ಇಂದು ರೈತರ ದಿನಾಚರಣೆ
ಕೊರಟಗೆರೆ: ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 2013-14 ನೇ ಸಾಲಿನ ರೈತರ ದಿನಾಚರಣೆ, ಕೃಷಿ ಮಾಹಿತಿ ಹಾಗೂ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಕೃಷಿ ಇಲಾಖಾ ಅವರಣದಲ್ಲಿ ಡಿ.23 ರಂದು ಪಟ್ಟಣದಲ್ಲಿ ಏರ್ಪಡಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಮಹನುಮಯ್ಯ ತಿಳಿಸಿದ್ದಾರೆ.
ಅವರು ಕೃಷಿ ಇಲಾಖೆಯಲ್ಲಿ ಏರ್ಪಡಿಸಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೃಷಿ ಕಾರ್ಯಕ್ರಮದಲ್ಲಿ ರೈತರಿಗೆ ಉತ್ತಮ ಮಾಹಿತಿ ನೀಡುವ ದೃಷ್ಟಿಯಿಂದ ವಸ್ತು ಪ್ರದರ್ಶನ, ಕೃಷಿ ತಜ್ಞರೊಂದಿಗೆ ಸಂವಾದ, ಸಂಚಾರಿ ಕೃಷಿ ಮಾಹಿತಿ ಘಟಕ, ವಿವಿಧ ಅಭಿವೃದ್ಧಿ ಇಲಾಖೆಗಳ ಮಾಹಿತಿ ಬಿಂಬಿಸುವ ಸ್ಥಬ್ದ ಚಿತ್ರಗಳು ಹಾಗೂ ಪ್ರಗತಿ ಪರ ರೈತರ ಅನಿಸಿಕೆಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮ ಶಾಸಕ ಪಿ.ಆರ್. ಸುಧಾಕರಲಾಲ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸುವರು,
ಸಂಸದ ಜಿ.ಎಸ್. ಬಸವರಾಜು ಕೃಷಿ ಕಿರು ಹೊತ್ತಿಗೆ ಬಿಡುಗಡೆ ಮಾಡುವರು. ಜಿ.ಪಂ. ಅಧ್ಯಕ್ಷೆ ಸಾಕಮ್ಮ ನಾಗರಾಜು ವಸ್ತು ಪ್ರದರ್ಶನ ಉದ್ಘಾಟಿಸುವರು. ವಿಧಾನಪರಿಷತ್ ಮುಖ್ಯ ಸಚೇತಕರ ಡಾ.ಎ.ಹೆಚ್. ಶಿವಯೋಗಿಸ್ವಾವು, ವೈ.ಎ. ನಾರಾಯಣಸ್ವಾಮಿ, ಡಾ.ಎಂ.ಆರ್. ಹುಲಿನಾಯ್ಕರ್, ತಾ.ಪಂ.ಅಧ್ಯಕ್ಷೆ ಅನಿತಾ ಅಶ್ವತ್, ಪ.ಪಂ.ಅಧ್ಯಕ್ಷ ಅಶ್ವತ್ಥಪ್ಪ. ಜಿ.ಪಂ.ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ನಾರಾಯಣಮೂರ್ತಿ, ಟಿ.ಡಿ. ಪ್ರಸನ್ನಕುಮಾರ್, ದಾಕ್ಷಾಯಿಣಿ ರಾಜಣ್ಣ ಮತ್ತಿತರರು ಭಾಗವಹಿಸುವರು.
ಕೃಷಿ ಮಾಹಿತಿ, ಜಾಗೃತಿ ಆಂದೋಲನ
ಶಿರಾ: 2013-14ನೇ ಸಾಲಿನ ಅಂತರ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಕೃಷಿ ಮಾಹಿತಿ ಹಾಗೂ ಜಾಗೃತಿ ಆಂದೋಲನವನ್ನು ಡಿ.23 ರ ಸೋಮವಾರ ಶಿರಾ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಡಾ.ನಾಗರಾಜ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳಿಂದ ಕೃಷಿ ಬಗ್ಗೆ ವಿಚಾರ ಸಂಕೀರಣವನ್ನು ಏರ್ಪಡಿಸಿದ್ದು, ತಾಲೂಕಿನ ಎಲ್ಲಾ ರೈತ ಬಾಂಧವರು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ತಿಳಿಸಿದ್ದಾರೆ.
