ಕೆರೆಗಳಲ್ಲಿ ಮರಳು ದಂಧೆ ತಡೆಯಿರಿ: ಲೋಕಾ ತಾಕೀತು
ಕ.ಪ್ರ.ವಾರ್ತೆ ಕೋಲಾರ ಜು.29
ನಿರೀಕ್ಷೆಯಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ದೂರುದಾರರು ಸರ್ಕಾರಿ ಕಚೇರಿಗಳಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ಲೋಕಾಯುಕ್ತ ಡಾ.ವೈ.ಭಾಸ್ಕರ್ ರಾವ್ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಸಭೆಯಲ್ಲಿ ಕೆರೆಗಳಲ್ಲಿ ನಡೆಯುತ್ತಿರುವ ಮರಳು ದಂಧೆ, ಕಂದಾಯ ಇಲಾಖೆ ವ್ಯಾಪ್ತಿಯ ಉಪ ವಿಭಾಗಾಧಿಕಾರಿಗಳ ಹಾಗೂ ತಾಲೂಕು ಕಚೇರಿಗಳಲ್ಲಿ ಕಡತಗಳ ವಿಲೇವಾರಿ ವಿಳಂಬ, ಪೊಲೀಸ್ ಠಾಣೆಯಲ್ಲಿ ಶೋಷಣೆ, ಕೃಷಿಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹೀಗೆ ಹತ್ತಾರು ಸರ್ಕಾರಿ ಇಲಾಖೆಗಳಲ್ಲಿನ ಅವ್ಯವಸ್ಥೆಗಳನ್ನು ದೂರುದಾರರು ಲೋಕಾಯುಕ್ತರ ಗಮನಕ್ಕೆ ತಂದರು.
ಕೆರೆಗಳಲ್ಲಿ ಮರಳು ದಂಧೆ ನಡೆಯುತ್ತಿದ್ದು, ಅಂತರ್ಜಲ ಸಮಸ್ಯೆ ಹೆಚ್ಚಾಗುತ್ತದೆ. ದಂಧೆ ತಡೆಗಟ್ಟಲು ಕೂಡಲೇ ಜಾಗೃತದಳ ರಚಿಸಿ ಪ್ರತಿವಾರ ತಮಗೆ ತನಿಖೆಯ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಅವರಿಗೆ ಸೂಚಿಸಿದರು.
ದೂರಿತ್ತರೂ ಕ್ರಮವಿಲ್ಲ: ತಾಲೂಕಿನ ವಿವಿಧ ಕಡೆ ರೈತರಿಗೆ ನಕಲಿ ಕೀಟನಾಶಕಗಳನ್ನು ಮಾರಾಟ ಮಾಡಲಾಗುತ್ತಿದೆ. ಆರೋಪಿಗಳನ್ನು ಹಿಡಿದುಕೊಟ್ಟರು ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೆರೆಗಳಲ್ಲಿ ಮರಳು ಮಾಫಿಯಾ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತಿಲ್ಲವೆಂದು ರೈತ ಸಂಘದ ಮುಖಂಡ ಕೆ.ಶ್ರೀನಿವಾಸಗೌಡರು ದೂರಿದರು.
ಇದೇ ವೇಳೆ ಕೆಲ ನಕಲಿ ಕೀಟನಾಶಕಗಳನ್ನು ಅವರು ಲೋಕಾಯುಕ್ತರಿಗೆ ಒಪ್ಪಿಸಿದರು. ಇದರಿಂದ ಸಿಡಿಮಿಡಿಗೊಂಡ ಲೋಕಾಯುಕ್ತರು ಆರೋಪಿ ಸಿಕ್ಕಿದ್ದರೂ ಏಕೆ ಕ್ರಮ ಕೈಗೊಂಡಿಲ್ಲವೆಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಚಿಕ್ಕಣ್ಣನವರನ್ನು ಪ್ರಶ್ನಿಸಿದರಲ್ಲದೆ, ಮುಂದಿನ ತಿಂಗಳು 13 ರಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚಿಸಿದರು.
