ತುಮಕೂರು

ಕಾಂಗ್ರೆಸ್ ಗುಣಗಾನ ಮಾಡಿದ ಬಿಜೆಪಿ ಸಂಸದ ಜಿಎಸ್‌ಬಿ

Published On :

ಕ.ಪ್ರ. ವಾರ್ತೆ ತುಮಕೂರು ಡಿ. 21
ಈಗಾಗಲೇ ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿ, ಕೆಜೆಪಿ ಜತೆ ಗುರುತಿಸಿಕೊಂಡಿರುವ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಕಾಂಗ್ರೆಸ್ ಪಕ್ಷದ ಗುಣಗಾನ ಮಾಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮದಲ್ಲದ ತಪ್ಪಿಗೆ ತಲೆ ಕೊಡಬೇಕಾಗಿ ಬಂದಿರುವ ಪ್ರಧಾನಿ ಮನಮೋಹನ್ ಸಿಂಗ್ ದಕ್ಷ ಆಡಳಿತಗಾರ. ಪ್ರಾಮಾಣಿಕ. ಇದರಲ್ಲಿ ಎರಡು ಮಾತಿಲ್ಲ. 1991 ರಲ್ಲಿ ಅಡವಿಟ್ಟ ಚಿನ್ನ ವಾಪಸು ತಂದು, ದೇಶವನ್ನು ಆರ್ಥಿಕವಾಗಿ ಸಧೃಡಗೊಳಿಸಿದ  ಕೀರ್ತಿ
ಮನಮೋಹನ್‌ಸಿಂಗ್ ಅವರದ್ದು. ಸಂಕಷ್ಟ ಸಮಯದಲ್ಲಿ ದೇಶವನ್ನು ಪಾರು ಮಾಡಿದ ಕೀರ್ತಿ ಸಿಂಗ್ ಅವರಿಗೆ ಸಲ್ಲಬೇಕು.  ಇದರಲ್ಲಿ ಎರಡು ಮಾತಿಲ್ಲ. ಆದರೆ ಯುಪಿಎ -2 ಸರ್ಕಾರದ ಭ್ರಷ್ಟಾಚಾರದ ಹಗರಣಗಳಿಂದ ಸಿಂಗ್ ಅವರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಆದರೆ  ಪ್ರಧಾನಿ ಮನಮೋಹನ್ ಸಿಂಗ್ ಯಾವುದೇ ತಪ್ಪು ಮಾಡಿಲ್ಲ. ಅವರದಲ್ಲದ ತಪ್ಪಿಗೆ ಅವರು ಹೊಣೆಯಾಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಜಿಎಸ್‌ಬಿ ವಿಶ್ಲೇಷಿಸಿದರು.
ಕೆಪಿಸಿಸಿ ಅಧ್ಯಕ್ಷರು ಯಾಕೆ ವಿರೋಧಿಸುತ್ತಾರೆ: ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ಪ್ರಾಧಾನ್ಯತೆಯಿದೆ. ತಾವು ಕಾಂಗ್ರೆಸ್ ಬಿಟ್ಟ ನಂತರ ಸೇರಿದ ಪಕ್ಷದ ಪರ ಪ್ರಚಾರ ಮಾಡೋದು ಸಹಜ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ವಿರುದ್ಧವೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಬೇಕಾಗಿತ್ತು. ಜತೆಗೆ ಪ್ರಚಾರ ಕೂಡ ಮಾಡಬೇಕಿತ್ತು. ಅದು ಪಕ್ಷದ ತೀರ್ಮಾನ. ಅಷ್ಟೆ. ಅದರಾಚೆಗೆ ಏನೂ ಇಲ್ಲ. ಹಾಗಂತ ಪರಮೇಶ್ವರ್ ಸೋಲಿಗೆ ತಾವು ಹೊಣೆ ಎಂದು ಹೇಳುವುದು ಹಾಸ್ಯಾಸ್ಪದ. ಅವಿವೇಕತನದ್ದು. ನಾನ್ಯಾಕೆ ಪರಮೇಶ್ವರ್ ಅವರನ್ನು ಸೋಲಿಸಲು ಪ್ರಯತ್ನಪಡಲಿ ಎಂದು ಪ್ರಶ್ನೆಯೊಂದಕ್ಕೆ ಸಮಜಾಯಿಷಿ ನೀಡಿದರು. ಈ ಹಿಂದೆ ತಾವು ಕಾಂಗ್ರೆಸ್‌ನಲ್ಲಿದ್ದಾಗ, ಪರಮೇಶ್ವರ್ ಅವರ ಗೆಲವಿಗೆ ಶ್ರಮಿಸಿದ್ದು ಆರೋಪ ಮಾಡುವವರಿಗೆ ನೆನಪಿರಬೇಕು. ಅಷ್ಟೇ ಅಲ್ಲ 14 ಸಾವಿರ ಮತಗಳ ಅಂತರದಿಂದ ಪರಮೇಶ್ವರ್ ಗೆಲ್ಲಲು ತಮ್ಮ ಕೊಡುಗೆ ಕೂಡ ಇತ್ತು ಎಂಬುದನ್ನು ಸ್ಮರಿಸಬೇಕು. ವಿನಾಕಾರಣ ತಮ್ಮ ಮೇಲೆ ಆರೋಪ ಮಾಡಬಾರದು ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಎ.ಕೆ. ಆಂಟನಿ ಸಮಿತಿ ಸುಪ್ರೀಂ: ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಮಾಡೋದು ಪಿಸಿಸಿನೂ ಅಲ್ಲ. ಕೆಪಿಸಿಸಿನೂ  ಅಲ್ಲ. ಕಾಂಗ್ರೆಸ್‌ನ ಉನ್ನತ ಮಟ್ಟದ ಕೇಂದ್ರ ಸಮಿತಿ. ಅದು ಎ.ಕೆ. ಆಂಟನಿ ನೇತೃತ್ವದ ಎಐಸಿಸಿ ಸಮಿತಿ.  ಈ ಹಿಂದೆ ಸಂಸದರಾಗಿದ್ದ ವೇಳೆ ಆಂಟನಿ ಅವರ ಮನೆ ಪಕ್ಕದಲ್ಲೇ ತಮ್ಮ ಮನೆ ಕೂಡ ಇತ್ತು. 8 ವರ್ಷ ಅಕ್ಕ-ಪಕ್ಕದ ಮನೆಯವರಾಗಿದ್ದೆವು. ಅವರೊಬ್ಬ ಪ್ರಾಮಾಣಿಕ ವ್ಯಕ್ತಿ. ಅವರು ತಮಗೆ ಚೆನ್ನಾಗಿ ಗೊತ್ತು. ಆಂಟನಿಯವರ ವರದಿ ಆಧಾರದ ಮೇಲಷ್ಟೇ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪಟ್ಟಿ ಪ್ರಕಟವಾಗೋದು. ಈ ಹಿಂದೆ ಇದ್ದ ನಿಬಂರ್ಧಗಳು ಈಗಿಲ್ಲ. ನಾಮಪತ್ರ ಸಲ್ಲಿಸುವ ದಿನದವರೆಗೂ ಟಿಕೆಟ್ ಪಡೆಯಲು ಅವಕಾಶವಿದೆ. ಅದೆಲ್ಲಾ ಈಗ್ಯಾಕೆ. ಯಾವ್ಯಾಗ ಏನೋನಾಗುತ್ತೋ ಯಾರಿಗೆ ಗೊತ್ತು. 45 ವರ್ಷಗಳ ಕಾಲ ರಾಜಕೀಯ ಅನುಭವ ತಮ್ಮದು. ಅದರಲ್ಲಿ ಕಳೆದ 5 ವರ್ಷ ಬಿಟ್ಟರೆ ಮಿಕ್ಕೆಲ್ಲಾ ಅವಧಿ ಕಾಂಗ್ರೆಸ್‌ನಲ್ಲೇ ಕಳೆದಿರೋದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾತೃಪಕ್ಷ ದೆಹಲಿ ಮೂಲದಿಂದ ಆಹ್ವಾನವಿದೆ: ಮಾತೃಪಕ್ಷ ಕಾಂಗ್ರೆಸ್‌ನಿಂದ, ದೆಹಲಿ ಮೂಲದಿಂದ, ದೊಡ್ಡ- ದೊಡ್ಡೋರಿಂದ ತಮಗೆ ಆಹ್ವಾನವಿದೆ ಎಂದು ಬಹಿರಂಗಪಡಿಸಿದ ಜಿಎಸ್‌ಬಿ, ತುಮಕೂರು ಜಿಲ್ಲಾ ಕಾಂಗ್ರೆಸ್ ನಿಂದ ತಮಗೆ ಯಾವುದೇ ಆಹ್ವಾನ ಬಂದಿಲ್ಲ. ತಮಗೆ ಆಶ್ರಯ ನೀಡಿದ್ದು ಮಾತೃಪಕ್ಷ ಕಾಂಗ್ರೆಸ್. ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿಯಿದೆ. ಕಾಲ ಬಂದಾಗ ಎಲವನ್ನೂ ಹೇಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎ.ಕೆ. ಆಂಟನಿ ಸೇರಿದಂತೆ ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕರು ತಮ್ಮ ಹಳೇ ಸ್ನೇಹಿತರು. ಚಿರಪರಿಚಿತರು ಎಂದು ತಿಳಿಸಿದರು.