ನಾಳೆ ರಾಜ್ಯೋತ್ಸವ
ಹುಳಿಯಾರು: ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿ.24ರಂದು ಮಧ್ಯಾಹ್ನ 2 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಳಿಯಾರು-ಕೆಂಕೆರೆ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಡಿ.ಇಂದಿರಾ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಉಪನ್ಯಾಸಕ ಡಾ.ಮು.ಹಾಲಪ್ಪ ಉದ್ಘಾಟನೆ ನೆರವೇರಿಸುವರು. ಹಿರಿಯೂರು ಪಿಯು ಕಾಲೇಜು ಪ್ರಾಂಶುಪಾಲ ಬಿ.ಚಿಕ್ಕಣ್ಣ ಉಪನ್ಯಾಸ ನೀಡಲಿದ್ದು, ಹುಳಿಯಾರು ಗ್ರಾಪಂ ಅಧ್ಯಕ್ಷೆ ಪುಟ್ಟೀಬಾಯಿ, ಕೆಂಕೆರೆ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಮತ್ತಿತರರು ಭಾಗವಹಿಸಲಿದ್ದಾರೆ,
ಬಸ್ ಡಿಕ್ಕಿ: ವ್ಯಕ್ತಿ ಸಾವು
ಮಧುಗಿರಿ: ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಧುಗಿರಿ ಕಸಬಾ ಕೆರೆಗಳಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ನಾರಾಯ್ಯ(65) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಈತ ಗುಡಿರೊಪ್ಪ ಗ್ರಾಮದ ವಾಸಿ. ಕೆಲಸದ ನಿಮಿತ್ತ ಕೆರೆಗಳಪಾಳ್ಯ ಗ್ರಾಮಕ್ಕೆ ಬಂದಿದ್ದ ಏನ್ನಲಾಗಿದೆ. ಕೆರೆಗಳಪಾಳ್ಯ ಗ್ರಾಮದಲ್ಲಿ ನಡೆದು ಹೋಗುತ್ತಿದ್ದಾಗ ಮಧುಗಿರಿ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದು ಆತನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಚಾಲಕ ಪರಾರಿಯಾಗಿದ್ದಾನೆ. ಮಧುಗಿರಿ ಪಿಎಸೈ ಎಂ.ಅಬಂರೀ ಷ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವೃತ್ತಿ ತರಬೇತಿ
ಮಂಡ್ಯ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹೊಸದಾಗಿ ನೇಮಕ ಹೊಂದಿರುವ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳಿಗೆ ಮೂರು ತಿಂಗಳ ವಸತಿ ಸಹಿತ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮವನ್ನು ಡಿ.23ರಿಂದ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇವಾದಳ ಜಿಲ್ಲಾ ಘಟಕಕ್ಕೆ ಆಯ್ಕೆ
ಮಂಡ್ಯ: ಕೆಪಿಸಿಸಿ ಸೇವಾದಳದ ಮಂಡ್ಯ ಜಿಲ್ಲಾ ಘಟಕದ ಮುಖ್ಯ ಸಂಘಟಕರನ್ನಾಗಿ ಪಾಂಡವಪುರದ ಕೋ.ಪು. ಗುಣಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಮಹೇಂದ್ರ ಜೋಶಿ ಅವರ ನಿರ್ದೇಶನದಂತೆ ಕೆಪಿಸಿಸಿ ಮುಖ್ಯ ಸಂಘಟಕ ವಿ.ಎಚ್. ಭೀಮ್ ಶಂಕರ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಗಮಕ ಸಪ್ತಾಹ
ಮಂಡ್ಯ: ಮಹಾಕಾವ್ಯಗಳ ಕಾವ್ಯವಾಚನ ವ್ಯಾಖ್ಯಾನ ಕುರಿತು ಗಮಕ ಸಪ್ತಾಹವನ್ನು ಡಿ.22 ರಿಂದ 27ರ ವರೆಗೆ ನಗರದ ವಿದ್ಯಾಗಣಪತಿ ಗಮಕ ಶಿಕ್ಷಣಾಲಯ ಆವರಣದಲ್ಲಿ ಆಯೋಜಿಸಲಾಗಿದೆ.
