ಬೆಂಗಳೂರಿಗೆ ಹೊಸ ರೈಲು
ಕನ್ನಡಪ್ರಭ ವಾರ್ತೆ ತುಮಕೂರು ಜು.13
ಉದ್ಯೋಗ ನಿಮಿತ್ತ ಪ್ರತಿ ದಿನ ಬೆಂಗಳೂರಿಗೆ ಪ್ರಯಾಣಿಸುವ ಉದ್ಯೋಗಿ ನಾಗರಿಕ ಪ್ರಯಾಣಿಕರ ಅನುಕೂಲಕ್ಕೆ ತುಮಕೂರು-ಬೆಂಗಳೂರು ನಡುವೆ ಬೆಳಗ್ಗೆ 8 ಗಂಟೆ ಸುಮಾರಿಗೆ ಒಂದು ಹೊಸ ರೈಲು ಪ್ರಾರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನಿಂದ ಲೋಂಡಾಕ್ಕೆ ವಿಶೇಷ ರೈಲಿನಲ್ಲಿ ತೆರಳುವ ಮಾರ್ಗ ಮಧ್ಯೆ ತುಮಕೂರು ರೈಲ್ವೇ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸಂಸದ ಜಿ.ಎಸ್.ಬಸವರಾಜು ನೇತೃತ್ವದ ತುಮಕೂರು-ಬೆಂಗಳೂರು ಉದ್ಯೋಗಿ ನಿತ್ಯ ರೈಲ್ವೇ ಪ್ರಯಾಣಿಕರ ವೇದಿಕೆ ಸದಸ್ಯರಿಗೆ ಈ ಭರವಸೆ ನೀಡಿದರು.
ದಿನ ನಿತ್ಯ ಸುಮಾರು 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಬೆಂಗಳೂರಿಗೆ ತೆರಳುತ್ತಿದ್ದು, ಇವರಲ್ಲಿ ಬಹುಪಾಲು ರೈಲುಗಳನ್ನು ಅವಲಂಬಿಸಿದ್ದಾರೆ. ಅದರಲ್ಲೂ ಬೆಳಗ್ಗೆ 8 ಗಂಟೆ ರೈಲಿಗೆ ಹೊರಡುತ್ತಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ರೈಲಿನ ವೇಳಾಪಟ್ಟಿ ಬದಲಾವಣೆಯಿಂದ ತೀವ್ರ ತೊಂದರೆಯಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಬೇಡಿಕೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ರೇಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ತುಮಕೂರು - ಬೆಂಗಳೂರು ನಡುವೆ ಪ್ರತ್ಯೇಕ ರೈಲು ಪ್ರಾರಂಭಿಸುವ ಭರವಸೆ ನೀಡಿದರು.
ಇದಲ್ಲದೆ, ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ತುಮಕೂರು ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವುದು, ಎರಡು ಮತ್ತು ಮೂರನೇ ಪ್ಲಾಟ್ಫಾರಂ ಎತ್ತರಿಸುವುದು, ಪ್ರಯಾಣಿಕರ ನಿಲುಗಡೆಗೆ ಶೆಲ್ಟರ್ ನಿರ್ಮಿಸುವುದು ಹಾಗೂ ಶೆಟ್ಟಿಹಳ್ಳಿ ಗೇಟ್ ಬಳಿ ಅಂಡರ್ ಪಾಸ್ ನಿರ್ಮಾಣ ಮತ್ತಿತರ ಬೇಡಿಕೆಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ರೇಲ್ವೇ ಸಚಿವ ಖರ್ಗೆ, ಕಾಲಾನುಕ್ರಮದಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ಷಫಿ ಅಹಮದ್, ಕುಂದರನಹಳ್ಳಿ ರಮೇಶ್ ಮತ್ತಿತರ ನೂರಾರು ರೈಲ್ವೇ ಪ್ರಯಾಣಿಕರು ಹಾಜರಿದ್ದರು.
ಇದಕ್ಕೂ ಮುನ್ನ ವೇದಿಕೆ ಅಧ್ಯಕ್ಷೆ ಬಾ. ಹ. ರಮಾಕುಮಾರಿ, ಉಪಾಧ್ಯಕ್ಷ ಮಾಧವಮೂರ್ತಿ, ಭಾಸ್ಕರ್, ಕಾರ್ಯದರ್ಶಿ ಕರಣಂ ರಮೇಶ್, ಸಹಕಾರ್ಯದರ್ಶಿ ಮೋಹನ್ ಕುಮಾರ್ ಮತ್ತು ಸಗರ ಚಕ್ರವರ್ತಿ ಹಾಗೂ ಜಯಪ್ರಕಾಶ್ ಮತ್ತಿತರ ವೇದಿಕೆಯ ಸದಸ್ಯರ ತಂಡ ಸಂಸದ ಜಿ.ಎಸ್. ಬಸವರಾಜು ಅವರನ್ನು ಭೇಟಿಯಾಗಿ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳುವ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

