ತುಮಕೂರು

ಕ್ಯಾರಿ-ಓವರ್ ಪದ್ಧತಿಗೆ ಮುಂದುವರಿದ ಪ್ರತಿಭಟನೆ

Published On :

ಸಾವಿರಾರು ವಿದ್ಯಾರ್ಥಿಗಳಿಂದ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಬಳಿ ಉಪವಿಭಾಗಾಧಿಕಾರಿಗಳಿಗೆ ಮನವಿ
ಕನ್ನಡಪ್ರಭ ವಾರ್ತೆ, ತುಮಕೂರು, ಜು.24
ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿ-ಓವರ್ ಪದ್ಧತಿ ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನೆಗಳು ಮುಂದುವರಿದಿದ್ದು, ಸಾವಿರಾರು ವಿದ್ಯಾರ್ಥಿಗಳು ನಗರದ ಟೌನ್‌ಹಾಲ್ ಸರ್ಕಲ್‌ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜಿ.ಟಿ. ಎಲ್ಲೇಶ್‌ಗೌಡ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಂತೋಷ್ ಕಬ್ಬಿಗೆರೆ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿ ಮುಖಂಡರು ಕಾಲೇಜು ಬಹಿಷ್ಕರಿಸಿ, ಕ್ಯಾರಿ-ಓವರ್ ಪದ್ಧತಿ ಶೀಘ್ರವೇ ಮುಂದುವರಿಸುವಂತೆ ತಾಂತ್ರಿಕ ಶಿಕ್ಷಣ ಮಂಡಳಿಯನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಟಿ.ಎಲ್ಲೇಶ್‌ಗೌಡ, ಡಿಪ್ಲೊಮಾ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಮುಂದಾಗದಿದ್ದರೆ ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದಂತಾಗುತ್ತದೆ.
ಸರ್ಕಾರಗಳು ತಾಂತ್ರಿಕ ಶಿಕ್ಷಣದ ಹೆಸರಲ್ಲಿ ವ್ಯಾಪಾರೀಕರಣ ಮಾಡುತ್ತಿವೆಯೆ ಹೊರತು ತಾಂತ್ರಿಕ ಶಿಕ್ಷಣದ ಮೂಲಭೂತ ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿವೆ. ಇದು ಹೀಗೆ ಮುಂದುವರಿದರೆ ತಾಂತ್ರಿಕ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳು ವಿಮುಖರಾಗಿ ತಾಂತ್ರಿಕ ಶಿಕ್ಷಣ ಮಂಡಳಿಯನ್ನು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತ್ತೊಂದೆಡೆ ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ವೇಳಾಪಟ್ಟಿ, ಅವಧಿಗೂ ಮುನ್ನವೇ ಪರೀಕ್ಷೆ, ವಿದ್ಯಾರ್ಥಿಗಳಿಗೆ ಬೋಧನಾ ಕೊರತೆ, ಪಠ್ಯ ಪುಸ್ತಕ ಕೊರತೆ, ಪ್ರಯೋಗ ಶಾಲೆ, ಶಿಕ್ಷಕರ ಕೊರತೆ ಹಾಗೂ ಭಾಷಾ ಸಮಸ್ಯೆಗಳಿರುವುದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಪದೇ ಪದೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಸರ್ಕಾರ ಈ ಸಮಸ್ಯೆಗಳ ಪರಿಗಣಿಸಿ, ಕ್ಯಾರಿ-ಓವರ್ ಪದ್ಧತಿ ಮುಂದುವರಿಸುವಂತೆ ಮನವಿ ಮಾಡಿದರು.
ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಂತೋಷ್ ಕಬ್ಬಿಗೆರೆ ಮಾತನಾಡಿ, ಅಲ್ಪಾವಧಿ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರಿಂದ ಫಲಿತಾಂಶ ಇಳಿಮುಖವಾಗುತ್ತಿದ್ದು, ಕ್ಯಾರಿ-ಓವರ್ ಪದ್ಧತಿ ಅನಿವಾರ್ಯವಾಗಿದೆ ಎಂದರು.
ಕನ್ನಡ ಕರವೇಯ ನಗರ ವಿದ್ಯಾರ್ಥಿ ಅಧ್ಯಕ್ಷ ಚಂದನ್, ಆರ್ಯ ಭಾರತಿ ಪಾಲಿಟೆಕ್ನಿಕ್ ಕಾಲೇಜಿನ ಪುನೀತ್,  ಶ್ರೀದೇವಿ ಪಾಲಿಟೆಕ್ನಿಕ್ ಕಾಲೇಜಿನ ಮಣಿಕಂಠ, ಅಕ್ಷಯ ಕಾಲೇಜಿನ ಚೇತನ್, ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನ ಚಂದನ್, ಹೆಚ್.ಎಂ.ಎಸ್. ಕಾಲೇಜಿನ ರಾಜು, ಅಮೂಲ್ಯ, ವಕ್ತಾರ ಪ್ರಕಾಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.