ತುಮಕೂರು

15 ಕ್ಕೆ ಕನಕ ಜಯಂತ್ಯುತ್ಸವ

Published On :

ತುಮಕೂರು: ಕೊರಟಗೆರೆ ತಾಲೂಕು ಹೊಳವನಹಳ್ಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಡಿ. 15 ರಂದು 526ನೇ ಕನಕ ಜಯಂತ್ಯುತ್ಸವ ಹಾಗೂ ತಾಲೂಕು ಮಟ್ಟದ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಕನಕ ಯುವ ಸೇನೆ ಕೊರಟಗೆರೆ ಕುರುಬರ ಸಂಘ ಆಯೋಜಿಸಿರುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ  ಎಚ್.ಎಂ. ರೇವಣ್ಣ ವಹಿಸಲಿದ್ದಾರೆ. ಮೆರವಣಿಗೆ ಉದ್ಘಾಟನೆಯನ್ನು ಡಾ. ಜಿ. ಪರಮೇಶ್ವರ್ ನೆರವೇರಿಸುವರು. ಪ್ರಾಸ್ತಾವಿಕವಾಗಿ ವರ್ತೂರು ಪ್ರಕಾಶ್ ಮಾತನಾಡಲಿದ್ದಾರೆ. ಕನಕದಾಸರ ಆತ್ಮಚರಿತ್ರೆ ಪುಸ್ತಕವನ್ನು ಪಿ.ಆರ್. ಸುಧಾಕರಲಾಲ್ ಬಿಡುಗಡೆಗೊಳಿಸಲಿದ್ದಾರೆ.
ಇಂದು ತಾ.ಪಂ. ಸಾಮಾನ್ಯ ಸಭೆ
ತಿಪಟೂರು: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಮಂಗಳವಾರ ಬೆಳಿಗ್ಗೆ 11ಗಂಟೆಗೆ ತಾ.ಪಂ. ಅಧ್ಯಕ್ಷರಾದ ಭಾನುಪ್ರಕಾಶ್ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ಕರೆಯಲಾಗಿದೆ. ಆದ್ದರಿಂದ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕೆಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದ್ದಾರೆ.
ಸರ್ವಾಧಿಕಾರಿ ವರ್ತನೆ: ಜೆಡಿಎಸ್ ಆರೋಪ
ತುಮಕೂರು: ಪಾವಗಡ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ರಮೇಶ್ ಆರೋಪಿಸಿದ್ದಾರೆ. ಹಾಗಾಗಿ ಅವರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಕುಂಚಿಟಿಗ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರ
ತುಮಕೂರು: ಇಲ್ಲಿನ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದಿಂದ  ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. 2012-13ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ಸಿಬಿಎಸ್‌ಸಿ ಪಠ್ಯದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ. 95, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85, ಸಿಬಿಎಸ್‌ಸಿ ಪಠ್ಯದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ. 80 ಮೇಲ್ಪಟ್ಟು ಅಂಕಗನ್ನು ಪಡೆದು ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ಕುಂಚಿಟಿಗ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸಕ್ತರು ಜಾತಿ ದೃಢೀಕರಣ ಪತ್ರ, ಗುರುತಿನ ಪತ್ರದೊಂದಿಗೆ ಅರ್ಜಿಯನ್ನು ಅಧ್ಯಕ್ಷರು, ಕಾರ್ಯದರ್ಶಿಗಳು, ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ, ಕೋತಿತೋಪು, ತುಮಕೂರು ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ.
16 ರಿಂದ ಆಗಮ ತರಬೇತಿ
ತುಮಕೂರು: ಕುಣಿಗಲ್ ತಾಲೂಕು ಎಡೆಯೂರಿನಲ್ಲಿ ಇದೇ ತಿಂಗಳ 16 ರಿಂದ 30 ರವರೆಗೆ 15 ದಿವಸಗಳ ಕಾಲ ಆಗಮ ತರಬೇತಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘದ ಅಧ್ಯಕ್ಷ ವಿ. ರಾಮತೀರ್ಥನ್ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ 10 ತಾಲೂಕುಗಳ ಮುಜರಾಯಿ ದೇವಾಲಯಗಳ ಅರ್ಚಕರು, ತಹಶೀಲ್ದಾರ್‌ರಿಂದ ದೃಢೀಕರಿಸಿದ ಅರ್ಜಿಗಳನ್ನು  ಡಿ.10 ರೊಳಗೆ ಎಡೆಯೂರು ಕಾರ್ಯನಿರ್ವಹಣಾಧಿಕಾರಿಗಳಿಗೆ ತಲುಪಿಸಲು ಕೋರಲಾಗಿದೆ. ಮಾಹಿತಿಗೆ 9449424465 ಸಂಪರ್ಕಿಸಿ.