ರಂಜಿನಿ ಕಲಾ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿದ್ಯಾಗಣಪತಿ ಗಮಕ ಶಿಕ್ಷಣಾಲಯ ಹಾಗೂ ಇತರ ಸಂಘಟನೆಗಳ ಜೊತೆಗೂಡಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಡಿ.22ರಂದು ಸಂಜೆ 5ಕ್ಕೆ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ ಅವರು ಉದ್ಘಾಟಿಸುವರು. ಬಳಿಕ, ಕುಮಾರವ್ಯಾಸ ಭಾರತ ಕಾವ್ಯವಾಚನವ್ಯಾಖ್ಯಾನ ನಡೆಯಲಿದೆ.
ಡಿ. 23ರಂದು ಬೆಳಗ್ಗೆ 11ಗಂಟೆಗೆ ಗಮಕ ಪದ್ಯಗಳು, 24ರಂದು ಸಂಜೆ 5ಕ್ಕೆ ಶ್ರೀಹರಿಚರಿತೆ 25ರಂದು ಸಂಜೆ 6ಕ್ಕೆ ಪೂರ್ಣಪ್ರಜ್ಞ, 26ರಂದು ಸಂಜೆ 6ಕ್ಕೆ ಯುಗ ಸಂಧ್ಯಾ ಹಾಗೂ 27ರಂದು ಬೆಳಗ್ಗೆ 11ಗಂಟೆಗೆ ಶ್ರೀರಾಮಯಣ ದರ್ಶನಂ ಕುರಿತು ಕಾವ್ಯವಾಚನವ್ಯಾಖ್ಯಾನ ನಡೆಯಲಿದೆ.
ವಿದ್ಯುತ್ ಕಳವು; ಪ್ರಕರಣ ದಾಖಲು
ಮಳವಳ್ಳಿ: ಶಿಕ್ಷಕರೇ ಶಿಕ್ಷಕರ ಭವನಕ್ಕೆ ವಿದ್ಯುತ್ ಕಳವು ಮಾಡಿ ಸಿಲುಕಿಕೊಂಡಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಚೆಸ್ಕಾಂ ಜಾಗೃತ ದಳದ ಎಇಇ ಶಿವಕೃಷ್ಣ,ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಯ್ಯ ನೇತೃತ್ವದ ತಂಡ ಪಟ್ಟಣದ ಶಿಕ್ಷಕರ ಭವನಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ವಿದ್ಯುತ್ ಮಾಪಕದಿಂದ ವಿದ್ಯುತ್ ಕಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರ ಭವನದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಅವರ ಮೇಲೆ ಪ್ರಕರಣ ದಾಖಲಿಸಿದ್ದು 1ಲಕ್ಷ 33 ಸಾವಿರದ 32 ರುಪಾಯಿಗಳ ದಂಡವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಜಾಗೃತ ದಳದ ಅಧಿಕಾರಿಗಳು ಪಟ್ಟಣದ ಎಲ್ಲೆಡೆ ವಿದ್ಯುತ್ ಕಳ್ಳತನ ಮಾಡುತ್ತಿರುವುದರ ನಿಯಂತ್ರಣಕ್ಕೆ ವ್ಯಾಪಕ ಬಲೆ ಬೀಸಿದ್ದು ಸಭೆ, ಸಮಾರಂಭ, ರಾಜಕೀಯ ಸಮಾವೇಶ ಸೇರಿದಂತೆ ಸರ್ಕಾರಿ, ಅರೆಸರ್ಕಾರಿ, ಖಾಸಗಿ, ವಾಣಿಜ್ಯ ಬಳಕೆ, ಗೃಹಬಳಕೆ ಸೇರಿದಂತೆ ಕೈಗಾರಿಕೆಗಳ ಮೇಲೆ ಕಣ್ಣಿಡಲಾಗಿದೆ ಎಂದು ತಿಳಿಸಿದರು.
ನಾಳೆ ಶಾಲಾವಾರ್ಷಿಕೋತ್ಸವ
ಬೋಗಾದಿ ಎರಡನೇ ಹಂತದಲ್ಲಿರುವ ಪ್ರಗತಿ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವವು ಡಿ.24ರ ಸಂಜೆ 4.30ಕ್ಕೆ ನಡೆಯಲಿದ್ದು, ರಂಗಾಯಣ ನಿರ್ದೇಶಕ ಎಚ್. ಜನಾರ್ದನ್, ಶಾಲಾ ಮುಖ್ಯಸ್ಥ ಎಸ್. ರಾಮನಾಥನ್ ಭಾಗವಹಿಸುವರು.
