ತುಮಕೂರು

ಪ್ರತಿ ಕ್ಷೇತ್ರಕ್ಕೆ 2 ಕೋಟಿ ಬೆಳೆ ಪರಿಹಾರ ನೀಡಿ

Published On :

ಕ.ಪ್ರ.ವಾರ್ತೆ ಹಾಸನ ಆ.1
ಅತಿವೃಷ್ಟಿಯಿಂದಾಗಿ ಆಲೂಗೆಡ್ಡೆ ಸೇರಿದಂತೆ ನಾನಾ ಬೆಳೆಗಳು ನಾಶವಾಗಿದ್ದು, ಕೂಡಲೇ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ಕೋಟಿ ಬೆಳೆ ಪರಿಹಾರ ನೀಡಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯು ಹೆಚ್ಚಾಗಿದ್ದು, ಪ್ರವಾಹದ ಭೀತಿ ಆರಂಭವಾಗಿದೆ. ಅತೀ ಮಳೆಯಿಂದ ಆಲೂಗೆಡ್ಡೆ, ಜೋಳ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಅಲ್ಲದೆ ರಸ್ತೆಗಳು, ಸೇತುವೆಗಳು ಹಾಳಾಗಿರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳಿಂದ ಪರಿಶೀಲಿಸಿ ಆಗಿರುವಂತಹ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿಯನ್ನು ನೀಡಿ, ಪರಿಹಾರ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದರು.
ಕಳೆದ ನಾಲ್ಕೈದು ವರ್ಷಗಳಿಂದ ಆಲೂಗೆಡ್ಡೆ ಬೆಳೆಗೆ ಅಂಗಮಾರಿ ರೋಗ ಆವರಿಸಿ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಅತೀಯಾದ ಮಳೆಯಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ಸರ್ಕಾರ ಇತ್ತ ಗಮನವಹಿಸಿ ತಲಾ ಕ್ಷೇತ್ರಕ್ಕೆ 2 ಕೋಟಿ ರು.ನಂತೆ ನೀಡಬೇಕು ಎಂದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಆಲೂ ಬೆಳೆಯಿಂದ ಸುಮಾರು 300 ರಿಂದ 400 ಕೋಟಿ ರು.ಗಳ ನಷ್ಟವನ್ನು ರೈತರು ಅನುಭವಿಸಿದ್ದು, ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಹೇಳಿದರು.
ತೆಂಗು ಬೆಳೆಗೆ ಪರಿಹಾರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರೈತರ ಮೇಲಿನ ಕಾಳಿಜಿಗೆ ಮಣಿದು ಕೇಂದ್ರ ತಂಡ ಜಿಲ್ಲೆಗೆ ಆಗಮಿಸಿ ತೆಂಗು ಬೆಳೆ ನಾಶವಾಗಿರುವುದನ್ನು ಕಣ್ಣಾರೆ ಕಂಡಿದ್ದಾರೆ. ಈ ಬಗ್ಗೆ ವಿಧಾನಸಭೆಯ ಅಧಿವೇಶದಲ್ಲಿ ಚರ್ಚೆ ಆಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸಕಲೇಶಪುರ, ಕೊಡಗು, ಚಿಕ್ಕಮಗಳೂರಿನಲ್ಲಿ ಏಲಕ್ಕಿ ಬೆಳೆಗಾರರ ಸಾಲವನ್ನು ಸಹ ಮನ್ನ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದರು.
ಖಾಲಿ ಹುದ್ದೆ ಭರ್ತಿಗೆ ಆಗ್ರಹ: ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತಹ ಶೇ.50ರಷ್ಟು ಹುದ್ದೆಗಳಿಗೆ ಸರ್ಕಾರ ನೇಮಕಾತಿಯನ್ನು ಮಾಡಬೇಕು. ಅಲ್ಲದೆ ತೋಟಗಾರಿಯಲ್ಲಿಯೂ ಸಹ ಸಹಾಯಕ ಅಧಿಕಾರಿಗಳ ಹುದ್ದೆಗಳು ಖಾಲಿ ಉಳಿದಿದ್ದು, ಕೂಡಲೇ ಅದನ್ನು ಸಹ ಭರ್ತಿ ಮಾಡುವಂತ ಕಾರ್ಯ ಮಾಡಬೇಕು ಎಂದ ಅವರು, ಪಶು ವೈದ್ಯಕೀಯ ಕಾಲೇಜಿಗೆ ಸೌಲಭ್ಯ ಒದಗಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದು, ವಿದ್ಯಾರ್ಥಿಗಳು ಭಯ ಪಡುವಂತಹ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಹೊಸ ಕೋರ್ಸ್ ಅಳವಡಿಕೆ: ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದಿಂದಲೇ ಎಂಕಾಂ, ಎಂಎ (ಅರ್ಥಶಾಸ್ತ್ರ, ಇತಿಹಾಸ) ಮತ್ತು ಎಂ.ಎಸ್.ಡಬ್ಲ್ಯೂ ಹೊಸ ಸ್ನಾತಕೋತ್ತರ ಕೋರ್ಸ್‌ಗಳನ್ನು ತಲಾ 40 ವಿದ್ಯಾರ್ಥಿ ಪ್ರಮಾಣದೊಂದಿಗೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್.ಪ್ರಕಾಶ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.