ನಿವೃತ್ತ ನೌಕರರ ದಿನಾಚರಣೆ
ಚಿಕ್ಕನಾಯಕನಹಳ್ಳಿ: ತಾಲೂಕು ನಿವೃತ್ತ ನೌಕರರ ಸಂಘದಿಂದ  ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರುದ್ರಮುನಿ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು ಡಿ. 17ರಂದು ಪಟ್ಟಣದಲ್ಲಿರುವ ಸಂಘದ ಕಾರ್ಯಾಲಯದ ಬಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಿ.ರಾಮಯ್ಯನವರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಸಿ.ಬಿ. ಸುರೇಶ್‌ಬಾಬು ಮಾಡಲಿದ್ದು, ಪ್ರಾಸ್ತಾವಿಕ ಮಾತುಗಳನ್ನು ರುದ್ರಮುನಿ ನುಡಿಯಲಿದ್ದಾರೆ. ಇದೇ ಸಂದರ್ಭದಲ್ಲಿ 75 ವರ್ಷ ತುಂಬಿದ ನಿವೃತ್ತ ನೌಕರರಾದ ಜೆ.ಸಿ.ಪುರ ಶಿವನಂಜಪ್ಪ, ಬಿ.ಕೆ. ಸುಂದರರಾಜ್, ಮಾಲೂರಪ್ಪನವರನ್ನು ಸನ್ಮಾನಿಸಲಾಗುವುದು.  ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸಭೆ ಅಧ್ಯಕ್ಷರಾದ ಗೀತಾ, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಸನ್ಮಾನಿಸಲಿದ್ದಾರೆ.
ಪರಿನಿರ್ವಾಣ ಆಚರಣೆ
ತಿಪಟೂರು: ಪಟ್ಟಣದ ಉದಯ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಛಲವಾದಿ ಮಹಾಸಭಾ  ವತಿಯಿಂದ ಡಾ. ಅಂಬೇಡ್ಕರ್ ಅವರ 57ನೇ ಪರಿನಿರ್ವಾಣ ಪುಣ್ಯತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾದ ತಾಲೂಕು ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ ಅಂಬೇಡ್ಕರ್ ಹೋರಾಟದ ನೆನಪುಗಳನ್ನು ಸ್ಮರಿಸುತ್ತಾ, ಶೋಷಿತರ ಆಶಾಕಿರಣವಾದ ಅಂಬೇಡ್ಕರ್ ಅವರ  ಆದರ್ಶಗಳು ಇಂದಿನ ಯುವಕರಲ್ಲಿ ಕಣ್ಮರೆಯಾಗುತ್ತಿದ್ದು, ಅಸಮಾನತೆಯ ವಿರುದ್ಧ ಹೋರಾಟ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ನಗರಸಭಾ  ಮಾಜಿ ಸದಸ್ಯ ವಿಜಯಕುಮಾರ್, ಎಲ್.ಗೋಪಾಲಕೃಷ್ಣ, ವಕೀಲರಾದ ಆನಂದ್, ನಾಗರಾಜ್, ಜಿ.ಕುಮಾರ್, ಕೆ.ಡಿ.ಚಂದ್ರಶೇಖರ್, ಮಹೇಶ್, ತಿಮ್ಮಣ್ಣ, ಜನಾರ್ದನ್ ಮತ್ತಿತರರಿದ್ದರು.
ಬಹುಮಾನ ವಿತರಣೆ
ತಿಪಟೂರು: ಪಟ್ಟಣದ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ನಡೆದ ಇಂಟರ್ ಬ್ರಾಂಟ್ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಕುಮಾರ್ ಹಾಗೂ ಉಪನ್ಯಾಸಕ ಶ್ರೀಧರ್ ಬಹುಮಾನ ವಿತರಣೆ ಮಾಡಿದರು.