ಅಪರಿಚಿತ ಯುವಕ ಸಾವು
ಮೈಸೂರು: ಸುಟ್ಟು ಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಾನಸಿಕ ಅಸ್ವಸ್ಥನಾದ ಅಪರಿಚಿತ ಯುವಕ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಚಾಮರಾಜ ಜೋಡಿ ರಸ್ತೆಯಲ್ಲಿರುವ ಮನೆಯೊಂದರ ಹಿಂಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ ಈತ ಕಸಕ್ಕೆ ಬೆಂಕಿ ಹಚ್ಚಿ ಕಾಯುತ್ತಿದ್ದಾಗ, ಪಕ್ಕದಲ್ಲಿ ಇರಿಸಿದ್ದ ಹಳೆಯ ಮರದ ಕಟ್ಟಿಗೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು. ಚಹರೆ- 26 ವರ್ಷ, 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, ಕಾಪಿ ಮತ್ತು ಕೆಂಪು ಬಣ್ಣದ ಬನಿಯನ್ ಧರಿಸಿದ್ದಾರೆ. ವಾರಸುದಾರರು ದೂ.0821- 2418319, 519 ಸಂಪರ್ಕಿಸಲು ಕೆ.ಆರ್. ಪೊಲೀಸರು ಕೋರಿದ್ದಾರೆ.
ಕವಿಕಾವ್ಯ ಗೋಷ್ಠಿ, ಸರ್ವಜ್ಞನ ತ್ರಿಪದಿ ಕುರಿತು ಉಪನ್ಯಾಸ
ಹುಳಿಯಾರು: ಹೋಬಳಿ ಕನ್ನಡಸಾಹಿತ್ಯ ಪರಿಷತ್ನವರು ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ
ಕನ್ನಡ ಕವಿಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ತ್ರಿಪದಿಗಳ ಬ್ರಹ್ಮ ಸರ್ವಜ್ಞಾನ ಕುರಿತಾದ ಹಾಗೂ ಆತನ ತ್ರಿಪದಿಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ಪಟ್ಟಣದ ವಿಜಯನಗರ ಬಡಾವಣೆಯಲ್ಲಿನ ಶಿಕ್ಷಕ ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆಸಲಾಯಿತು.
ಗುರು, ವಿದ್ಯೆ, ದಾನ, ಸಂಸಾರ, ಆರೋಗ್ಯ, ಸಜ್ಜನ-ದುರ್ಜನ, ಸ್ವಭಾವ, ಮಾತು ಸೇರಿದಂತೆ ಅನೇಕ ವಿಷಗಳಳಿಗೆ ಸಂಬಂಧಿಸಿದ ನೂರಾರು ತ್ರಿಪದಿಗಳನ್ನು ರಚಿಸಿರುವ ಬಗ್ಗೆ ತಿಳಿಸಿದರಲ್ಲದೆ, ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯಗಳಿಲ್ಲ ಎಂಬ ಗಾದೆ ಮಾತಿನ ತಾತ್ಪರ್ಯವನ್ನು ನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಯಲ್ಲಪ್ಪ ಅವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಲಿಂಗದೇವರು ಮಾತನಾಡಿ, ಸರ್ವಜ್ಞಾನ ಪ್ರೌಢಿಮೆಯನ್ನು ಕುರಿತು ತಿಳಿಸುತ್ತಾ,
ಆತನೊಬ್ಬ ಆದಿಕವಿಯಂತೆ ಎಂದು ಶ್ಲಾಘಿಸಿದರಲ್ಲದೆ, ಅಂದಿನ ತ್ರಿಪದಿಗಳು ಇಂದಿಗೂ ನಮ್ಮ ಬದುಕಿಗೆ ದಾರಿದೀಪದಂತೆ ಎಂದರು.
