ಬೇಕೇ ಬೇಕು ರೈಲು ಬೇಕು
ತುಮಕೂರು: ಬೆಂಗಳೂರಿಗೆ 18 ಜಿಲ್ಲೆಗಳನ್ನು ಸಂಪರ್ಕಿಸುವ, ಡಬಲ್ ಟ್ರ್ಯಾಕ್ ಹೊಂದಿರುವ, ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೆಲ್ಲಾ ಖ್ಯಾತಿ ಗಳಿಸಿರುವ ತುಮಕೂರಿಗೆ ಭಾನುವಾರದಂದು ಮಧ್ಯಾಹ್ನ ರೇಲ್ವೆ ಇಲ್ಲ ಎಂದರೆ ನಂಬುತ್ತೀರ...
ಆದರೂ ನಂಬಲೇಬೇಕು. ಪ್ರತಿ ದಿನ ಸಾವಿರಾರು ಜನ ಉದ್ಯೋಗ, ವ್ಯವಹಾರದ ಸಂಬಂಧ ಪ್ರತಿ ದಿನ ಬೆಂಗಳೂರಿಗೆ ನಿರಂತರ ಸಂಪರ್ಕ ಹೊಂದಿರುತ್ತಾರೆ. ಭಾನುವಾರ ಸಹ ಒಂದಲ್ಲಾ ಒಂದು ಕಾರಣಕ್ಕಾಗಿ ಬೆಂಗಳೂರಿನ ಜತೆ ಸಂಪರ್ಕ ಹೊಂದಿರುತ್ತಾರೆ.
ಆದರೂ ಮಧ್ಯಾಹ್ನ 11.30 ಹಾಗೂ 3.30 ಕ್ಕೆ ಪ್ರತಿ ದಿನ ಇರುವ ರೈಲನ್ನು ಮಾತ್ರ ಓಡಿಸುತ್ತಿಲ್ಲ.
ಸಾವಿರಾರು ಜನರಿಗೆ ತೊಂದರೆ: ಭಾನುವಾರದಂದು ಬೆಳಗ್ಗೆ ತುಮಕೂರಿನಿಂದ 7.15 ಕ್ಕೆ ಹೊರಡುವ ಅರಸೀಕೆರೆ-ಬೆಂಗಳೂರು ಪ್ಯಾಸೆಂಜರ್ ಹೊರೆತುಪಡಿಸಿದರೆ ತುಮಕೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 11.30 ಹಾಗೂ 3.30 ಕ್ಕೆ ಹೊರಡಬೇಕಾದ ರೈಲುಗಳನ್ನು ಓಡಿಸದೇ ಇರುವುದರಿಂದ ಸಾವಿರಾರು ಜನ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಅದರಲ್ಲೂ ಭಾನುವಾರದಂದು ನೆಂಟರು, ಮದುವೆ, ನಾಮಕರಣ, ವಾರಾಂತ್ಯದ ಮೋಜು ಮಸ್ತಿಗಾಗಿ ತುಮಕೂರಿನ ಜನತೆ ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿರುತ್ತಾರೆ. ರಸ್ತೆ ಸಾರಿಗೆ ಹೋಲಿಸಿದರೆ ರೈಲು ಪ್ರಯಾಣ ಸುಖಕರ. ಜತೆಗೆ ದರ ಕೂಡ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ರೈಲನ್ನು ಆಶ್ರಯಿಸುವುದು ಸ್ವಾಭಾವಿಕ. ಆದರೆ ಈ ರೈಲು ಭಾನುವಾರದಂದು ಸಂಚರಿಸದೇ ಇರುವುದು ತೊಂದರೆಯಾಗಿದೆ.
ಮನವಿ: ಈಗಾಗಲೇ ಪ್ರಯಾಣಿಕರು ಭಾನುವಾರದ ಮಧ್ಯಾಹ್ನದ ರೈಲಿಗಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಜೋಡಿ ರೈಲು ಮಾರ್ಗ ಇರುವುದರಿಂದ ರಸ್ತೆ ಸಾರಿಗೆಗಿಂತ ರೈಲು ಪ್ರಯಾಣ ಅತ್ಯಂತ ಆರಾಮದಾಯಕ, ವಯಸ್ಸಾದವರಿಗೆ ಶೌಚಾಲಯ ಸೌಕರ್ಯ ಇರುವುದರಿಂದ ರೈಲು ಪ್ರಯಾಣವನ್ನು ಪ್ರತಿಯೊಬ್ಬರೂ ಅದರಲ್ಲೂ ಹಿರಿಯ ನಾಗರಿಕರು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ರೈಲು ಬೇಕೆಂಬ ಒತ್ತಡ ದಿನೇ ದಿನೇ ಎಲ್ಲಾ ವರ್ಗದವರಿಂದ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯವರು ಈ ಬಗ್ಗೆ ಗಮನಹರಿಸುತ್ತಾರೋ ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರು ಬಕಪಕ್ಷಿಯಂತೆ ಕಾಯುತ್ತಿದ್ದಾರೆ.