ಆತ್ಮಗೌರವ ಬಿಟ್ಟು ರಾಜಕೀಯ ಮಾಡಲಾರೆ
ಈಗಾಗಲೇ ಸ್ಪಷ್ಟಪಡಿಸಿರುವಂತೆ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೆಜೆಪಿಯಲ್ಲೇ ಉಳಿದರೆ ಅವರೊಂದಿಗೆ ಉಳಿಯುವ ಭರವಸೆಯನ್ನು ನೀಡಿದ್ದೇನೆ. ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರೆ ಅವರೊಂದಿಗೆ ಹೋಗುವುದಿಲ್ಲ ಎಂಬುದನ್ನು ಈ ಹಿಂದೆಯೇ ತಿಳಿಸಿದ್ದೇನೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಇನ್ನು ಜೆಡಿಎಸ್‌ನವರೊಂದಿಗೆ ಈ ವರೆಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲ. ದಮ್ಮಯ್ಯಗುಡ್ಡೆ ಇಟ್ಟು ರಾಜಕಾರಣ ಮಾಡಲಾರೆ. ಸ್ವತಂತ್ರವಾಗಿ ನಿಂತು ಅತಂತ್ರವಾಗಲಾರೆ. ಆದರೆ ಆತ್ಮಗೌರವ ಬಿಟ್ಟು ರಾಜಕೀಯ ಮಾಡಲಾರೆ ಎಂದು ಸಂಸದ ಜಿ.ಎಸ್. ಬಸವರಾಜು ಸ್ಪಷ್ಟಪಡಿಸಿದರು.

ಮಂದೆ ಬಿಟ್ಟ ಕುರಿ ಅಡ್ಜಸ್ಟ್ ಆಗೋದು ಕಷ್ಟ
ಮಂದೆ ಬಿಟ್ಟ ಕುರಿ ಬೇರೆ ಕಡೆ ಅಡ್ಜೆಸ್ಟ್ ಆಗೋದು ಸ್ವಲ್ಪ ಕಷ್ಟ. ಮತ್ತೆ ಮಂದೆಗೆ ಹೋಗುವ ತವಕ ಆ ಕುರಿಗೆ ಇದ್ದೇ ಇರುತ್ತದೆ. ಬಿಟ್ಟ ಮಂದೆಗೆ ಮತ್ತೆ ಹೋದಾಗಲೇ ಆ ಕುರಿಗೆ ಶಾಂತಿ. ನಮಗೂ ಒಂದೊಂದ್ಸಾರಿ ಹಾಗಾಗುತ್ತೆ ಎಂದು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಸ್ವಯಂ ವಿಶ್ಲೇಷಣೆಗೊಳಪಡಿಸಿಕೊಂಡರು.

ನನ್ನ ಮಗ ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳಲಿ
ನಮ್ಮಪ್ಪ ನನಗೆ ರಾಜಕೀಯ ಕಲಿಸಿರಲಿಲ್ಲ. ಯಾವ ಪಕ್ಷಕ್ಕೂ ಸೇರಿಕೋ ಅಂತ ಹೇಳಿರಲಿಲ್ಲ. ಹಾಗೆಯೇ ತಮ್ಮ ಮಗ ಜ್ಯೋತಿ ಗಣೇಶ್ ಕೂಡ ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳಲು, ರಾಜಕೀಯ ನಿರ್ಧಾರ ಕೈಗೊಳ್ಳಲು ಸ್ವತಂತ್ರರು. ಅವರ ರಾಜಕೀಯ ನಡೆಯನ್ನು ನಾನು ಹೇಳಲಾರೆ. ಕೆಜೆಪಿ ಜತೆ ಗುರುತಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಅಭ್ಯರ್ಥಿಯಾಗಿ ಸುಮಾರು 40 ಸಾವಿರ ಮತ ಪಡೆದ ಜ್ಯೋತಿಗಣೇಶ್ ಅವರನ್ನೇ, ಅವರ ರಾಜಕೀಯ ನಿಲುವು ಕುರಿತಂತೆ ಕೇಳಿ ಎಂದು ಸಂಸದ ಜಿ.ಎಸ್. ಬಸವರಾಜು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.