ತುಮಕೂರು

ಏನಾಗಲಿದೆ ಮಾಜಿ ಸಚಿವರ ಭವಿಷ್ಯ?

Published On :

ಉಗಮ ಶ್ರೀನಿವಾಸ್
ತುಮಕೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ ಕಣದಲ್ಲಿರುವ ಮಾಜಿ ಸಚಿವರ ಭವಿಷ್ಯ ಏನಾಗಲಿದೆ ಎಂಬ ಚರ್ಚೆ ಆರಂಭವಾಗಿದೆ.
ತುಮಕೂರಿನಿಂದ ಸಚಿವ ಸೊಗಡು ಶಿವಣ್ಣ, ಶಿರಾ ಕ್ಷೇತ್ರದಿಂದ ಟಿ.ಬಿ. ಜಯಚಂದ್ರ ಮತ್ತು ಬಿ. ಸತ್ಯನಾರಾಯಣ ಹಾಗೂ ಕುಣಿಗಲ್‌ನಿಂದ ಡಿ. ನಾಗರಾಜಯ್ಯ ಕಣದಲ್ಲಿದ್ದಾರೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಸೊಗಡು ಶಿವಣ್ಣ ಅವರು ಸತತ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈಗ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಧುಮುಕಿದ್ದಾರೆ. ಈ ಹಿಂದೆ ಅವರು ಜೆಡಿಎಸ್
ಮತ್ತು ಬಿಜೆಪಿ ದೋಸ್ತಿ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿದ್ದರು. ಹಾಲಿ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿ ಅವರು ಪರಿಸರ ಸಚಿವರಾಗಿದ್ದಾರೆ. ಒಮ್ಮೆ ಸೋಲನ್ನು ಅನುಭವಿಸಿದ್ದರು. ಆದರೆ ಕಳೆದ ನಾಲ್ಕು ಚುನಾವಣೆಯಲ್ಲಿ ಸತತವಾಗಿ ಆಯ್ಕೆಯಾಗಿರುವ ಹೆಗ್ಗಳಿಕೆಯನ್ನು ಶಿವಣ್ಣ ಹೊಂದಿದ್ದಾರೆ.
ಇನ್ನು ಶಿರಾದಿಂದ ಸ್ಪರ್ಧಿಸಿರುವ ಟಿ.ಬಿ. ಜಯಚಂದ್ರ ಅವರು ಈ ಹಿಂದೆ ಕೃಷ್ಣ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿದ್ದರು. ಈಗ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖಾಮುಖಿ: ಈ ಮೊದಲು ಅವರು ಕಳ್ಳಂಬೆಳ್ಳ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದರು. ಆದರೆ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಅವರು ಶಿರಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಸಾಧಿಸಿದ್ದರು. ಆಗ ಇವರ ಪ್ರತಿಸ್ಪರ್ಧಿ ಬಿ. ಸತ್ಯನಾರಾಯಣ. ಈಗ ಮತ್ತೆ ಇವರಿಬ್ಬರು ಮುಖಾಮುಖಿಯಾಗಿದ್ದಾರೆ.
ಅನುಕಂಪ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಶಿರಾ ಎಂಬ ಬರಡು ಭೂಮಿಗೆ ನೀರಾವರಿ ಯೋಜನೆ ತಂದ ಹೆಗ್ಗಳಿಕೆ ಜಯಚಂದ್ರ ಅವರದ್ದು. ಇದು ಈ ಬಾರಿ ಅವರಿಗೆ ನೆರವಿಗೆ ಬರಬಹುದು. ಆದರೆ ಬಿ. ಸತ್ಯನಾರಾಯಣ ಅವರಿಗೆ ಅನುಕಂಪ ಇದೆ. ಜತಗೆ ಕಳೆದ ಜಿ.ಪಂ. ಕ್ಷೇತ್ರದಲ್ಲಿ ಒಂದು ಕ್ಷೇತ್ರ ಬಿಟ್ಟು ಮಿಕ್ಕೆಲ್ಲಾ ಕ್ಷೇತ್ರವನ್ನು ಜೆಡಿಎಸ್ ಜಯಸಾಧಿಸಿದೆ. ಇದು ಕೂಡ ಬಿ. ಸತ್ಯನಾರಾಯಣ್‌ಗೆ ನೆರವಾಗಲಿದೆ. ಆದರೂ ಇವರಿಬ್ಬರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಇನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸೊಗಡು ಶಿವಣ್ಣ ಅವರು ಈ ಬಾರಿ ಕಾಂಗ್ರೆಸ್, ಜೆಡಿಎಸ್ ಮತ್ತು ಕೆಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ಜೆಡಿಎಸ್‌ನಿಂದ ಗೋವಿಂದರಾಜು, ಕಾಂಗ್ರೆಸ್‌ನಿಂದ ರಫೀಕ್ ಅಹಮದ್ ಹಾಗೂ ಕೆಜೆಪಿಯಿಂದ ಸಂಸದ ಬಸವರಾಜು ಪುತ್ರ ಜ್ಯೋತಿ ಗಣೇಶ್ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೊಗಡು ಜಯಸಾಧಿಸಿದ್ದು ಕೇವಲ 1900 ಮತಗಳ ಅಂತರದಿಂದ ಮಾತ್ರ. ಆದರೆ ಈ ಭಾರಿ ವೀರಶೈವ ಸಮುದಾಯಕ್ಕೆ ಸೇರಿರುವ ಜ್ಯೋತಿ ಗಣೇಶ್ ಸ್ಪರ್ಧಿಸಿರುವುದು ಓಟ್ ಬ್ಯಾಂಕ್ ಛಿದ್ರವಾಗಲಿದೆ. ಹಾಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಇನ್ನು ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಡಿ. ನಾಗರಾಜಯ್ಯ ಸ್ಪರ್ಧಿಸಿದ್ದಾರೆ. ಇವರು ಕೂಡ ಈ ಹಿಂದೆ ಸಚಿವರಾಗಿದ್ದರು. ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಈ ಬಾರಿ ಟಿಕೆಟ್ ನೀಡುವ ವಿಚಾರವಾಗಿ ಗೊಂದಲ ಉಂಟಾಗಿ ಕಡೆಗೂ ಇವರಿಗೆ ಟಿಕೆಟ್ ಸಿಕ್ಕಿತ್ತು. ಕಳೆದ ಬಾರಿ ಕುಣಿಗಲ್‌ನಿಂದ ರಾಮಸ್ವಾಮಿಗೌಡ ಅವರು ಆಯ್ಕೆಯಾಗಿದ್ದರು. ಕಳೆದ ಬಾರಿ ಇವರ ಸೋಲಿಗೆ ಇವರ ಸಹೋದರನೇ ಕಾರಣವಾಗಿದ್ದರು. ಕಾರಣ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಬಾರಿಯೂ ಕೂಡ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಸಹೋದರರ ಸವಾಲ್ ನಡೆದಿದೆ. ಈ ಬಾರಿ ಗೆದ್ದೇ ತೀರುತ್ತೇನೆಂಬ ಹುಮ್ಮಸ್ಸಿನಲ್ಲಿರುವ ಡಿ. ನಾಗರಾಜಯ್ಯ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅವರ ಸಹೋದರನೇ ಮುಳುವಾಗಿದ್ದಾರೆ.
ಒಟ್ಟಾರೆಯಾಗಿ ಈ ಬಾರಿ ಮಾಜಿ ಸಚಿವರ ಕಣದಿಂದ ಒಂದಷ್ಟು ಕಳೆ ಬಂದಿರುವುದಂತೂ ನಿಜ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದು ಮೇ 5 ರಂದು ನಿರ್ಧಾರವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.