2 ತಿಂಗಳಿಂದಲೂ ದೊರೆಯದ ವೇತನ
ಚಿಕ್ಕನಾಯಕನಹಳ್ಳಿ: ಟೆಂಡರ್ ಪ್ರಕ್ರಿಯೆ ಗೊಂದಲ, 2 ತಿಂಗಳಾದರು ದೊರೆಯದ ವೇತನ, ಹಾಗೂ ಅಯ್ಯಪ್ಪಸ್ವಾಮಿ ಮಾಲೆ ಧಾರಣೆ ಪಟ್ಟಣದ ಸ್ವಚ್ಛತೆ ಮೇಲೆ ಪರಿಣಾಮ ಬೀರಿದ್ದು, ಇಡೀ ಪಟ್ಟಣದ ತುಂಬಾ ಕಸದ ರಾಶಿಯೇ ಕಾಣುತ್ತಿದೆ.
ಸುಮಾರು 50 ವರ್ಷಗಳ ಹಿಂದೆ ಪ್ರಾರಂಭವಾದ, ಆರಂಭದಲ್ಲೇ ಪುರಸಭೆ ಸ್ಥಾನಮಾನ ಹೊಂದಿದರೂ ಅಭಿವೃದ್ಧಿಯಲ್ಲಿ ಮಾತ್ರ ಗ್ರಾಮಪಂಚಾಯ್ತಿ ಮಟ್ಟದಲ್ಲಿದೆ ಎಂದರೆ ತಪ್ಪಾಗಲಾರದು. ಸೌಕರ್ಯಗಳನ್ನು ನೀಡಬೇಕಾದ ಪುರಸಭೆ ಕಾಲಕಾಲಕ್ಕೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳದೆ ಇಂದು ಸಿಬ್ಬಂದಿಕೊರತೆ ಎದುರಿಸುವಂತಾಗಿದೆ.
ಪಟ್ಟಣದ ಪ್ರಮುಖ ರಸ್ತೆ , ಬೀದಿ, ಗಲ್ಲಿಗಲ್ಲಿಗಳಲ್ಲಿ ಸ್ವಚ್ಛಗೊಳಿಸುವ ವಿಸ್ತೀರ್ಣ ಸುಮಾರು 74 ಕಿ.ಮೀ.ಆಗುತ್ತದೆಂಬುದು ಪುರಸಭೆ ಆಡಳಿತ ನೀಡಿದ ಅಧಿಕೃತ ಮಾಹಿತಿ. ಇದರ ಜೊತೆಗೆ 150 ಕಿ.ಮೀ.ಚರಂಡಿಯೂ ಸೇರುತ್ತದೆ. ಎರಡನ್ನು ಏಕಕಾಲಕ್ಕೆ ಸ್ವಚ್ಛಗೊಳಿಸ ಬೇಕಾದರೆ ಸಿಬ್ಬಂದಿ ಲಭ್ಯತೆಯಿಲ್ಲ. ಈ ಮಾಹಿತಿ ಪ್ರಕಾರ ಪ್ರತಿ ಕಿ.ಮೀ.ಗೆ ಒಬ್ಬ ಪೌರಕಾರ್ಮಿಕನಂತೆ 74 ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತು. ಆದರೆ ಇಲ್ಲಿನ ಪುರಸಭೆಯಲ್ಲ ಇರುವುದೇ 42 ಜನ ಪೌರಕಾರ್ಮಿಕರು. ಅದರಲ್ಲಿ 13 ಜನ ಮಾತ್ರ ಕಾಯಂ ನೌಕರರು, ಮಿಕ್ಕವರು ಹೊರಗುತ್ತಿಗೆ ಆಧಾರದ ಮೇಲೆ ಬಂದವರು.
ಮೊಂಡು ಹಠ: ಇವರಲ್ಲಿ ವಾಹನ ನಿರ್ವಹಣೆಗಾಗಿ 3 ಜನ, ಉಳಿದವರನ್ನು ಕಚೇರಿ ಉಪಯೋಗಕ್ಕೆ ನೇಮಕಮಾಡಿಕೊಂಡಿದ್ದು, ಹೊರಗುತ್ತಿಗೆ ಪೌರಕಾರ್ಮಿಕರಿಂದ ಮಾತ್ರ ಪಟ್ಟಣದ ಸ್ವಚ್ಛತೆ ಕಾರ್ಯವನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಹೊರಗುತ್ತಿಗೆಗಾಗಿ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಅವರ ವರ್ಗಾವಣೆಯಾದ ಪರಿಣಾಮ, ಹಾಲಿಯಿರುವ ಜಿಲ್ಲಾಧಿಕಾರಿಗಳು ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಕರೆದಿದ್ದ ಟೆಂಡರ್ ಪ್ರಕ್ರಿಯೆಯನ್ನು ನಾನು ಅನುಮೋದಿಸುವುದಿಲ್ಲ ಎಂಬ ಮೊಂಡು ಹಠದಿಂದಾಗಿ ಪೌರಕಾರ್ಮಿಕರ ವೇತನಕ್ಕೆ ಕುತ್ತು ಬಂದಿದೆ. ವೇತನ ದೊರೆಯದ ಅಸಹನೆ, ನೌಕರರ ಕಡಿಮೆ ಹಾಜರಾತಿ, ಕೆಲವರು ಅಯ್ಯಪ್ಪಸ್ವಾಮಿ ಮಾಲೇ ಧರಿಸಿರುವ ಕಾರಣ ಕೆಲಸಕ್ಕೆ ಹಾಜರಾಗದಿರುವುದು ಸೇರಿ ಸ್ವಚ್ಛತೆಗೆ ಜನರೇ ಇಲ್ಲದಂತಾಗಿದೆ. ವಾರಕ್ಕೊಮ್ಮೆಯೂ ಸಹ ಪಟ್ಟಣದಲ್ಲಿ ಕಸಗುಡಿಸುವ ಕಾರ್ಯ ನಡೆಯುತ್ತಿಲ್ಲ. ಪಟ್ಟಣದ ಮುಖ್ಯ ರಸ್ತೆಗಳಲ್ಲಿಯೇ ರಾಶಿರಾಶಿ ಕಸಬಿದ್ದಿದ್ದರೂ ಸಹ ಪುರಸಭೆ ಅಸಹಾಯವಾಗಿ ಕೈಚೆಲ್ಲಿ ಕೂತಿದೆ.