ಪಶು ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ಕರು ಪ್ರದರ್ಶನ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾದಿಹಳ್ಳಿ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ಮತ್ತು ಮಿಶ್ರತಳಿ ಕರು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಶಾಸಕ ಕೆ.ಷಡಕ್ಷರಿ ಕಾರ್ಯಕ್ರಮ ಉದ್ಘಾಟಿಸಿ ಪಶು ಸಂಗೋಪನೆಯು ಪವಿತ್ರ ಕೆಲಸವಾಗಿದ್ದು, ಈ ಸಂಪತ್ತನ್ನು ಉಳಿಸಿ ಬೆಳೆಸಿ ನಿರ್ವಹಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಂ.ಸುಜಿತ್ ಪಶು ಸಂಗೋಪನೆಯು ಸಮಗ್ರ ಕೃಷಿ ಪದ್ಧತಿಯ ಒಂದು ಬಹುಮುಖ್ಯ ಅಂಗವಾಗಿದ್ದು ಅಧಿಕ ಆದಾಯ ಮತ್ತು ಮಣ್ಣಿನ ಫಲವತ್ತತೆ ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಪ್ರತಿಭೋತ್ಸವ ಕಾರ್ಯಕ್ರಮ
ತಿಪಟೂರು: ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಶಿಕ್ಷಕ ವೃಂದ ಮತ್ತು ಪೋಷಕ ವರ್ಗದವರ ಪಾತ್ರ ಅತಿಮುಖ್ಯವೆಂದು ಗುರುಕುಲಾನಂದಾಶ್ರಮದ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಗುರುಕುಲ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಗುರುಕುಲ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಇಂದಿನ ಶಿಕ್ಷಣ ಕೇವಲ ಹಣ ಹಾಗೂ ಉದ್ಯೋಗಕ್ಕೆ ಅಷ್ಟೇ ಸೀಮಿತವಾಗಬಾರದು ವಿದ್ಯಾರ್ಥಿಗಳಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ದೇಶದಲ್ಲಿ ಉತ್ತಮ ಪ್ರಜೆಗಳನ್ನಾಗಿಸುವ ಗುರುತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಂದ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು. ಎ.ಎಸ್.ಪಿ. ಕಾರ್ತಿಕರೆಡ್ಡಿ ಮಾತನಾಡಿ ದೇಶದ ಪ್ರಗತಿ ವಿದ್ಯಾವಂತ ಯುವ ಜನತೆಯಿಂದ ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರಲ್ಲದೆ ಶ್ರಮದ ದುಡಿಮೆಯೇ ಗೆಲವಿನ ಮೂಲ ಎಂಬಂತೆ ತಮ್ಮ ಬಾಲ್ಯದ ವಿದ್ಯಾರ್ಥಿ ಜೀವನದ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಖ್ಯಾತ ಸಾಹಿತಿ ಹಿ.ಚಿ.ಶಾಂತವೀರಯ್ಯ ಮಾತನಾಡಿ ವಿದ್ಯಾರ್ಥಿಗಳು ಭಾಷಾದ್ವೇಷಿಗಳಾಗದೆ ಭಾಷಾ ಪ್ರೇಮಿಗಳಾಗಬೇಕು. ತಾಲೂಕಿನಲ್ಲಿ ಶ್ರೀ ಗುರುಕುಲಾನಂದಾಶ್ರಮ ಜ್ಞಾನ ಮತ್ತು ಅನ್ನದಾಸೋಹದ ತವರಾಗಿದ್ದು, ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಪಡೆದು ಶ್ರೀಮಠ ಹಾಗೂ ಕಲ್ಪತರು ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಿಇಓ ಪ್ರಭುಸ್ವಾಮಿ ಶ್ರೀಮಠದ ಕಾರ್ಯವೈಖರಿ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಶ್ರೀ ಗುರುಕುಲ ಶಾಲೆಗಳ ಮುಖ್ಯ ಶಿಕ್ಷಕಿ ಪದ್ಮಾವತಿ ಎಸ್. ಚನ್ನಬಸವಪ್ಪ ಮತ್ತಿತರರಿದ್ದರು. ಶಿಕ್ಷಕರಾದ ರಂಜಿತ್ ನಿರೂಪಿಸಿ, ಎಸ್.ಈಶ್ವರಪ್ಪ ಸ್ವಾಗತಿಸಿ, ಎಸ್.ರಾಜಶೇಖರಯ್ಯ ವಂದಿಸಿದರು.
ನಾಟಕ ಪ್ರದರ್ಶನ
ಭಾರತೀನಗರ: ಕಾಳಿಕಾಂಬ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇವರ ಸಹಯೋಗದೊಂದಿಗೆ ಸಿದ್ದಾಪ್ಪಾಜಿ ಪವಾಡ ಅರ್ಥಾತ್ ಧರೆಗೆ ದೊಡ್ಡವರ ವಚನ ಎಂಬ ಪೌರಾಣಿಕ ನಾಟಕವನ್ನು ಭಾರತೀನಗರದಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಸಿದ್ದಾಪ್ಪಾಜಿ ಬಸವ ಮತ್ತು ಕಂಡಾಯ ಮೆರವಣಿಗೆ ಉತ್ಸವವನ್ನು ಮುಖ್ಯರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

