ತುಮಕೂರು

ಖಾತ್ರಿ ತಾರತಮ್ಯ ನಿವಾರಿಸಿ

Published On :

ಚಿಕ್ಕನಾಯಕನಹಳ್ಳಿ: ಎನ್‌ಆರ್‌ಇಜಿ 'ಖಾತ್ರಿ' ಕಾಮಗಾರಿ ಅನುಷ್ಠಾನದಲ್ಲಿ ನಮ್ಮ ಜಿಲ್ಲೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದ ಯೋಜನೆ ಗುರಿ ಮುಟ್ಟುವಲ್ಲಿ ವಿಫಲವಾಗಿದೆ ಎಂದು ತಾಪಂ ಮತ್ತು ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಆರೋಪಿಸಿದರು.
ಅವರು ಇತ್ತೀಚೆಗೆ ನಡೆದ ಎನ್‌ಆರ್‌ಇಜಿ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಈಮೇಲಿನಂತೆ ಆರೋಪಿಸಿದರು.  ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಗೆ ಇಡೀ ದೇಶದಾದ್ಯಂತ ಏಕರೂಪದ ನಿಯಮವನ್ನು ಅಳವಡಿಸಿದೆ. ಆದರೆ ನಮ್ಮ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಮಗಾರಿಗಳಿಗೆ ಅನುಮೋದನೆ ನೀಡುವಲ್ಲಿ ಅನಾವಶ್ಯಕ ತೊಂದರೆ ನೀಡುತ್ತಿದ್ದಾರೆ. ಕೆಲವೇ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ  ಅನುಮೋದನೆ ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ನೈರ್ಮಲ್ಯಗಳಲ್ಲಿ ಅವಶ್ಯಕವಾದ ಬಾಕ್ಸ್ ಚಂರಂಡಿಯಂತಹ ಕಾಮಗಾರಿಗಳನ್ನು ಕಡೆಗಣಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯಕ್ಕೆ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ನೀಡುತ್ತಿರುವ ಹಣ ಆನೆ ಹೊಟ್ಟೆಗೆ ಅರೆಪಾವಿನ ಮಜ್ಜಿಗೆ ಎಂಬಂತಾಗಿದೆ. ಇದರಿಂದ ಹಳ್ಳಿಗಳು ನೈರ್ಮಲ್ಯದಿಂದ ವಂಚಿತವಾಗಿದ್ದು, ಇದಕ್ಕೆ ಅಧಿಕಾರಿಗಳ ಧೋರಣೆಯೇ ಕಾರಣ ಎಂದು ಬಹುತೇಕ ಸದಸ್ಯರು ದೂರಿದರು. ಗ್ರಾಮೀಣ ಪ್ರದೇಶದ ಅಗತ್ಯಕ್ಕೆ ಅನು ಗುಣವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಎಡವಿದ್ದಾರೆ.
ದೇವರು ಕೊಟ್ಟರೂ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಅಗತ್ಯವಿರುವ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದರೆ ದುಡಿಯುವ ಕೈಗಳಿಗೆ ಕೆಲಸವನ್ನು ನೀಡಿದಂತಾಗುತ್ತಿತ್ತು. ಸರ್ಕಾರ ಅನುದಾನ ನೀಡಿದರೂ ಜಿಲ್ಲಾ ಪಂಚಾಯ್ತಿಯ ವಿವೇಚನಾ ರಹಿತ ತೀರ್ಮಾನದಿಂದ ಅನುದಾನ ನಿರೀಕ್ಷಿತ ಮಟ್ಟದಲ್ಲಿ ವಿನಿಯೋಗವಾಗುತ್ತಿಲ್ಲ ಎಂದು ಟೀಕಿಸಿದರು.
