ತುಮಕೂರು

ವಂಚನೆ: ವ್ಯಕ್ತಿಗೆ ಗೂಸಾ

Published On :

ಅರಸೀಕೆರೆ: ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರನ್ನು ವಂಚಿಸಿ ಉಚಿತ ಉದ್ಯೋಗ ನೋಂದಣಿ ಸಹಾಯವಾಣಿ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಲು ಮುಂದಾಗಿದ್ದ ಬೆಂಗಳೂರಿನ ಕೃಷಿ ಫೌಂಡೇಷನ್‌ವೊಂದರ ವ್ಯಕ್ತಿಯೊಬ್ಬನಿಗೆ ನಿರುದ್ಯೋಗಿಗಳೇ ಗೂಸಾ ಕೊಟ್ಟ ಪ್ರಸಂಗ ಸೋಮವಾರ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿದೆ. ಆ.3ರಂದು ಪಟ್ಟಣದ ಹಳೆಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಜೆ.ಬಿ.ಡಿ. ಕೃಷಿ ಫೌಂಡೇಷನ್ ಹೆಸರಿನ ಪದಾಧಿಕಾರಿಗಳು ಉದ್ಯೋಗ ನೀಡುವುದಾಗಿ ಅರ್ಜಿ ವಿತರಿಸಿ ನಂತರ ದೂರವಾಣಿ ಮೂಲಕ ಆಸಕ್ತ ಅಭ್ಯರ್ಥಿಗಳನ್ನು ಸಂಪರ್ಕಿಸಿ ಉದ್ಯೋಗ ನೀಡಲು ಪರೀಕ್ಷೆ ಹಾಗೂ ಇನ್ನಿತರೆ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಲ್ಲದೆ ಬೆಂಗಳೂರಿಗೆ ಕರೆದೊಯ್ದು ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ.  ಸೋಮವಾರ ಒಂದೆಡೆ ಸೇರಿದ ಯುವಕ-ಯುವತಿಯರು ಸಂಸ್ಥೆಯ ಶಿವಾನಂದ್ ಹಾಗೂ ವಿಠಲ್ ಎಂಬುವರನ್ನು ಭೇಟಿ ಮಾಡಿ ಅಗತ್ಯ ದಾಖಲೆ ನೀಡಿದ್ದಾರೆ. ಆದರೆ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಡಿದು ಶಾಸಕರಿಗೆ ಒಪ್ಪಿಸಿದರು. ಸಮಸ್ಯೆಯ ಆಳ ಅರಿತ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಥಳಕ್ಕಾಗಮಿಸಿ ಕಂಪನಿಯ ದಾಖಲೆಗಳನ್ನು ಪ್ರದರ್ಶಿಸುವಂತೆ ಸೂಚಿಸಿದ ವೇಳೆ ಪದಾಧಿಕಾರಿಗಳು ತಬ್ಬಿಬ್ಬಾದರು. ಇದರಿಂದ ಸಿಟ್ಟಿಗೆದ್ದ ಶಾಸಕರು ಬಡವರು, ಅಮಾಯಕರನ್ನು ವಂಚಿಸುವುದು ತರವಲ್ಲ. ತಮ್ಮ ತಪ್ಪು ತಿದ್ದಿಕೊಳ್ಳಬೇಕು. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಗದರಿದರು. ಕುಪಿತರಾಗಿದ್ದ ಯುವಕರ ಗುಂಪು ಪದಾಧಿಕಾರಿಗಳಿಗೆ ಗೂಸಾ ನೀಡಿತು. ನಂತರ ಮಾತನಾಡಿದ ಶಾಸಕರು ಉದ್ಯೋಗ ಮೇಳಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಇಂತಹ ನಯವಂಚಕರು ಎಲ್ಲೆಡೆಯು ಇರುತ್ತಾರೆ. ಈ ಬಗ್ಗೆ ವಿದ್ಯಾವಂತರು ಜಾಗೃತಿ ವಹಿಸಬೇಕೆಂದು ಹೇಳಿದರು.
