ತುಮಕೂರು

ಗುಣಾತ್ಮಕ ಶಿಕ್ಷಣ ಬೋಧಿಸಿ

Published On :

ಕ.ಪ್ರ.ವಾರ್ತೆ  ಕೊರಟಗೆರೆ  ಆ.11
ಶಿಕ್ಷಕರು ಜಾತಿ ಆಧಾರದ ಮೇಲೆ ಪಾಠ ಮಾಡದೆ ಜಾತ್ಯತೀತ ಮನೋಭಾವದಿಂದ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಬೋಧಿಸಿದಾಗ ಮಾತ್ರ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಸಂಸದ  ಜಿ.ಎಸ್.ಬಸವರಾಜು ತಿಳಿಸಿದರು.
ಅವರು ತಾಲೂಕಿನ ಸಿದ್ದರಬೆಟ್ಟದ ಶ್ರೀರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಕೊರಟಗೆರೆ ತಾಲೂಕು ವೀರಶೈವ ಲಿಂಗಾಯಿತ ನೌಕರರ ಸಮಾವೇಶ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಪ್ರಗತಿಯ ಜತೆಗೆ ಸಾಮಾಜಿಕ ಬದುಕಿನ ಪರಿಕಲ್ಪನೆಗಳ ಬಗ್ಗೆ ವಿಶೇಷ ಗಮನ ಹರಿಸುವ ಮೂಲಕ ಆರೋಗ್ಯಕರ ಚಿಂತನೆ ನಡೆಸಬೇಕೆಂದು ತಿಳಿಸಿದರು.
ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀಗಳು ಆಧ್ಯಾತ್ಮಿಕ ಚಿಂತನೆಯೊಂದಿಗೆ ಗಿಡಮೂಲಿಕೆಗಳ ತಾಣವಾದ ಸಿದ್ದರಬೆಟ್ಟದಲ್ಲಿ ದೊರೆಯುವ ಔಷಧ ಸಸ್ಯಗಳ ಮೂಲಕ ಮುಂದಿನ ದಿನಗಳಲ್ಲಿ ಆಯುರ್ವೇದ ಔಷಧ ತಯಾರಿಕಾ ತಾಣ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರೊಂದಿಗೆ ಆಂಧ್ರಪ್ರದೇಶ ಮತ್ತು ನಾಗಾಲ್ಯಾಂಡ್ ಸೇರಿದಂತೆ ರಾಜ್ಯದ 120 ವಿದ್ಯಾರ್ಥಿಗಳಿಗೆ ಮಠದಲ್ಲಿ ಆಶ್ರಯದೊಂದಿಗೆ ವಿದ್ಯಾಭ್ಯಾಸ ನೀಡಿ ಶೈಕ್ಷಣಿಕ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿಷಯಗಳನ್ನು ಅಭ್ಯಾಸಮಾಡುವ ಏಕಾಕ್ರತೆಯ ಜೊತೆಗೆ ಸಾಧಿಸುವ ಛಲ ಇರಬೇಕು ಹಾಗೂ ವಿಷಯಾನುಸಾರ ವಿದ್ಯಾರ್ಥಿಗಳು ಅನ್ವೇಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದುರು.
ಸಾನ್ನಿದ್ಯ ವಹಿಸಿದ್ದ ಚಿಕ್ಕತೊಟ್ಲುಕೆರೆ ಅಟವಿ ಸುಕ್ಷೇತ್ರದ ಅಟವಿ ಶಿವಲಿಂಗಮಹಾಸ್ವಾಮೀಜಿಗಳು ಮಾತನಾಡಿ ವಿದ್ಯಾರ್ಥಿಗಳಲ್ಲಿ ಜ್ಞಾನದ ಜತೆಗೆ ಸಚ್ಚಾರಿತ್ರ್ಯ ಹಾಗೂ ಉತ್ತಮವಾದ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ವಿದ್ಯಾರ್ಥಿಗಳಿಂದ ಮಾತ್ರ ಸುಭದ್ರ ಹಾಗೂ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಇದೇ ವೇದಿಕೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಎಸ್. ಅಂಜಿನಪ್ಪ ಸನ್ಮಾನಿಸಿ ಮಾತನಾಡಿದರು.
ತಾಲೂಕು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಸ್. ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಡಿಡಿಪಿಐ ಅಂಜಿನಪ್ಪ, ತುಮಕೂರು ಡಯಟ್‌ನ ಉಪನಿರ್ದೇಶಕ ಈಶ್ವರಯ್ಯ, ಬಿಇಓ ಐ.ಎಸ್.ಮಹೇಶ್, ರಾಜಶೇಖರ್, ತುಮಕೂರು ರೋಟರಿ ಅಧ್ಯಕ್ಷ ಟಿ.ಕೆ.ಹೆಚ್. ಪ್ರಕಾಶ್, ರಾಜ್ಯ ಸಂಘದ ಅಧ್ಯಕ್ಷ ಬಸವಲಿಂಗಯ್ಯ, ಟಿ.ಕೆ.ಸೋಮಶೇಖರ್, ಎಂ.ಬಿ.ಶಿವಶಂಕರಪ್ಪ, ಎಲ್. ರಾಜಣ್ಣ, ವೈ.ಸಿ.ವಿ.ಸ್ವಾಮಿ, ಎಂ. ರಾಜಶೇಖರ್, ಗಂಗಮ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.