ಸಿಕ್ಕಸಿಕ್ಕಲ್ಲಿ ಕಸದ ರಾಶಿ: ಕೆಲಸಕ್ಕೆ ಹಾಜರಾಗುತ್ತಿರುವ ಬೆರಳಿಕೆಯಷ್ಟು ಕಾರ್ಮಿಕರಿಂದ 74 ಕಿ.ಮೀ.ರಸ್ತೆ ಮತ್ತು ಬೀದಿಗಳನ್ನೊಳಗೊಂಡಿರುವ ಪಟ್ಟಣದ ಸ್ವಚ್ಛತಾ ಕಾರ್ಯ ಅಸಾಧ್ಯ ಕೆಲಸವಾಗಿದೆ. ಈ ಕಾರಣದಿಂದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ನೆಪಮಾತ್ರಕ್ಕೆ ಅದೂ ಸಹ ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯನಡೆಯುತ್ತಿದೆ. ಸಂಗ್ರಹವಾದ ಕಸ ಎತ್ತಲಾರದೆ, ಸಿಕ್ಕಸಿಕ್ಕಲ್ಲಿ ರಾಶಿ ಹಾಕಿರುವ ಪರಿಣಾಮ ಪಟ್ಟಣದ ವಾತಾವರಣ ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರುತ್ತಿದೆ.
ಇದು ಸಾಲದೆಂಬಂತೆ ಗುಡಿಸಿದ ಕಸದ ರಾಶಿಗೆ ಅದು ಇರುವ ಸ್ಥಳದಲ್ಲೇ ಬೆಂಕಿ ಹಚ್ಚುವ ಅನಾರೋಗ್ಯಕರ ಪ್ರಕ್ರಿಯೆಯೂ ನಡೆಯುತ್ತಿದೆ. 23 ಜನ ಚುನಾಯಿತ ಸದಸ್ಯರು, ಅದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದಿಯಾಗಿ ಎಲ್ಲರಿದ್ದೂ ಸ್ವಚ್ಛ ಮಾಡಲು ಯಾವುದೇ ಪರ್ಯಾಯ ಕ್ರಮಕೈಗೊಂಡಿಲ್ಲ.ಪ್ರಾರಂಭದಿಂದಲು ಇಲ್ಲಿನ ಪುರಸಭೆ ಆಡಳಿತ ಹೆಚ್ಚುಕಡಿಮೆ ಒಂದೇ ರಾಜಕೀಯ ಕುಟುಂಬದ ಆಡಳಿಕ್ಕೊಳಪಟ್ಟಿದ್ದರೂ, ಪಟ್ಟಣದ ಅಭಿವೃದ್ಧಿ ಮಾತ್ರ ಕಿಂಚಿತ್ತು ಆಗಿಲ್ಲ.
ಇದಕ್ಕೆ ಉದಾಹರಣೆ ಕಳೆದ 3ವರ್ಷಗಳ ಹಿಂದೆಯೆ ಪಟ್ಟಣಕ್ಕೆ ಮಂಜೂರಾಗಿರುವ ಒಳಚರಂಡಿ ಯೋಜನೆ ಕಾಮಗಾರಿ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಮೂರು ಬಾರಿ ಶಾಸಕರಾಗಿ, ಅದರಲ್ಲೂ ಹಾಲಿ ಎರಡು ಬಾರಿ ನಿರಂತರವಾಗಿ ಆಯ್ಕೆಯಾಗಿರುವ ಶಾಸಕರು ಪಟ್ಟಣದ ಸ್ವಚ್ಛತೆಗೆ ಮತ್ತು ಅಭಿವೃದ್ಧಿಗೆ ಶ್ರಮಿಸದಿರುವುದು ಪಟ್ಟಣದ ಪ್ರಜೆಗಳ ದುರ್ದೈವ. ಕ್ಷೇತ್ರದ ಅಭಿವೃದ್ಧಿಗಾಗಿ ವಿದೇಶಕ್ಕೆ ಹೋಗುವಲ್ಲಿ ತೋರುವ ಆತುರವನ್ನು ಶಾಸಕರು ಕ್ಷೇತ್ರದ ಅಭಿವೃದ್ಧಿಯಲ್ಲಿ ತೋರಲಿ ಎಂಬುದು ಸಾರ್ವಜನಿಕರ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