ಯುಪಿ ಸಿಎಂ ಕ್ರಮ ಖಂಡಿಸಿ ಪ್ರತಿಭಟನೆ
ಸಕಲೇಶಪುರ: ಆಯೋಧ್ಯೆಯಲ್ಲಿ ಹಿಂದು ಮುಖಂಡರನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಸೋಮವಾರ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಖಿಲೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.   ಬಂಧಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡರು ಹಾಗೂ ಶ್ರೀರಾಮಸೇನೆ ಅಧ್ಯಕ್ಷರನ್ನು ಬಿಡುಗಡೆಮಾಡ ಬೇಕು ಎಂಬ ಮನವಿ ನೀಡಿದರು. ಸಂಘಟನೆಯ ಮುಖಂಡ ಸಂತೋಷ್, ರಘು, ದರ್ಮೆಶ್, ಬಿಜೆಪಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜಕುಮಾರ್ ಉಪಸ್ಥಿತರಿದ್ದರು.
ಇಂದು ಕೆಸರು ಗದ್ದೆ ಓಟದ ಸ್ಪರ್ಧೆ
ಹೊಳೆನರಸೀಪುರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಆ.27ರಂದು  ಗ್ರಾಮೀಣ ಸೊಗಡಿನ ಕ್ರೀಡೆಯಾದ ಕೆಸರು ಗದ್ದೆ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಾಲೂಕು ಶಾಖೆಯ ಅಧ್ಯಕ್ಷ ಕೆರಗೋಡು ಮಹೇಶ್ ತಿಳಿಸಿದ್ದಾರೆ. ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಬೆಳಗ್ಗೆ 10 ಕ್ಕೆ  ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ ಬಳಿಯಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ  ಹಮ್ಮಿಕೊಳ್ಳಲಾಗಿದೆ.  ಕ್ರೀಡಾಕೂಟ ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಲಿದ್ದು, ಸ್ಪರ್ಧೆಗಳಿಗೆ ಭವಾನಿರೇವಣ್ಣ ಚಾಲನೆ ನೀಡಲಿದ್ದಾರೆ. ವಿಜೇತರಿಗೆ ಅರಕಲಗೂಡು ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಯೋಗಾರವುಶ್ ಬಹುಮಾನ ವಿತರಿಸಲಿದ್ದಾರೆ. ಕರವೇ ರಾಜ್ಯ ಉಪಾಧ್ಯಕ್ಷ ರವೀಂದ್ರಕುಮಾರ್, ಜಿಲ್ಲಾಧ್ಯಕ್ಷ ಮನುಕುಮಾರ್, ರಾಜ್ಯ ಸಂಚಾಲ ನಾಗೇಂದ್ರಬಾಬು, ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಶಿವಕುಮಾರ್, ಪೊಟ್ಯಾಟೋ ಕ್ಲಬ್ ಸಂಚಾಲಕ ರಾಜೇಂದ್ರ ದೊಡ್ಡಮಗ್ಗೆ ಭಾಗವಹಿಸಲಿದ್ದು, ಕರವೇ ರಾಜ್ಯಾಧ್ಯಕ್ಷ  ಟಿ.ಎ.ನಾರಾಯಣಗೌಡ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
'ರೈತರ ಅಭಿವೃದ್ಧಿಗೆ ಎಸ್‌ಬಿಎಂ ಆರ್ಥಿಕ ನೆರವು'
