲ್ಲಿದ್ದ ಎಂದು ತಿಳಿಸಿದರು. ಆರೋಪಿ ಬಳಸುತ್ತಿದ್ದ ಟಾಟಾ ಸಫಾರಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಮಣಗುಪ್ತ ಮಾಹಿತಿ ನೀಡಿದರು.
27 ರಂದು ಘಟನೆ: ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ವೀಟಿ ಮರ್ಲಿನ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆಕೆಯ ಪೋಷಕರು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಕ್ಯಾಥೋಲಿಕ್ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದ ಸ್ವೀಟಿ ಮರ್ಲಿನ್ ಹಾಗೂ ಭಾರ್ಗವ ಕಳೆದ 6-7 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆ.ಆರ್. ಬಡಾವಣೆಯಲ್ಲಿ ಕಂಪ್ಯೂಟರ್ ಸೆಂಟರ್ ಇಟ್ಟುಕೊಂಡಿದ್ದ ಸ್ವೀಟಿ ಮರ್ಲಿನ್, ಪ್ರಿಯಕರ ಭಾರ್ಗವನಿಂದ ದೈಹಿಕ, ಮಾನಸಿಕ ಕಿರುಕುಳ ಹಾಗೂ ಪದೇ-ಪದೇ ಹಣ ಪೀಡನೆಗೆ ಒಳಗಾಗಿದ್ದಳು ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಮಾ.27 ರಂದು  ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮರ್ಲಿನ್ ಹೆಸರಿನಲ್ಲಿ ಭಾರ್ಗವ ಅಂದಾಜು 20 ರಿಂದ 23 ಲಕ್ಷ ರು. ವರೆಗೂ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲ ಬಾಧೆ ತಾಳಲಾರದೆ ಸ್ವೀಟಿ ಮರ್ಲಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬ ವರ್ಗ ದೂರಿನಲ್ಲಿ ತಿಳಿಸಿದೆ.
ಮತ್ತೊಂದು ಪ್ರಕರಣ ದಾಖಲು: ಈಗಾಗಲೇ ಆರೋಪಿ ಭಾರ್ಗವನ ವಿರುದ್ಧ ಐಪಿಸಿ ಕಲಂ 504, 506 ಹಾಗೂ 306 ಅಡಿಯಲ್ಲಿ ಕೇಸು ದಾಖಲಾಗಿದೆ. ಜತೆಗೆ ಸ್ವೀಟಿ ಮರ್ಲಿನ್ ಹೆಸರಿನಲ್ಲಿ ಕೆ.ಆರ್. ಬಡಾವಣೆಯ ಮುಖ್ಯರಸ್ತೆಯಲ್ಲಿದ್ದ ಕಂಪ್ಯೂಟರ್ ಸೆಂಟರ್‌ನಲ್ಲಿದ್ದ ಕಂಪ್ಯೂಟರ್‌ಗಳು, ಬ್ಯಾಟರಿಗಳು, ಮತ್ತಿತರೆ ಬೆಲೆ ಬಾಳುವ ವಸ್ತುಗಳನ್ನು ಆರೋಪಿ ಕದ್ದಿರುವುದಾಗಿ ದೂರಿ, ಮರ್ಲಿನ್ ಸಹೋದರ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖಾಧಿಕಾರಿ ಬದಲು: ಆರೋಪಿ ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಆರೋಪಿ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನು ಜಿಲ್ಲಾ ಎಸ್‌ಪಿ  ರಮಣಗುಪ್ತ ಬದಲಿಸಿದ್ದರು. ಪ್ರಕರಣವನ್ನು ತಿಲಕ್‌ಪಾರ್ಕ್ ಠಾಣೆ ಸಿಪಿಐ ಅವರಿಂದ ತುಮಕೂರು ಗ್ರಾಮಾಂತರ ಸಿಪಿಐ ಮರಿಯಪ್ಪ ಅವರಿಗೆ ವಹಿಸಲಾಗಿತ್ತು. ತನಿಖೆ ನೇತೃತ್ವವನ್ನು ಜಿಲ್ಲಾ ಎಸ್‌ಪಿ ರಮಣಗುಪ್ತ ವಹಿಸಿದ್ದರು. ಅಡಿಷನ್ ಎಸ್ಪಿ ಜಗದೀಶ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ವಿ. ಮರಿಯಪ್ಪ, ಪಿಎಸ್‌ಐಗಳಾದ ಅವಿನಾಶ್, ಎ.ವಿ. ಕುಮಾರ್ ಸಿಬ್ಬಂದಿ, ಪಿ.ಸಿ. ಶಾಂತಕುಮಾರ್, ನಾರಾಯಣ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ರು. 5 ಸಾವಿರ ಬಹುಮಾನ
ತುಮಕೂರು: ರಾಜ್ಯದ ಗಮನಸೆಳೆದಿದ್ದ ಸ್ವೀಟಿ ಮರ್ಲಿನ್ ಆತ್ಮಹತ್ಯೆ ಆರೋಪಿ ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮನ್ ಭಾರ್ಗವನನ್ನು ಸೆರೆ ಹಿಡಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ 5 ಸಾವಿರ ರು. ನಗದು ಬಹುಮಾನ ಘೋಷಿಸಿದ್ದಾರೆ. ಪ್ರಕರಣದ ಆರೋಪಿಯನ್ನು ಶೀಘ್ರವಾಗಿ ಬಂಧಿಸಿದ ಹಿನ್ನೆಲೆಯಲ್ಲಿ ಸಿಪಿಐ ಮರಿಯಪ್ಪ ನೇತೃತ್ವದ ಪೊಲೀಸ್ ತಂಡವನ್ನು ಎಸ್‌ಪಿ ರಮಣಗುಪ್ತ ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.