ಅಂತೂ ಬಾಯ್ಬಿಟ್ಟ ಸಚಿವ ಜಯಚಂದ್ರ
ಕ.ಪ್ರ.ವಾರ್ತೆ ತುಮಕೂರು ಆ. 15
9 ಜಿಲ್ಲೆಗಳ ಕುಡಿಯುವ ನೀರಿಗೆ ಸಂಬಂಧಿಸಿದ ಜಿ.ಎಸ್. ಪರಮಶಿವಯ್ಯ ವರದಿ ಜಾರಿ ಕುರಿತಂತೆ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಬಾಯ್ಬಿಟ್ಟಿದ್ದಾರೆ.
ಅವರು ತುಮಕೂರು ಜಿಲ್ಲಾಡಳಿತದ ವತಿಯಿಂದ ಏರ್ಪಾಟಾಗಿದ್ದ 67 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಂದೇಶ ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದರು.
ಎತ್ತಿನಹೊಳೆ ಯೋಜನೆಯನ್ನು ಬಲವಾಗಿ ಸಮರ್ಥಿಸುತ್ತಲೇ, ಪರಮಶಿವಯ್ಯ ವರದಿ ಜಾರಿ ಕುರಿತು ನಿರುತ್ಸಾಹ, ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದ್ದ ಜಯಚಂದ್ರ ಪರಮಶಿವಯ್ಯ ವರದಿ ಕುರಿತಂತೆ ಇದೇ ಮೊದಲ ಬಾರಿಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ಜಿಲ್ಲೆ ಬರಪೀಡಿತ ಪ್ರದೇಶವಾಗಿದೆ. ಹೇಮಾವತಿ ನೀರೇ ಜಿಲ್ಲೆಗೆ ಆಧಾರವಾಗಿದೆ. ಮಳೆಗಾಲದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಕುರಿತಂತೆ ಇರುವ ಪರಮಶಿವಯ್ಯ ವರದಿ ಜಾರಿಯಿಂದ ಜಿಲ್ಲೆ ಹಾಗೂ 9 ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ಕುರಿತು ಸರ್ಕಾರದ ಮುಂದೆ ಪ್ರಸ್ತಾಪವಿದೆ. ಜತೆಗೆ ಎತ್ತಿನ ಹೊಳೆ ಯೋಜನೆ ಜಾರಿ, ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗಿದೆ. ಒಟ್ಟಾರೆ ನೀರಾವರಿ, ಕುಡಿಯುವ ನೀರಿನ ಯೋಜನೆ ಜಾರಿ ಕುರಿತಂತೆ ಸಹ ಸರ್ಕಾರ ಸಕಾರಾತ್ಮಕವಾಗಿದೆ ಎಂದು ತಿಳಿಸಿದರು.
ಆಶೀರ್ವಾದ ಮಾಡಿದ ಜನತೆಗೆ ದ್ರೋಹ ಬಗೆಯದೆ, ಅಭಿವೃದ್ಧಿಗೆ ಶ್ರಮಿಸುವುದು ಸರ್ಕಾರದ ಆಶಯವಾಗಿದೆ. ಎಲ್ಲ ಜಾತಿ, ಧರ್ಮಗಳನ್ನು ಮೀರಿ, ಸಾಂಸ್ಕೃತಿಕವಾಗಿ ಒಗ್ಗೂಡೋಣ. ಅಭಿವೃದ್ಧಿಯ ಕಡೆ ಸಾಗೋಣ ಎಂದು ಸಚಿವರು ಕರೆ ನೀಡಿದರು.
ರೈತನ ಜೀವನ ಛಿದ್ರ: ರೈತರ ಕನಸು ಹಾಗೂ ಜೀವನ :ನಿದ್ರಗೊಂಡಿದೆ. ರೈತನ ಬದುಕನ್ನು ಹಸನಾಗಿಸುವುದು ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿದೆ. ರೈತ ನೆಮ್ಮದಿಯಿಂದ ಬದುಕನ್ನು ಸಾಗಿಸಲು ಆಡಳಿತ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ಆಡಳಿತಕ್ಕೆ ಅರ್ಥವಿಲ್ಲ. ಸಾರ್ಥಕತೆಯೂ ಇಲ್ಲ. ಎಲ್ಲ ವರ್ಗದ ಜನತೆ ನೆಮ್ಮದಿಯಿಂದ ಬದುಕಬೇಕಾದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ ಎಂದು ಸಚಿವ ಜಯಚಂದ್ರ ಅಭಿಪ್ರಾಯಪಟ್ಟರು.
ಬಡವರು ಸವಲತ್ತುಗಳಿಂದ ವಂಚಿತ: ಬಡಜನತೆ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಬಡತನ, ಹಸಿವು, ನಿರುದ್ಯೋಗ ಪ್ರಮುಖ ಸಮಸ್ಯೆಗಳಾಗಿವೆ. ಸರ್ಕಾರ ವಿಶೇಷ ಗಮನ ಹರಿಸಲಿದೆ. ಈ ಹಿನ್ನೆಲೆಯಲ್ಲಿ ಆಹಾರಭದ್ರತಾ ಕಾಯ್ದೆ, ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕದ ಎಲ್ಲ ವರ್ಗದ ಜನತೆಯ ಬದುಕು ಹಸನಾಗಬೇಕಾದಲ್ಲಿ ಶಾಂತಿ, ಸೌಹಾರ್ಧತೆಯ ಬದುಕು ಅತ್ಯಗತ್ಯವಾಗಿದೆ. ಈ ವಾತಾವರಣವನ್ನು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಭಿವೃದ್ಧಿಗೆ ಅರ್ಥ ಬರಬೇಕಾದಲ್ಲಿ ಮತ್ತು ನಾಗರಿಕತೆ ಮುಂದುವರೆಯಬೇಕಾದಲ್ಲಿ ಸಹಬಾಳ್ವೆಯ ಅಗತ್ಯವಿದೆ. ಸ್ವಾತಂತ್ರ್ಯ ಉಳಿಸಿಕೊಳ್ಳಲು ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು. ಹಸಿವು, ನಿರುದ್ಯೋಗ, ಬಡತನಗಳ ದವಡೆಯಿಂದ ಜನತೆಯನ್ನು ಪಾರು ಮಾಡದಿದ್ದಲ್ಲಿ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಅರ್ಥಬರುವುದಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಎಸ್ಪಿ ರಮಣಗುಪ್ತ, ಸಂಸದ ಜಿ.ಎಸ್. ಬಸವರಾಜ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಶಾಸಕ ಡಾ. ರಫೀಕ್ ಅಹಮದ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