ತುಮಕೂರಿನ ಹನುಮಂತಪುರ ಗ್ರಂಥಾಲಯದ ಗ್ರಂಥಾಲಯ ಸಹಾಯಕಿ ಟಿ.ಡಿ.  ಲೀಲಾವತಿ ಅವರಿಗೆ 2013-14 ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ನ್ಯಾಯಕ್ಕಾಗಿ ನೊಂದ ಮಹಿಳೆ ಮೊರೆ
ಹಾಸನ: ಕಳೆದ ಐದು ವರ್ಷಗಳಿಂದ ಟಿ.ಬಿ.ವಿಶ್ವನಾಥ್ ಹಾಗೂ ಪೊಲೀಸರು ತಮಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಎಸ್.ಎಂ.ನಮಿತಾ ಎಂಬುವರು  ಆರೋಪಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷದ ಹಿಂದ ಟಿ.ಬಿ.ವಿಶ್ವನಾಥ ಎಂಬುವರ ಮನೆಯಲ್ಲಿ ತಾವು ವಾಸವಾಗಿದ್ದು, ಅದರ ಪಕ್ಕದಲ್ಲಿ ಇರುವ ನಮ್ಮ ಜಾಗದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದೆವು. ಆದರೆ ವಿಶ್ವನಾಥ್ ಹಾಗೂ ಅಕ್ಕಪಕ್ಕವದ ಮನೆಯವರು ನಾವು ಅಲ್ಲಿ ಮನೆ ಕಟ್ಟಿ ವಾಸ ಇರದಂತೆ ತೊಂದರೆ ನೀಡುತ್ತಿದ್ದಾರೆ. ಗುಂಪು ಕಟ್ಟಿಕೊಂಡ ಬಂದು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅಲ್ಲದೆ, ಈ ಸಂಬಂಧ ದೂರು ನೀಡಿದ್ದರೂ ಪೊಲೀಸರೂ ಕೂಡ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ರಸ್ತೆಯಲ್ಲಿ ನೀರು ಹರಿದಿದೆ ಎಂದು ಹೆಂಗಸರ ಗುಂಪಿನಿಂದ ಹಲ್ಲೆ ಮಾಡಿಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಮಣ್ಣು ತುಂಬಿಸುವಾಗ ಮೀನಾಕ್ಷಿ ಗಂಗಾಧರ ಎಂಬುವರ ಸೈಟಿನಲ್ಲಿ ಜೆಸಿಬಿ ತಿರುಗಾಡಿದೆ ಎಂದು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಪೊಲೀಸರ ಮುಂದೆಯೇ 25ಜನರಿಂದ ನನ್ನ ಸೇರಿದಂತೆ ತಂಗಿ ಮತ್ತು ಅಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ  ಕೈಗೊಂಡಿಲ್ಲ ಎಂದು ನಮಿತಾ ದೂರಿದರು. ಅಲ್ಲದೆ, ಈ ಹಿಂದೆ ಕೆಐಎಡಿಬಿ ಸರ್ಕಲ್‌ನಲ್ಲಿ ನಮ್ಮ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವಿರುದ್ಧ ಕ್ರಮ ಕೈಗೊಳ್ಳದೆ, ನಮ್ಮ ಮೇಲೆಯೇ ಎಫ್‌ಐಆರ್ ದಾಖಲಿಸಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಟಿ.ಬಿ.ವಿಶ್ವನಾಥ್ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ತಾವು ಆಗಾಗ ಕೋರ್ಟ್‌ಗೆ ಅಲೆದಾಡುವಂತಾಗಿದೆ ಎಂದು ಅಲವತ್ತುಕೊಂಡರು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿರು ವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಬತ್ತ ಖರೀದಿ ಕೇಂದ್ರ ಉದ್ಘಾಟನೆ
ಅರಕಲಗೂಡು: ಪಟ್ಟಣದ ಎ.ಪಿ.ಎಂ.ಸಿ.ಯಾರ್ಡ್‌ನಲ್ಲಿ ಬತ್ತ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಜಗದೀಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬತ್ತದ ಬೆಳೆಗಾರರು ಇದರ ಸೌಲಭ್ಯಗಳನ್ನು ಬಳೆಸಿಕೊಂಡು ರೈತರು ಮಧ್ಯವರ್ತಿಗಳ ವಂಚನೆಯಿಂದ ಮುಕ್ತರಾಗಬೇಕೆಂದು ತಿಳಿಸಿದರು.ಹಲವು ಬಾರಿ ರೈತರು ಆರ್ಥಿಕವಾಗಿಯೂ ವಂಚನೆಗೊಳಗಾಗುವುದನ್ನು ನೋಡುತ್ತಿದ್ದೇವೆ. ಇಂತಹ ವಂಚನೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ನಿರ್ದಿಷ್ಟ ಖರೀದಿ ಕೇಂದ್ರಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ಇತ್ತರು.  ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಅಧಿಕಾರಿ ಉಮಾಂಭ, ಕೃಷಿ ಇಲಾಖೆಯ ಭಾಸ್ಕರ್ ಇತರರು ಉಪಸ್ಥಿತರಿದ್ದರು.
ಸಶಸ್ತ್ರ ಪಡೆ ಧ್ವಜ ದಿನಾಚರಣೆ
ಹಾಸನ: ದೇಶದ ರಕ್ಷಣೆ ಹಾಗೂ ಆಂತರಿಕ ಭದ್ರತಾ ಕಾರ್ಯಪಾಲನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರ ತ್ಯಾಗ ಬಲಿದಾನವನ್ನು ಗಮನದಲ್ಲಿಟ್ಟುಕೊಂಡು ಸಮಾಜ ಸೇವೆ ಮಾಡುವ ಮೂಲಕ ಮುಂದಿನ ಪಿಳೀಗೆಗೆ ಮಾದರಿಯಾಗುವಂತೆ ನಿವೃತ್ತ ಸೇನಾಧಿಕಾರಿ ಕೆ.ಎಸ್.ನಟೇಶ್ ಕಿವಿಮಾತು ಹೇಳಿದರು.  ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆಶ್ರಯದಲ್ಲಿ ನಗರದ ಯೂತ್‌ಹಾಸ್ಟೆಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಉಪ ವಿಭಾಗಾಧಿಕಾರಿ ಬಿ. ಶರತ್ ಕಾರ್ಯಕ್ರಮ ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.