ತುಮಕೂರು

ದೇಶದಲ್ಲಿ ಅಜ್ಞಾನದಿಂದ ಜನಸಂಖ್ಯೆ ಹೆಚ್ಚಳ: ರಾಜು

Published On :
ಪಾಂಡವಪುರ: ಹದಿಹರೆಯದವರು ಗರ್ಭಿಣಿ ಆಗುತ್ತಿರುವುದು ದೇಶದ ದೊಡ್ಡ ದುರಂತ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಇ.ರಾಜು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಹೆಣ್ಣು ಮಕ್ಕಳು 13 ರಿಂದ 18 ವಯಸ್ಸಿನೊಳಗೆ ಗರ್ಭಿಣಿ ಆಗುತ್ತಿರುವುದು ಸರಿಯಲ್ಲ. ಇಂತಹ ಅಂಶಗಳು ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ದೃಢಪಡಿಸಿದೆ ಎಂದರು.
ವಿಶ್ವದಲ್ಲೇ 18 ವರ್ಷದೊಳಗಿನ ಹೆಣ್ಣು ಮಕ್ಕಳು 1.60 ಕೋಟಿಯಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. 38 ಲಕ್ಷ ಹದಿಹರೆಯದ ಹೆಣ್ಣು ಮಕ್ಕಳು ಗರ್ಭಪಾತಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ಲಿಂಗ ತಾರತಮ್ಯ, ಅಜ್ಞಾನ, ಅಸಮಾನತೆ, ಅನಕ್ಷರತೆ ಒಳಗೊಂಡಂತೆ ಅನೇಕ ಮೂಲ ಕಾರಣಗಳಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.
ಕೆಲ ದೇಶಗಳಲ್ಲಿ ಹೆಣ್ಣು ಮಕ್ಕಳು ಹುಟ್ಟುವುದೇ ಅನಿಷ್ಟ ಎಂಬ ಪದ್ದತಿ ಜಾರಿಯಲ್ಲಿದೆ. ಹೆಣ್ಣು ಶಿಶು ಹತ್ಯೆ ಮಾಡುವುದರಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ನಮ್ಮ ಸಮಾಜದಲ್ಲಿ ಇಂತಹ ಕೆಟ್ಟ ಅಮಾನವೀಯ ಘಟನೆಗಳು ಇರುವುದರಿಂದಲೇ ದೇಶದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಎಂದರು.
ಕಾನೂನು ಬಾಹೀರ ಘಟನೆಗಳು ನಡೆಯುತ್ತಿದ್ದರೂ ನಮ್ಮಲ್ಲಿರುವ ಕಾನೂನುಗಳು ಯಾವ ಪ್ರಯೋಜನಕ್ಕೆ ಬಾರದಂತಾಗಿದೆ. ಎಲ್ಲಾ ಕಡೆ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಸಾಂಸ್ಕತಿಕ ಸಂಬಂಧಗಳು ಕಣ್ಮರೆಯಾಗುತ್ತಿದೆ ಎಂದು ತಿಳಿಸಿದರು.
ಒಂದು ಕುಟುಂಬಕ್ಕೆ ಗಂಡಾಗಲಿ ಅಥವಾ ಹೆಣ್ಣಾಗಲಿ ಒಂದೇ ಮಗು ಇರಬೇಕು ಎಂಬ ಕಾನೂನು ಜಾರಿಗೊಳಿಸಬೇಕು. ಎರಡು ಮಕ್ಕಳಿದ್ದರೆ ಸರ್ಕಾರದ ಸವಲತ್ತುಗಳನ್ನು ಸ್ಥಗಿತಗೊಳಿಸಬೇಕು. ಆಗ ಮಾತ್ರ ದೇಶದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ರಾಜು ಹೇಳಿದರು.
ಸಮಾರಂಭಕ್ಕೂ ಮುನ್ನ ಪಿಇಎಸ್ ಬಾಲಕಿಯರ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕುಟುಂಬಕ್ಕೊಂದು ಮಗು ಬಾಳ ತುಂಬಾ ನಗು, ಜನಸಂಖ್ಯೆ ಹೆಚ್ಚಳ ವಿನಾಶಕ್ಕೆ ಕಾರಣ, ಚಿಕ್ಕ ಕುಟುಂಬ ಸಂವದ್ಧಿಯ ಸಂಕೇತ, ಪುರುಷರೇ ಕಾರ್ಯೋನ್ಮುಖರಾಗಿರಿ ಕುಟುಂಬ ಕಲ್ಯಾಣ ಅನುಸರಿಸಿರಿ ಎಂಬ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು.
ಸಮಾರಂಭವನ್ನು ಗ್ರೇಡ್-2 ತಹಸೀಲ್ದಾರ್ ಪಾಪಣ್ಣ ಉದ್ಘಾಟಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಸಾರ್ವಜನಿಕರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಯರಾಮ್, ಎನ್‌ಎಸ್‌ಎಸ್ ಸಂಯೋಜಕಿ ವನಿತಾ, ಪುರುಷೋತ್ತಮ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮ್ಯಾಥ್ಯು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.