ಸಭೆಗೆ ಅನುಮತಿ ಕಡ್ಡಾಯ
ಕ.ಪ್ರ.ವಾರ್ತ್ಣೆ ತುಮಕೂರು ಏ.25
ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಸಭೆ ಅಥವಾ ಸಮಾರಂಭವನ್ನು ಏರ್ಪಡಿಸಬೇಕಿದ್ದಲ್ಲಿ ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಸಭೆ ಅಥವಾ ಸಮಾರಂಭ ನಡೆಸುವ ಸ್ಥಳ ಮತ್ತು ಸಮಯವನ್ನು ಮುಂಚಿತವಾಗಿ ತಿಳಿಸತಕ್ಕದ್ದು ಎಂದು ಜಿಲ್ಲಾ ಚುನಾವಣಾಧಿಕಾರಿ ಅನುರಾಗ್ ತಿವಾರಿ ಅವರು ತಿಳಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಮೆರವಣಿಗೆ ಸಾಗುವ ಸಂದರ್ಭ ಇತರೆ ರಾಜಕೀಯ ಪಕ್ಷಗಳ ಅಥವಾ ನಾಯಕರ ಪ್ರತಿಕೃತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸುಡುವುದು ಅಥವಾ ಇನ್ನಿತರೆ ಕೃತ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ರೀತಿ ಮುಂಚಿತವಾಗಿ ತಿಳಿಸುವುದರಿಂದ ಟ್ರಾಫಿಕ್ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರಿಗೆ ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಸಭೆ ಅಥವಾ ಸಮಾರಂಭ ನಡೆಸಬೇಕಿರುವ ಸ್ಥಳದಲ್ಲಿ ಯಾವುದಾದರೂ ನಿಷೇದಾಜ್ಞೆ ಅಥವಾ ನಿರ್ಬಂಧ ಜಾರಿಯಲ್ಲಿದ್ದಲ್ಲಿ ಅಂತಹ ಆಜ್ಞೆಗಳಿಗೆ ಅಭ್ಯರ್ಥಿ ಅಥವಾ ಪಕ್ಷಗಳು ಬದ್ಧರಾಗಬೇಕು ಅಥವಾ ವಿನಾಯತಿ ಬೇಕಿದ್ದಲ್ಲಿ ಮುಂಚಿತವಾಗಿ ಅನುಮತಿ ಕೋರಿ ವಿನಾಯತಿಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ನೆರವು: ಯಾವುದೇ ಸಭೆ ಸಮಾರಂಭಕ್ಕೆ ಸಂಬಂಧಿಸಿದಂತೆ ಧ್ವನಿವರ್ಧಕಗಳನ್ನು ಬಳಸಬೇಕಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.
ಸಭೆ ನಡೆಸುವ ಸಂದರ್ಭ ಇತರೆ ಪಕ್ಷಗಳಿಂದ ಅಡಚಣೆಯುಂಟಾಗುವ ಸಂಭವವಿದ್ದಲ್ಲಿ ಪಕ್ಷದ ಸಂಘಟಕರು ಪೊಲೀಸ್ ಅಧಿಕಾರಿಗಳ ನೆರವನ್ನು ಪಡೆಯತಕ್ಕದ್ದು ಎಂದು ಅವರು ತಿಳಿಸಿದ್ದಾರೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರ ಮೆರವಣಿಗೆಯನ್ನು ಹಮ್ಮಿಕೊಳ್ಳಬೇಕಿದ್ದಲ್ಲಿ ಮುಂಚಿತವಾಗಿ ಮೆರವಣಿಗೆ ರೂಟ್ ಮ್ಯಾಪ್ ಮತ್ತು ಸಮಯ, ದಿನಾಂಕವನ್ನು ತಿಳಿಸಿದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರಿ ಪೋಲಿಸರಿಗೆ ಅನುಕೂಲವಾಗಲಿದ್ದು, ಯಾವುದೇ ಕಾರಣಕ್ಕೂ ತಾವು ತಿಳಿಸಿದ ರೂಟ್ ಮ್ಯಾಪ್ನಿಂದ ಬೇರೆ ಮಾರ್ಗಕ್ಕೆ ಮೆರವಣಿಗೆ ಬದಲಾವಣೆಯಾಗಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮೆರವಣಿಗೆ ಸಾಗುವ ಸಂದರ್ಭ ಇತರೆ ರಾಜಕೀಯ ಪಕ್ಷಗಳ ಅಥವಾ ನಾಯಕರ ಪ್ರತಿಕೃತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸುಡುವುದು ಅಥವಾ ಇನ್ನಿತರೆ ಕೃತ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರಸ್ಥಾನ ವಾಸ್ತವ್ಯ ಕಡ್ಡಾಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಗಳ ಸಮರ್ಪಕ ನಿರ್ವಹಣೆ ಮತ್ತು ಮಾದರಿ ನೀತಿ ಸಂಹಿತೆಯ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯವಿರುವುದು ಅತ್ಯಂತ ಅವಶ್ಯಕವಾಗಿದ್ದು, ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಡಬಾರದು ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ತಿಳಿಸಿದ್ದಾರೆ.
ಯಾವುದೇ ರೀತಿಯ ರಜೆಯನ್ನು ಉಪಯೋಗಿಸತಕ್ಕದ್ದಲ್ಲವೆಂದು ಹಾಗೂ ಈ ಸೂಚನೆಯನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆದರೆ ಕೆಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನ ಬಿಡುವುದು ಗಮನಕ್ಕೆ ಬಂದಿದ್ದು, ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಡಬಾರದು ಮತ್ತು ಯಾವುದೇ ರಜೆಯನ್ನು ಉಪಯೋಗಿಸಿಕೊಳ್ಳಬಾರದೆಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