ಕಪ್ಪಕಾಣಿಕೆ ಸಲ್ಲಿಸಿದವರಿಗೆ ಮಾತ್ರ: ಒಮ್ಮೆ ಕಾಮಗಾರಿ ಮಾಡಲು ಪ್ರಯತ್ನ ಪಟ್ಟ ರೈತ ಮ್ತತೊಮ್ಮೆ ಅದರ ಸಹವಾಸಕ್ಕೆ ಕೈಹಾಕುವ ಸಾಹಸ ಮಾಡಲಾರ. ಕಾರಣ ಗ್ರಾಮ ಪಂಚಾಯ್ತಿಯ ಅಧಿಕಾರಿಗಳ ಅಸಹಕಾರ, ಎನ್‌ಎಂಆರ್ ತೆಗೆಯುವಲ್ಲಿ ವಶೀಲಿ ಬಾಜಿ ನಡೆಯುವುದರಿಂದ ಕಪ್ಪಕಾಣಿಕೆ ಸಲ್ಲಿಸಿದವರಿಗೆ ಮಾತ್ರ ಬೇಗ ಎನ್‌ಎಂಆರ್ ತೆಗೆದುಕೊಡುವ ಕಂಪ್ಯೂಟರ್ ಆಪರೇಟರ್‌ಗಳು, ಕೈಬೆಚ್ಚಗೆ ಮಾಡದವರಿಗೆ ತಾಂತ್ರಿಕ ತೊಂದರೆ ಮುಂದೊಡ್ಡುತ್ತಾರೆ. ಕಾಮಗಾರಿ ಮಾಡಿದರು ವರ್ಷಾನುಗಟ್ಟಲೆ ಹಣ ಪಡೆಯಲು ಅಲೆದಾಡಬೇಕು. ಆದ್ದರಿಂದ ಇದರ ಸಹವಾಸವೇ ಬೇಡ ಎಂದು ರೈತ ವರ್ಗ ಎನ್‌ಆರ್‌ಜಿಯಿದ ದೂರಸರಿದಿರುವ ಕಾರಣ ಯೋಜನೆ ಗುರಿಮುಟ್ಟುವಲ್ಲಿ ವಿಫಲವಾಗಿದೆ.ಆದರೆ ಕೆಲವು ಕಡೆ ಗುತ್ತಿಗೆದಾರರು ಹಿಡಿದಿರುವ ಕಾಮಗಾರಿಗಳ ಬಿಲ್‌ಗಳು ಮಾತ್ರ ತ್ವರಿತವಾಗಿ ಆಗುತ್ತವೆ. ಇವರಿಗೆ ಯಾವ ತಾಂತ್ರಿಕ ತೊಂದರೆಯು ಬರುವುದಿಲ್ಲ ಎಂದು ವ್ಯಂಗವಾಗಿ ಟೀಕಿಸಿದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಆದರ್ಶಕುಮಾರ್ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಜಿಲ್ಲಾ ಪಂಚಾಯ್ತಿ ಇಂಜನಿಯರುಗಳನ್ನು ತೊಡಗಿಸಿಕೊಂಡು ಕಾಮಗಾರಿಗಳನ್ನು ಪ್ರಾರಂಭಿಸದಿದ್ದರೆ, ಅಂತಹವರ ಮೇಲೆ
ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 2013-14ನೇ ಸಾಲಿನಲ್ಲಿ ರೈತರಿಗೆ ಎನ್‌ಆರ್‌ಜಿ ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ 15 ಕಾಮಗಾರಿಗಳ ಅನುಷ್ಠಾನದಲ್ಲಿ ಜನ ಪ್ರತಿನಿಧಿಗಳನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಿಶ್ವಾಸಕ್ಕೆ  ತೆಗೆದುಕೊಂಡು ಕಾಮಗಾರಿ ನಿರ್ವಹಣೆ ಮಾಡಿ ಎಂದು ತಾಕೀತು ಮಾಡಿದರು. ಲೆಕ್ಕ ಪರಿಶೋಧಕ ನಂದೀಶ್ ಎನ್‌ಎಮಮಆರ್ ಯೋಜನೆಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಅನುಷ್ಟಾನ ಮತ್ತು ಸಾಧಕ ಬಾಧಕಗಳ ಬಗ್ಗೆ ಉಪನ್ಯಾಸ ನೀಡಿದರು.
ತಾಪಂ ಅಧ್ಯಕ್ಷ ಹೆಚ್.ಆರ್.ಶಶಿಧರ್, ಜಿಪಂ ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ, ನಿಂಗಮ್ಮ, ತಾಪಂ ಸದಸ್ಯ ನವೀನ್, ಲತಾ, ಕವಿತಾ, ಸುಮ, ಮುಂತಾದವರು ಉಪಸ್ಥಿತರಿದ್ದರು.


ವೃದ್ಧೆ ಶವ ಪತ್ತೆ

ಕೊರಟಗೆರೆ: ನನ್ನ ಕೈಕಾಲುಗಳು ಸ್ವಾಧೀನಕ್ಕೆ ಬರುವುದಿಲ್ಲ ನಾನು ಸ್ವತಂತ್ರವಾಗಿ ಬದಕಲು ಸಾಧ್ಯವಿಲ್ಲ ಎಂದು ಜೀವನದಲ್ಲಿ ನೊಂದು ಮನೆ ತೊರೆದಿದ್ದ ವೃದ್ಧೆಯೊಬ್ಬಳ ಶವ ತೀತಾ ಜಲಾಶಯದಲ್ಲಿ ಪತ್ತೆಯಾಗಿದೆ. ಕಾಮಾಕ್ಷಮ್ಮ(60) ಸಾವನ್ನಪ್ಪಿರುವ ದುರ್ದೈವಿ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.