ಒಂದೇ ರೈಲಿನಲ್ಲಿ 3 ರೈಲಿನಷ್ಟು ಜನ: ಭಾನುವಾರ ಮಧ್ಯಾಹ್ನದ ರೈಲು ಇಲ್ಲದೇ ಜನ ಪರದಾಡುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಪ್ರತಿ ದಿನ ತುಮಕೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ತುಮಕೂರಿಗೆ ಬರಬೇಕಾದರೆ ಒಂದೇ ರೈಲಿನಲ್ಲಿ ಮೂರು ರೈಲಿನಲ್ಲಿ ಕುಳಿತುಕೊಳ್ಳುವಷ್ಟು ಜನ ಇರುತ್ತಾರೆ.
ಗಂಟೆಗೊಂದು ರೈಲು ಬೇಕು: ಇದರಿಂದ ಮಹಿಳೆಯರು, ಮಧ್ಯ ವಯಸ್ಕರು ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗಿದೆ. ಈಗಾಗಲೇ ರೇಲ್ವೆ ದರ ಏರಿಕೆ ಮಾಡಿರುವುದರಿಂದ ಪ್ರತಿ 1 ಗಂಟೆಗೆ ತುಮಕೂರಿನಿಂದ ಬೆಂಗಳೂರಿಗೆ ಒಂದು ರೈಲಿನ ಅಗತ್ಯವಿದೆ. ಈ ಬಗ್ಗೆ ಕೂಡ ಪ್ರಯಾಣಿಕರು ಮನವಿ ಸಲ್ಲಿಸಿದ್ದಾರೆ.
ಎಲೆಕ್ಟ್ರಿಕ್ ರೈಲು: ಈಗಾಗಲೇ ಯಶವಂತಪುರದ ತನಕ ಎಲೆಕ್ಟ್ರಿಕ್ ಲೈನ್ ಎಳೆಯಲಾಗಿದೆ. ಯಶವಂತಪುರದಿಂದ ತುಮಕೂರಿಗೆ ಕೇವಲ 55 ಕಿ.ಮೀ. ದೂರ ಮಾತ್ರ. ಈ ಹಿನ್ನೆಲೆಯಲ್ಲಿ ತುಮಕೂರಿನವರೆಗೂ ಎಲೆಕ್ಟ್ರಿಕ್ ಲೈನ್ ಎಳೆಯಬೇಕೆಂಬ ಒತ್ತಡ ಕೂಡ ಹೆಚ್ಚುತ್ತಿದೆ.
ಒಂದು ವೇಳೆ ತುಮಕೂರಿಗೆ ಎಲೆಕ್ಟ್ರಿಕ್ ಲೈನ್ ಎಳೆದರೆ ಡೀಸೆಲ್ ಉಳಿತಾಯವಾಗುತ್ತದೆ. ಜತೆಗೆ ರೇಲ್ವೆ ಇಲಾಖೆಗೆ ಹೆಚ್ಚು ಆದಾಯ ಬರುತ್ತದೆ.
ಮುಖ್ಯವಾಗಿ ಭಾನುವಾರದಂದು ಪ್ರತಿ ದಿನದಂತೆ ಮಧ್ಯಾಹ್ನದ 11.30 ಹಾಗೂ 3.30 ರ ಸಮಯದ ಎರಡೂ ರೈಲನ್ನು ತುಮಕೂರಿನಿಂದ ಬೆಂಗಳೂರಿಗೆ ಸಂಚರಿಸಲು ರೇಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಸಾರ್ವಜನಿಕರಿಂದ ಹೆಚ್ಚುತ್ತಿದ್ದು ಇಲಾಖೆ ಕ್ರಮ ಕೈಗೊಳ್ಳುತ್ತದೇ ಎಂಬ ನಿರೀಕ್ಷೆಯಲ್ಲಿ ಈ ಮಾರ್ಗದ ರೈಲು ಪ್ರಯಾಣಿಕರು ಇದ್ದಾರೆ.
- ಉಗಮ ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

