ಕುಡಿವ ನೀರಿಗೆ ನಿರಂತರ ವಿದ್ಯುತ್ ಡಿಸಿ ಸೂಚನೆ
ತುಮಕೂರು: ಇಲ್ಲಿಗೆ ಸಮೀಪದಲ್ಲೇ ಇರುವ ದೇವರಾಯನದುರ್ಗದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಭಕ್ತರು ಆಗಮಿಸಲಿದ್ದು ಕುಡಿಯುವ ನೀರು ಪೂರೈಕೆಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿ ಆರ್.ಕೆ. ರಾಜು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2013 ನೇ ಸಾಲಿನ ಜಾತ್ರಾ ಮಹೋತ್ಸವ ಮಾರ್ಚ್ 19 ರಿಂದ 31 ರವರೆಗೆ ನಡೆಯಲಿದ್ದು, ಜಾತ್ರೆಗೆ ಅಂದಾಜು 1 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಂಭವವಿದೆ. ಜಾತ್ರೆ ಕಾಲದಲ್ಲಿ ಬೋರ್ವೆಲ್ಗಳಿಂದ ಕುಡಿಯುವ ನೀರು ಪೂರೈಸಲು ನಿರಂತರ 3 ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಆರ್.ಕೆ.ರಾಜು ಅವರು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ನಿರಂತರ ವಿದ್ಯುತ್: ದೇವರಾಯನದುರ್ಗ ಗ್ರಾಮದಲ್ಲಿ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳಲು 50 ಸಾವಿರ ಲೀಟರ್ ವಾಟರ್ ಟ್ಯಾಂಕ್ ನಿರ್ಮಾಣ ಮಾಡಲು ಹಾಗೂ ಕೊಪ್ಪಲುಗಳನ್ನು ನಿರ್ಮಾಣ ಮಾಡುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಜಾತ್ರಾ ಸಮಯದ ನಾಲ್ಕೂ ದಿನ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಹರಾಜ ಮೂಲಕ: ವಾಹನ ಶುಲ್ಕ ವಸೂಲಿಯನ್ನು ಹರಾಜು ಮೂಲಕ ನಡೆಸಿ, ಹರಾಜಿನ ಬಿಡ್ ಮೊತ್ತದಲ್ಲಿ ಒಂದು ಭಾಗವನ್ನು (ಶೇ.50) ದೇವಸ್ಥಾನ ನಿಧಿಗೆ ನೀಡಲು ಒಪ್ಪಿದಲ್ಲಿ ಗ್ರಾಮಪಂಚಾಯತಿಗೆ ವಾಹನ ಶುಲ್ಕ ವಸೂಲಿ ಮಾಡಲು ಅನುಮತಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಅಂಗಡಿ ಶುಲ್ಕ ವಸೂಲಿಯನ್ನು ನಿಯಮಾನುಸಾರ ಹರಾಜು ಮೂಲಕ ಮಾಡಲು ಹಾಗೂ ರಸ್ತೆ ಬದಿಗಳಲ್ಲಿ ಅಂಗಡಿ, ಟೆಂಟ್ ಹಾಕುವಾಗ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ರಥೋತ್ಸವ ದಿನದಂದು ಹಾಗೂ ಇತರೆ ದಿನಗಳಂದು ಅನ್ನಸಂತರ್ಪಣೆ ನಡೆಸುವ ಕೊಪ್ಪಲುಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ದುರ್ಗದ ಹಳ್ಳಿಯಲ್ಲಿ ಜಿ.ಪಂ. ವತಿಯಿಂದ ಕೊರೆಸಿರುವ ಬೋರ್ವೆಲ್ನಿಂದ ನೀರು ಸರಬರಾಜು ಮಾಡಲು ತುರ್ತಾಗಿ ಬೋರ್ವೆಲ್ಗಳನ್ನು ಚಾಲನೆ ಮಾಡುವಂತೆ ತಿಳಿಸಿದರು.
ದೃಢೀಕರಣ ಪತ್ರ: ಲೋಕೋಪಯೋಗಿ ಇಲಾಖೆ ವತಿಯಿಂದ ರಥವನ್ನು ಪರಿಶೀಲಿಸಿ, ರಥದ ದೃಢತೆ ಬಗ್ಗೆ ದೃಢೀಕರಣ ಪತ್ರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಬರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾತ್ರೆ ನಿರ್ವಹಣೆ ಮಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡುವಂತೆ ಸೂಚಿಸಿದರು.
ತುಮಕೂರು ಹಾಗೂ ಬೆಂಗಳೂರು ಕಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ 20 ಬಸ್ಗಳನ್ನು ಎರಡು ಗಂಟೆಯ ಒಳಗಾಗಿ ಪ್ರತಿ 5 ನಿಮಿಷಗಳಿಗೆ 1 ರಂತೆ ಓಡಿಸುವಂತೆ ಹಾಗೂ ಕೊರಟಗೆರೆಯಿಂದ ಇರಕಸಂದ್ರ ಕಾಲೋನಿ ಮತ್ತು ಅನುಪನಹಳ್ಳಿ, ದುರ್ಗದ ಹಳ್ಳಿ ಮಾರ್ಗವಾಗಿ ದೇವರಾಯನದುರ್ಗಕ್ಕೆ ಬಸ್ಗಳನ್ನು ಓಡಿಸಲು ಅನುಭವಿ ಚಾಲಕರನ್ನು ನಿಯೋಜಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಆರತಿ ಬಂಡೆಯಿಂದ ದೇವರಾಯನದುರ್ಗಕ್ಕೆ ಬರುವ ರಸ್ತೆ ತುಂಬಾ ಹಾಳಾಗಿರುವುದರಿಂದ ಸದರಿ ರಸ್ತೆಗೆ ಹಾಗೂ ರಥಬೀದಿಗೆ ಡಾಂಬರೀಕರಣ ಹಾಕಿಸುವ ಬಗ್ಗೆ ಕ್ರಮಕೈಗೊಳ್ಳಲು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಇದಲ್ಲದೆ ಇತರೆ ವ್ಯವಸ್ಥೆಗಳಾದ ತಾತ್ಕಾಲಿಕ ವಾಹನ ನಿಲ್ದಾಣ, ಶಾಮಿಯಾನ, ಕ್ಯೂಲೈನ್ ನಿರ್ಮಾಣ, ವಿದ್ಯುತ್ ದೀಪಾಲಂಕಾರ, ಪ್ರಸಾದದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಊಟದ ವ್ಯವಸ್ಥೆ, ಸೆಕ್ಯೂರಿಟಿ ವ್ಯವಸ್ಥೆ, ವಿಶೇಷ ದರ್ಶನ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸವಂತೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪೊಲೀಸ್ ಅಧೀಕ್ಷಕರು ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