ತಿಪಟೂರು: ಕೃಷಿ ಅಭಿವೃದ್ಧಿ ಸೇರಿದಂತೆ ರೈತರ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಆರ್ಥಿಕ ನೆರವು ನೀಡುವಲ್ಲಿ ಎಸ್‌ಬಿಎಂ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅದೇ ರೀತಿ ಬ್ಯಾಂಕಿನಿಂದ ಪಡೆದ ಸಾಲವನ್ನು ನಿಗಧಿತ ಅವಧಿಯಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕೆಂದು ಎಸ್‌ಬಿಎಂ ಬ್ಯಾಂಕ್ ಜಿಲ್ಲಾ ವಿಭಾಗೀಯ ಸಹಾಯಕ ಮಹಾಪ್ರಬಂಧಕ ಪಿ.ಶಂಕರ್ ರಾವ್ ಕರೆ ನೀಡಿದರು. ತಾಲೂಕಿನ ಬಳುವನೇರಲು ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಬಳುವನೇರಲು ಮತ್ತು ಹಂದನಕೆರೆ ಶಾಖೆಗಳ ಸಂಯುಕ್ತಾಶ್ರಯದಲ್ಲಿ ಕೃಷಿ ಸಾಲ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ರೈತರ ಅಭ್ಯುದಯಕ್ಕೆ ಎಸ್‌ಬಿಎಂ ವಿವಿಧ ಹಂತದಲ್ಲಿ ಕೃಷಿ ಅಭಿವೃದ್ಧಿಗಾಗಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಅದರ ಲಾಭವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು. ಅದರಂತೆ ಸ್ವಸಹಾಯ ಗುಂಪುಗಳು ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು.  ಜಿಲ್ಲಾ ವಿಭಾಗೀಯ ಮುಖ್ಯ ವ್ಯವಸ್ಥಾಪಕ ಎಸ್. ವಾಮನ್ ಮಾತನಾಡಿ ಬ್ಯಾಂಕಿನ ವಿವಿಧ ಕೃಷಿ ಸೌಲಭ್ಯಗಳಿಂದ ರೈತ ಸಂಗಾತಿ ಯೋಜನೆ, ಕಿಸಾನ್ ಕ್ರೆಡಿಟ್  ಕಾರ್ಡ್, ಕಿಸಾನ್ ಚಕ್ರ ಯೋಜನೆ, ಚಿನ್ನಾಭರಣಗಳ ಮೇಲೆ ಸಾಲ, ಹನಿ ನೀರಾವರಿ, ಗ್ರಾಮೀಣ ಭಂಡಾರ ಯೋಜನೆ,ಅಗ್ರಿ ಕ್ಲಿನಿಕ್ ಸಾಲದ ಯೋಜನೆಗಳ ಬಗ್ಗೆ ವಿವರಿಸಿದರು.  ಸಹಾಯಕ ವ್ಯವಸ್ಥಾಪಕ ಕಿರಣ್ ಪೈ ಸಾಲ ಪಡೆಯಲು ಒದಗಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಜಯಶೀಲ ಮತ್ತು ಜಲಾನಯನ ಅಭಿವೃದ್ಧಿ ಸಂಘದಿಂದ ಗುರುಸ್ವಾಮಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ 1.45ಕೋಟಿ ರು.ಗಳಷ್ಟು ಕೃಷಿ ಸಾಲವನ್ನು ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾಯಿತು. ಸಾಲ ಮರುಪಾವತಿಯನ್ನು ಸಕಾಲಕ್ಕೆ ಮಾಡಿದ್ದಕ್ಕಾಗಿ ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ, ಸಿದ್ದಮಲ್ಲಪ್ಪ, ಬಿ.ಕೆ.ಫಣೇಶ್, ಈಶ್ವರಪ್ಪ, ಗಂಗಾಧರಯ್ಯ ಹಾಗೂ ವಿವಿಧ ಸಂಘಗಳ ಮಹಿಳಾ ಸಂಘದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ: ಪೂರ್ವಭಾವಿ ಸಭೆ
ತಿಪಟೂರು: ತಾಲೂಕು ಯಾದವ ಸಂಘ, ಶ್ರೀ ಕೃಷ್ಣ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜು ಹಾಗೂ ಯಾದವ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ಬಗ್ಗೆ ಆ.29ರ ಗುರುವಾರ ಸಂಜೆ 4ಗಂಟೆಗೆ ನಗರದ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ವಬಾವಿ ಸಭೆಯನ್ನು ತಾ ಯಾದವ ಸಂಘದ ಅಧ್ಯಕ್ಷರಾದ ಎಂ.ನಾಗರಾಜುರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಶಿವಪ್ಪ ತಿಳಿಸಿದ್ದಾರೆ. ಆದ್ದರಿಂದ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.