ತುಮಕೂರು

ಕೋಳಿಗೆ ತಿಥಿ ಭಾಗ್ಯ!

Published On :

ಕ.ಪ್ರ.ವಾರ್ತೆ ,  ತುರುವೇಕೆರೆ ,  ಆ. 23
ನೆಚ್ಚಿನ ಸಾಕು ಪ್ರಾಣಿಗಳು ಸತ್ತಾಗ ಅದರ ಮಾಲೀಕರಿಗೆ ದುಃಖವಾಗುವುದು ಸಹಜ. ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಂತೆಯೇ ಪರಿತಪಿಸುತ್ತಾರೆ. ಆದರೆ, ಇಲ್ಲೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನೆಚ್ಚಿನ ಕೋಳಿಯೊಂದಕ್ಕೆ ಸಂಪ್ರದಾಯದಂತೆ ಸಂಸ್ಕಾರ ಮಾಡಿ, ನೂರಾರು ಮಂದಿಗೆ ಪಾನಕ ಹಾಗೂ ಕೇಸರಿಬಾತ್ ಸಂತರ್ಪಣೆ ಮಾಡಿದ್ದಾರೆ!
ಪಟ್ಟಣದ ವೆಂಕಟೇಶ್ ಎಂಬ ಕೋಳಿ ವ್ಯಾಪಾರಿಯೊಬ್ಬರಿಗೆ ಕೋಳಿಯ ಗೇಜ್‌ನಲ್ಲಿ ನಾಲ್ಕು ಕಾಲುಗಳ ಕೋಳಿಯೊಂದು ಸಿಕ್ಕಿತ್ತು. ಇದನ್ನು ಅದೃಷ್ಟವೆಂದೇ ಭಾವಿಸಿದ್ದ ಅವರು ಆ ಕೋಳಿಗೆ 'ಮಹಾಲಕ್ಷ್ಮಿ' ಎಂದು ನಾಮಕರಣ ಮಾಡಿ ಜತನದಿಂದ ಕಾಪಾಡಿಕೊಂಡಿದ್ದರು.
'ಬಂಗಾರದ ಮೊಟ್ಟೆಯಿಡುವ ಕೋಳಿ'ಯಂತೆ ಮಹಾಲಕ್ಷ್ಮಿ ಇವರಿಗೆ ಸಿಕ್ಕಿದಾಗಿನಿಂದ ಅವರ ವ್ಯವಹಾರ ದುಪ್ಪಟ್ಟಾಗಿ ಮಾನಸಿಕ ನೆಮ್ಮದಿ ದೊರಕಿತ್ತು. ಅದಕ್ಕಾಗಿಯೇ ಕೋಳಿಯನ್ನು ವಿಶೇಷವಾಗಿ ಸತ್ಕರಿಸುತ್ತಿದ್ದರು. ವಾರಕ್ಕೆರಡು ಮೂರು ಬಾರಿ ಶ್ಯಾಂಪುವಿನಿಂದ ಸ್ನಾನ ಮಾಡಿಸಿ ಶುಚಿಗೊಳಿಸುತ್ತಿದ್ದರು.
ಈ ಅದೃಷ್ಟ ಲಕ್ಷ್ಮಿಯನ್ನು ಸಾವಿರಾರು ರುಪಾಯಿ ಕೊಟ್ಟು ಕೊಂಡು ಕೊಳ್ಳಲು ಗಿರಾಕಿಗಳು ಬಂದಿದ್ದರು. ಈ ಕೋಳಿಯ ಜನಪ್ರಿಯತೆಯನ್ನು ಮಾಧ್ಯಮದ ಮೂಲಕ ತಿಳಿದ ಕೋಳಿಯ ಸಗಟು ಮಾರಾಟಗಾರರೊಬ್ಬರು 1 ಲಕ್ಷ ನೀಡಿ ಕೊಳ್ಳುವುದಾಗಿ ಹೇಳಿದ್ದರಂತೆ. ಆದರೂ, ವೆಂಕಟೇಶ್ ಇದನ್ನು ಯಾರಿಗೂ ನೀಡಲು ಮುಂದಾಗಿರಲಿಲ್ಲ.
ಮರೆಯಾಯಿತು ಅದೃಷ್ಟ: ಆದರೆ, ಈ 4 ಕಾಲಿನ 'ಅದೃಷ್ಟ'ದ ಕೋಳಿ ಕಳೆದೆರಡು ದಿನಗಳ ಹಿಂದೆ ಕೊನೆಯುಸಿರೆಳೆಯಿತು. ಇದರಿಂದ ಆಘಾತಗೊಂಡ ವೆಂಕಟೇಶ್ ತಮ್ಮ ಅಂಗಡಿ ಮುಂಭಾಗ ಇರುವ ಅರಳಿ ಮರದ ಕೆಳಗೆ ಗುಂಡಿಯನ್ನು ತೋಡಿ ವಿಭೂತಿ ಕಟ್ಟು, ಬಿಳಿ ಹಾಗೂ ಕೆಂಪು ವಸ್ತ್ರ, ಅರಿಶಿನ ಕುಂಕುಮ, ಇನ್ನಿತರೆ ಪೂಜಾ ವಸ್ತುಗಳನ್ನು ಗುಂಡಿಯಲ್ಲಿಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದರು.
ಕೋಳಿ ಮೃತಪಟ್ಟು ಮೂರನೇ ದಿನವಾದ ಶುಕ್ರವಾರ ವೆಂಕಟೇಶ್ ತಮ್ಮ ಅಂಗಡಿಯನ್ನು ಶುದ್ಧಗೊಳಿಸಿ, ಕುಟುಂಬದ ಸದಸ್ಯರು ಹಾಗೂ ತಮ್ಮ ಅಂಗಡಿಯ ಕೆಲಸಗಾರರನ್ನು ಶುಚಿಭೂತರನ್ನಾಗಿ ಮಾಡಿಸಿದ್ದರು. ಹೂಳಲಾದ ಕೋಳಿ ಸಮಾಧಿಗೆ ಹಸಿರು ಚಪ್ಪರ ಹಾಕಿಸಿದ್ದರು. ಸಮಾಧಿ ಬಳಿಯೇ ಶಾಮಿಯಾನವನ್ನೂ ಹಾಕಿಸಿದ್ದರು. ಎಲೆ ಅಡಕೆ, ಹೂವು-ಹಣ್ಣು, ಪಾನಕ, ಕೇಸರಿಬಾತ್, ದಕ್ಷಿಣೆ ಮೊದಲಾದ ಪೂಜಾ ಸಾಮಗ್ರಿಗಳನ್ನು ಇಟ್ಟು ಮನೆ ಮಂದಿಯೆಲ್ಲಾ ಪೂಜೆ ನೆರವೇರಿಸಿದರು.
ಕೋಳಿಯ ಉತ್ತರ ಕ್ರಿಯಾದಿಗೆ ಬಂದಿದ್ದ ನೂರಾರು ಮಂದಿ ಸಮಾಧಿಗೆ ನಮಸ್ಕರಿಸಿದರು. ಬಂದವರಿಗೆ ಪಾನಕ ಹಾಗೂ ಕೇಸರಿಬಾತ್ ವಿತರಿಸಿ ಕೋಳಿಯ ಆತ್ಮಕ್ಕೆ ವೆಂಕಟೇಶ್ ಶಾಂತಿ ಕೋರಿ ತಮ್ಮ ಪ್ರೀತಿ ವಾತ್ಸಲ್ಯ ಮೆರೆದರು.

-ಎಸ್.ನಾಗಭೂಷಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.