ತುಮಕೂರು

ತೂಕ ಲೋಪ: ಬಗೆಹರಿದ ಬಿಕ್ಕಟ್ಟು

Published On :

ಕ.ಪ್ರ.ವಾರ್ತೆ , ತುರುವೇಕೆರೆ , ಆ. 21
ತಾಲೂಕಿನ ನ್ಯಾಯ ಬೆಲೆ ಅಂಗಡಿಗಳಿಗೇ ನೀಡಬೇಕಿದ್ದ ಸಗಟು ಅಕ್ಕಿ ವಿತರಣೆಯಲ್ಲಿ ತೂಕ ಲೋಪವಾಗುತ್ತಿದ್ದುದನ್ನು ಖಂಡಿಸಿ ಪಡಿತರ ವಿತರಕರು ನ್ಯಾಯಬೆಲೆ ಅಂಗಡಿಗಳಿಗೆ ಗೋಡೋನಿನಿಂದ ಪಡಿತರ ವಸ್ತುಗಳನ್ನು ವಿಲೇವಾರಿ ಮಾಡಲು ಹಿಂದೇಟು ಹಾಕಿದ್ದ ಪ್ರಕರಣ ಬಗೆಹರಿದಿದೆ.
ತಾಲೂಕಿನ 78 ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳ 20 ರೊಳಗೆ ಅಕ್ಕಿ, ಗೋದಿ ಹಾಗೂ ಸಕ್ಕರೆಯನ್ನು ವಿತರಣೆ ಮಾಡಬೇಕಿದೆ. ಗೋಡೋನ್ ನಿಂದ ಪ್ರತಿ ಕ್ವಿಂಟಾಲ್ ಅಕ್ಕಿ ನೀಡುವ ವೇಳೆ ಗೋಣಿ ಚೀಲದ ಸಹಿತ ನೂರು ಕೆಜಿ ನೀಡುತ್ತಿದ್ದರು. ಆದರೆ ಗೋಣಿ ಚೀಲವೇ ಕನಿಷ್ಟವೆಂದರೂ 1300 ಗ್ರಾಂ ತೂಕ ಬರಲಿದ್ದು ಸಾರ್ವಜನಿಕರಿಗೆ ತಾವು ಅಕ್ಕಿ ನೀಡುವಾಗ ಅಕ್ಕಿ ಕಡಿಮೆ ಬರುವುದರಿಂದ ವಿತರಕರಿಗೂ ಅಕ್ಕಿಯನ್ನು ಸರಿಯಾದ ಪ್ರಮಾಣದಲ್ಲೇ ನೀಡಬೇಕು ಎಂದು ತಾಲ್ಲೂಕು ಪಡಿತರ ವಿತರಕರು ಕಳೆದ 20 ರ ತನಕ ತಮ್ಮ ಗ್ರಾಹಕರಿಗೆ ನೀಡಬೇಕಿದ್ದ ಪಡಿತರ ಧಾನ್ಯಗಳನ್ನು ಗೋಡೋನಿನಿಂದ ಹೊರತೆಗೆದುಕೊಂಡು ಹೋಗದೆ ಸುಮ್ಮನಿದ್ದರು.
ಪಡಿತರದಾರರಿಗೆ ಅಕ್ಕಿ ವಿತರಣೆ ಮಾಡಲು ಪಡಿತರ ವಿತರಕರು ತಯಾರಾಗಿಲ್ಲ ಎಂಬ ಸುದ್ದಿ ತಿಳಿದ ಜಿಲ್ಲಾ ಸಹಾಯಕ ನಿರ್ದೇಶಕ ರಾಮಪ್ಪ, ಜಿಲ್ಲಾ ದಾಸ್ತಾನು ವ್ಯವಸ್ಥಾಪಕ ನರಸಿಂಹಯ್ಯ ಹಾಗೂ ತಾಲ್ಲೂಕು ಆಹಾರ ಅಧೀಕ್ಷಕರಾದ ಶಿವಶಂಕರ್ ರವರು ಸ್ಥಳಕ್ಕೆ ಭೇಟಿ ನೀಡಿದ್ದರು. ಆ ವೇಳೆ ಹಾಜರಿದ್ದ ತಾಲ್ಲೂಕಿನ ಹಲವಾರು ಪಡಿತರ ವಿತರಕರು ತಮಗೆ ಸೂಕ್ತವಾದ ತೂಕದಲ್ಲಿ ಅಕ್ಕಿ ಬಿಡುಗಡೆ ಮಾಡಿದರೆ ಮಾತ್ರ ತಾವು ದಾಸ್ತಾನು ಕೇಂದ್ರದಿಂದ ಪಡಿತರ ವಸ್ತುಗಳನ್ನು ರವಾನೆ ಮಾಡುವುದಾಗಿ ಹೇಳಿದರು.  ಜಿಲ್ಲಾ ಕೇಂದ್ರೀಯ ಬ್ಯಾಂಕ್‌ನ ನಿರ್ದೇಶಕ ಬಿ.ಎಸ್.ದೇವರಾಜು ಗೋದಾಮು ಕೇಂದ್ರಕ್ಕೆ ಭೇಟಿ ನೀಡಿ ಗೋಡೋನಿನಿಂದ ಸರಬರಾಜು ಆಗುತ್ತಿರುವ ವಸ್ತುಗಳ ತೂಕದಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಅಧಿಕಾರಿಗಳು ಕ್ವಿಂಟಾಲ್ ಅಕ್ಕಿಯೊಂದಿಗೆ 1300 ಗ್ರಾಂ ಅಕ್ಕಿಯನ್ನು ವಿಲೇವಾರಿ ಮಾಡುವುದಾಗಿ ಹೇಳುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಲಾಯಿತು.  ಪಡಿತರ ವಿತರಕರ ಸಂಘದ ಕಾರ್ಯದರ್ಶಿ ಕಾಂತರಾಜು, ಬಿಗನೇನಹಳ್ಳಿ ರವಿಕುಮಾರ್, ಕಿರಣ್ ಕುಮಾರ್, ರಮೇಶ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.