ಪಿಎಸ್ಐ ಕೆ.ಕೆ.ರಘು ದಬ್ಬಾಳಿಕೆ: ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಚೋಳಘಟ್ಟ ಗ್ರಾಮದ ಕೃಷ್ಣಪ್ಪ ಮತ್ತು ಭಾಗ್ಯಮ್ಮ ಎಂಬುವರು ವೇಮಗಲ್ ಪಿಎಸ್ಐ ಕೆ.ಕೆ.ರಘು ವಿರುದ್ಧ ದೂರು ನೀಡಿ, ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭೂ ಮಾಫಿಯವರ ಒತ್ತಡಕ್ಕೆ ಮಣಿದು ನಮಗೆ ತೊಂದರೆ ನೀಡುತ್ತಿದ್ದಾರೆ, ಗೋಮಾಳ ಜಮೀನು ಎಂದು ಸುಳ್ಳು ಹೇಳಿ ವಿಚಾರಣೆ ನೆಪದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಕಣ್ಣೀರಿಟ್ಟರು.
ದಲಿತ ವರ್ಗಕ್ಕೆ ಸೇರಿದ ನಮಗೆ ಭೂ ಮಾಫಿಯದವರಿಂದ ಪ್ರಾಣ ಬೆದರಿಕೆ ಇದೆ ಎಂದಾಗ, ಮಧ್ಯ ಪ್ರವೇಶಿಸಿದ ಲೋಕಾಯುಕ್ತರು ಕೂಡಲೇ ದೂರುದಾರರಿಗೆ ರಕ್ಷಣೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿ, ಬಡವರಿಗೆ ತೊಂದರೆ ನೀಡಿದಲ್ಲಿ ನಿಮ್ಮ ಭವಿಷ್ಯಕ್ಕೆ ಪೆಟ್ಟಾಗುತ್ತದೆ ಎಂದು ಪಿಎಸ್ಐ ಕೆ.ಕೆ.ರಘು ಅವರಿಗೆ ಎಚ್ಚರಿಕೆ ನೀಡಿದರು. ಈ ಪ್ರಕರಣವನ್ನು ತಾವು ವಿಶೇಷ ಆಸಕ್ತಿ ವಹಿಸಿ ಇತ್ಯರ್ಥ ಮಾಡಿ ಎಂದು ಡಿವೈಎಸ್ಪಿ ಶ್ರೀಹರಿ ಬರಗೂರು ಅವರಿಗೆ ಸೂಚಿಸಿದರು. ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ವ್ಯಕ್ತಿಯೊಬ್ಬರು ಪರಭಾರೆ ಮಾಡಿದ್ದಾರೆಂದು ಸೀನಪ್ಪ ಎಂಬುವರು ತಿಳಿಸಿದಾಗ, ಸದರಿ ದೂರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋಲಾರ ತಹಸೀಲ್ದಾರ್ ಸೌಮ್ಯ ಹಾಗೂ ತಾ.ಪಂ ಇಓ ಕೆ.ಎಸ್.ಭಟ್ ಅವರಿಗೆ ನಿರ್ದೇಶಿಸಿದರು. ಸಭೆಯಲ್ಲಿ ಆಹಾರ, ಅಂಗವಿಕಲರ ಕಲ್ಯಾಣ, ನಗರಸಭೆ, ಸರ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸುಮಾರು 130ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು. 13 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಯಿತಲ್ಲದೆ, ಕೆಲ ಇಲಾಖೆಗಳ ಮೇಲಿನ ದೂರಿಗೆ ಸಂಬಂಧಿಸಿದಂತೆ ಬೆಂಗಳೂರಿನ ಲೋಕಾಯುಕ್ತರ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ವಿದ್ಯಾಧರ್, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಜಿ.ಪಂ ಸಿಇಒ ಜುಲ್ಫಿಖಾರ್ ಉಲ್ಲಾ, ಕೋಲಾರ ಎಎಸ್ಪಿ ಐ.ಎಂ.ಜಮೀಲ್, ಕೆಜಿಎಫ್ ಡಿವೈಎಸ್ಪಿ ರಾಜಣ್ಣ ಹಾಗೂ ಲೋಕಾಯುಕ್ತ ಕೋಲಾರ ಜಿಲ್ಲಾ ಎಸ್ಪಿ ಸುಧಾಕರ್, ಡಿವೈಎಸ್ಪಿ ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

