ತುಮಕೂರು

ಜಿಎಸ್ಬಿ- ಸೊಗಡು ಜಟಾಪಟಿ

Published On :

ತುಮಕೂರು: ಮಧ್ಯಕರ್ನಾಟಕದ 9 ಜಿಲ್ಲೆಗಳ ಕುಡಿಯುವ ನೀರಿನ ಬೇಡಿಕೆ ಈಡೇರಿಸುವ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ನಿರ್ಮಾಣವನ್ನು ರಾಜ್ಯ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಕಡೇಗಳಿಗೆಯಲ್ಲಿ ಕಡೆಗಣಿಸಿದೆ ಎಂದು ತುಮಕೂರು ಬಿಜೆಪಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ಜಿ.ಎಸ್. ಬಸವರಾಜು ಆರೋಪಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮಗೆ ಮಾಹಿತಿಯಿದ್ದಂತೆ ಈ ಬಾರಿಯ ಬಜೆಟ್ನಲ್ಲಿ ವಾಟರ್ ಗ್ರಿಡ್ ನಿರ್ಮಾಣಕ್ಕೆ ಚಾಲನೆ ನೀಡುವುದು ಖಚಿತವಾಗಿತ್ತು. ಆದರೆ ಕಡೆ ಗಳಿಗೆಯಲ್ಲಿ ವಾಟರ್ ಗ್ರಿಡ್ ಕಡೆಗಣಿಸಲಾಗಿದೆ. ಇದೊಂದು ಮಧ್ಯ ಕರ್ನಾಟಕದ ಜನತೆಗೆ ಮಾಡಿದ ಅವಮಾನವೇ ಸರಿ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಜ. 11 ರಿಂದ ಬೇಡಿಕೆ ಈಡೇರುವವರೆಗೂ 9 ಜಿಲ್ಲೆಗಳ ಪ್ರತಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು.
ಷಡ್ಯಂತ್ರ: ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿ, ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ಪ್ಲಡ್ ಕೆನಾಲ್ಗಳ 3 ಯೋಜನೆಗಳ ನೀರು ಒಂದೇ ಕಾಲುವೆಯಲ್ಲಿ ಹರಿಯುವಂತೆ ವಾಟರ್ ಗ್ರಿಡ್ ಕೆನಾಲ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ 3 ಯೋಜನೆಗಳನ್ನು ಒಟ್ಟಿಗೆ ಕಾರ್ಯಾರಂಭ ಮಾಡಿದಲ್ಲಿ ಮಧ್ಯ ಕರ್ನಾಟಕದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 9 ಜಿಲ್ಲೆಗಳ 9023 ಕೆರೆಗಳಿಗೆ ನೀರೊದಗಿಸುವ ಯೋಜನೆ ರೂಪಿಸಲಾಗಿತ್ತು.
 ಈ ಮೂರು ಯೋಜನೆಗಳಿಂದ ಒಟ್ಟು 122 ಟಿಎಂಸಿ ನೀರನ್ನು ಪಡೆದು ಮೇಲ್ಕಂಡ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ಈಗ ಕೇವಲ ಎತ್ತಿನಹೊಳೆ ಯೋಜನೆಗಷ್ಟೇ ಆದ್ಯತೆ ನೀಡಲಾಗಿದ್ದು, ಪರಮಶಿವಯ್ಯ ವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಎತ್ತಿನಹೊಳೆ ಯೋಜನೆಯಿಂದ ಕೇವಲ 24 ಟಿಎಂಸಿ ನೀರು ಲಭ್ಯವಾಗಲಿದೆ. ಆದರೆ 9 ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ಇದೊಂದು ಇಡೀ ಮದ್ಯಕರ್ನಾಟಕದ ಜನತೆಯ ವಿರುದ್ಧ ಬಿಜೆಪಿ ಸರ್ಕಾರ ರೂಪಿಸಿರುವ ಷಡ್ಯಂತ್ರ ಎಂದು ಬಸವರಾಜು ಕಿಡಿ ಕಾರಿದರು.
ಮಂಗಳೂರು, ಪೈಪ್ಲೈನ್ ಲಾಬಿ:  ಸರ್ಕಾರದ  3 ಮುಖ್ಯ ಇಂಜಿನಿಯರ್ಗಳ ಸಮಿತಿ ಸಿದ್ದಪಡಿಸಿರುವ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ವರದಿಯನ್ನು ಧಿಕ್ಕರಿಸಿ, ಮತ್ತು ಮಂಗಳೂರು ಹಾಗೂ ಪೈಪ್ಲೈನ್, ಮೋಟಾರ್ ಕಂಪನಿಗಳ ಏಜೆಂಟರ ಲಾಬಿಗೆ ಮಣಿದು ಎತ್ತಿನಹೊಳೆ ಯೋಜನೆಗಷ್ಟೇ ಆದ್ಯತೆ ನೀಡಲಾಗಿದೆ.
 ಇದೊಂದು ಸಂಪೂರ್ಣ ಲಾಬಿ ಯೋಜನೆಯಾಗಿದೆ. ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಧ್ಯ ಕರ್ನಾಟಕದ ಜನತೆಗೆ ಕೈಕೊಟ್ಟಿದ್ದಾರೆ ಎಂದು ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದಗಂಗಾ, ಚುಂಚನಗಿರಿ ಶ್ರೀಗಳಿಗೆ ಅಪಚಾರ: ಕರ್ನಾಟಕ ವಾಟರ್ಗ್ರಿಡ್ ಕೆನಾಲ್ ನಿರ್ಮಾಣ ಬೆಂಬಲಿಸಿ, ಯೋಜನೆಗೆ ಶೀಘ್ರ ಚಾಲನೆ ನೀಡುವಂತೆ ಒತ್ತಾಯಿಸಿ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷ ಹಾಗೂ ಶತಾಯುಷಿ ಹಾಗೂ ಆದಿಚುಂಚನಗಿರಿಯ ಶ್ರೀಗಳು ಹಾಗೂ ಇತರೆ ಮಠಾಧೀಶರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸಹ ಕಡೆಗಣಿಸಲಾಗಿದೆ.
   ಈ ಮೂಲಕ ಬಿಜೆಪಿ ಸರ್ಕಾರ ಈ ಇಬ್ಬರು ಶ್ರೀಗಳು ಇತರೆ ಮಠಾಧೀಶರ ಮನವಿಯನ್ನು ಕಡೆಗಣಿಸಿ, ಅವರಿಗೆ ಅಪಚಾರ ಎಸಗಿದೆ ಎಂದು ಬಸವರಾಜು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ, ಅಭಿವೃದ್ಧಿ ರೆವೂಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್, ಬ್ಯಾಂಕ್ ನೌಕರರ ಸಂಘದ ಕೊಪ್ಪಲ್ ನಾಗರಾಜ್, ಕೆಜೆಪಿ ಮುಖಂಡ ವಾಲೆ ಚಂದ್ರಯ್ಯ, ತುಮಕೂರು ಜಿಲ್ಲಾ ಕೆಜೆಪಿ ಅಧ್ಯಕ್ಷ ಹಾಗೂ ಬಿಜೆಪಿ ಜಿಪಂ ಸದಸ್ಯ ಹೆಬ್ಬಾಕ ರವಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.