ತುಮಕೂರು

ಹಲ್ಲಿಲ್ಲದ ಕಾನೂನಿತ್ತು, ಮರಳು ಲೂಟಿ ನಡೆಯುತ್ತಿತ್ತು

Published On :

ಕ.ಪ್ರ.ವಾರ್ತೆ ತುಮಕೂರು ಡಿ. 21
ಹಲ್ಲಿಲ್ಲದ ಕಾನೂನಿತ್ತು. ಮರಳು ಲೂಟಿ ನಡೆಯುತ್ತಿತ್ತು ಎಂದು ಕಾನೂನು, ಸಂಸದೀಯ, ನ್ಯಾಯ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಒಪ್ಪಿಕೊಂಡರು.
ಅವರು ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮರಳು ನೀತಿ ಇರಲಿಲ್ಲ. ಹೀಗಾಗಿ ಮರಳನ್ನು ಬೇಕಾ ಬಿಟ್ಟಿ ತೆಗೆಯಲಾಗುತ್ತಿತ್ತು. ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಸಿಬ್ಬಂದಿ ಕೊರತೆಯಿತ್ತು. ಮರಳು ನೀತಿಯಿಲ್ಲದ ಕಾರಣ ಅಕ್ರಮ ಸಾಗಾಣಿಕೆಗೆ ಸಹಾಯವಾಗುತ್ತಿತ್ತು ಎಂದು ಕಾನೂನು ಸಚಿವರು ವಿವರಿಸಿದರು.
ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಮಾನದಂತೆ, ಭಾರತ ಸರ್ಕಾರ ಮರಳನ್ನು ಖನಿಜ ಸಂಪ್ತತು ಎಂದು ಮಾನ್ಯ ಮಾಡಿದೆ. ಮರಳು ಈಗ ರಾಷ್ಟ್ರೀಯ ಸಂಪತ್ತಾಗಿದೆ. ಈಗ ಮರಳು ಕದ್ದು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವಕಾಶ ಒದಗಿ ಬಂದಿದೆ. ಲೋಕೋಪಯೋಗಿ ಇಲಾಖೆಗೆ ಮರಳು ನೀತಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ನೀಡಲಾಗಿದೆ. ಚೆಕ್‌ಪೋಸ್ಟ್ ಸ್ಥಾಪನೆ, ನಿಯಂತ್ರಣ ಸೇರಿದಂತೆ ಸಂಪೂರ್ಣ ಅಧಿಕಾರ ಪಿಡಬ್ಲ್ಯೂಡಿಗೆ ವಹಿಸಲಾಗಿದೆ. ಪೊಲೀಸರಿಗಲ್ಲ ಎಂದು ಕಾನೂನು ಸಚಿವರು ಸ್ಪಷ್ಟಪಡಿಸಿದರು.
ಮರಳು ರಾಯಲ್ಟಿಯಲ್ಲಿ ಶೇ. 75 ಭಾಗ ಸರ್ಕಾರಕ್ಕೆ, ಮಿಕ್ಕ 25 ಭಾಗ ಮರಳಿನ ಸಂಪತ್ತಿರುವ ಗ್ರಾಪಂಗೆ ನೀಡಬೇಕಾಗುವುದು. ಇನ್ನು ಮುಂದೆ ವೈಜ್ಞಾನಿಕ ಮರಳು ನೀತಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಮರಳು ನೀತಿ ಜಾರಿಯಾಗಿ  3 ದಿನ ಕಳೆದಿವೆ ಎಂದು ಸಚಿವರು ಮಾಹಿತಿ ನೀಡಿದರು.
ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಮರಳು ತೆಗೆಯಲು ಕಾನೂನಿನಲ್ಲಿ ಅವಕಾಶವಿದೆ. ಮರಳು ನೀತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಿತಿಯಲ್ಲಿರುತ್ತಾರೆ. ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ರಚನೆಯಾಗುತ್ತದೆ ಎಂದು ಜಯಚಂದ್ರ ತಿಳಿಸಿದರು.
ಯಂತ್ರ ಉಪಯೋಗಿಸುವಂತಿಲ್ಲ: ಹೊಸ ಮರಳು ನೀತಿಯನ್ವಯ ಇನ್ನು ಮುಂದೆ ಮರಳು ತೆಗೆಯಲು ಜೆಸಿಬಿ, ಕ್ರಷರ್ ಸೇರಿದಂತೆ ಯಾವುದೇ ರೀತಿಯ ಯಂತ್ರೋಪಕರಣಗಳನ್ನು ಉಪಯೋಗಿಸುವಂತಿಲ್ಲ. ಇದು ಕಟ್ಟು ನಿಟ್ಟು. ಪರ್ಮಿಟ್ ಇಲ್ಲದೆ ಇನ್ನು ಮುಂದೆ ಮರಳು ಸಾಗಿಸುವಂತಿಲ್ಲ. ಮರಳನ್ನು ಈಗಾಗಲೇ ಸರ್ಕಾರದ ಆಸ್ತಿ ಎಂದು ಘೋಷಿಸಲಾಗಿದೆ ಎಂದರು.

ಶಿರಾ ಮೂಲಕವೇ ಇತರೆ ಜಿಲ್ಲೆಗಳ ಮರಳು ರವಾನೆ
ಶಿರಾದ ಮೊದಲೂರು ಕೆರೆಯಲ್ಲಷ್ಟೇ ಅಕ್ರಮ ಮರಳು ಸಾಗಣೆಯಾಗುತ್ತಿರಲಿಲ್ಲ. ತುಮಕೂರು ಸೇರಿದಂತೆ  ದಾವಣಗೆರೆ, ಹಾವೇರಿ, ಬಳ್ಳಾರಿ ಭಾಗದಿಂದಲೂ ಅಕ್ರಮ ಮರಳು ಶಿರಾದ ಮೂಲಕ ರವಾನೆಯಾಗುತ್ತಿತ್ತು ಎನ್ನುವುದು ಗಮನಾರ್ಹ. ಈ ವಿಷಯದಲ್ಲಿ ಶಿರಾ ಅಥವಾ ಮೊದಲೂರು ಕೆರೆಯೊಂದನ್ನೇ ಬಲಿಪಶು ಮಾಡುವುದು ಬೇಡ ಎಂದು ಶಿರಾ ವಿಧಾನಸಭಾಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಶಾಸಕರಾಗಿರುವ ಸಚಿವ ಟಿ.ಬಿ. ಜಯಚಂದ್ರ ಮಾರ್ಮಿಕವಾಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಜೆಡಿಎಸ್ ಎಂಎಲ್‌ಸಿ ಡಾ.ಎಂ.ಆರ್. ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.