ತುಮಕೂರು

ಮೈಸೂರು ಬ್ಯಾಂಕ್ ರೈತನ ಮಿತ್ರ: ಪ್ರದೀಪ್ ಕುಮಾರ್

Published On :

ತಿಪಟೂರು: ಸರ್.ಎಂ.ವಿಶ್ವೇಶ್ವರಯ್ಯನವರಂತಹ ಧೀಮತ ವ್ಯಕ್ತಿ ಸ್ಥಾಪಿಸಿದ ಮೈಸೂರು ಬ್ಯಾಂಕ್ ಕನ್ನಡಿಗರ ಮನ-ಮನೆಯ ಬ್ಯಾಂಕ್. ಕನ್ನಡಿಗರ ಅದರಲ್ಲೂ ದೇಶದ ಬೆನ್ನುಲುಬಾದ ಕೃಷಿ ಮತ್ತು ರೈತರ ಏಳಿಗೆಗೆ, ಅಭಿವೃದ್ಧಿಗೆ ಮೈಸೂರು ಬ್ಯಾಂಕ್ ಪ್ರಾಮಾಣಿಕವಾಗಿ ತನ್ನ ಶಕ್ತಿ ಮೀರಿ ಶ್ರಮಿಸಿ ರೈತನ ಮಿತ್ರನಾಗಿದ್ದು, ಬ್ಯಾಂಕಿನ ಪ್ರಯೋಜನವನ್ನು ಪ್ರತಿಯೊಂದು ರೈತ ಕುಟುಂಬ ಪಡೆಯಬೇಕೆಂದು ಮೈಸೂರು ಬ್ಯಾಂಕಿನ ಡಿ.ಜಿ.ಎಂ. ಪ್ರದೀಪ್ ಕುಮಾರ್ ತಿಳಿಸಿದರು.
ನಗರದ ಮೈಸೂರು ಬ್ಯಾಂಕ್ ಮಾರನಗೆರೆ ಕೃಷಿ ಶಾಖೆಯಿಂದ ಸೋಮವಾರ ಏರ್ಪಡಿಸಿದ್ದ ಕೃಷಿ ಸಾಲ ಉತ್ಸವ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ರೈತರು ಖಾಸಗಿಯವರಲ್ಲಿ ಮೀಟರ್ ಬಡ್ಡಿಗೆ ಸಾಲ ಪಡೆಯದೆ ಮೈಸೂರು ಬ್ಯಾಂಕಿನಿಂದಲೇ ಅತ್ಯಂತ ಕಡಿಮೆ ಬಡ್ಡಿಗೆ ಸಾಲ ಪಡೆಯಲು ಮುಂದಾಗಬೇಕು. ಬ್ಯಾಂಕಿನಲ್ಲಿ ಕೃಷಿಕರಿಗಾಗಿಯೇ ಹತ್ತು ಹಲವಾರು ಯೋಜನೆಗಳಿದ್ದು, ತಮಗೆ ಅವಶ್ಯವೆನಿಸಿದ ಯೋಜನೆಯಲ್ಲಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ವಿಶ್ವಾಸಗಳಿಸಿ ತಮ್ಮ ಅಗತ್ಯಗಳಿಗೆ ಸಾಲ ಪಡೆದು ಸ್ವಾವಲಂಬನೆ ಸಾಧಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಸಾಲ ಪಡೆದ ರೈತರು ಬರಗಾಲಕ್ಕೀಡಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ ಸಕಾಲಕ್ಕೆ ಬಡ್ಡಿ ಕಟ್ಟಿಯಾದರೂ ಸಾಲವನ್ನು ನವೀಕರಣ ಮಾಡಿಕೊಂಡು ಹೆಚ್ಚಿನ ಬಡ್ಡಿ ಹೊರೆಯಿಂದ ಪಾರಾಗಬೇಕು. ಒಟ್ಟಾರೆ ಮೈಸೂರು ಬ್ಯಾಂಕಿನಿಂದ ಸಾಲ ಪಡೆದು ದೇಶದ ಏಳಿಗೆಗೆ ತಾವೂ ಕಾರಣರಾಗಬೇಕೆಂದು ಮನವಿ ಮಾಡಿದರು.
ಎ.ಜಿ.ಎಂ.ಶಂಕರ್ ರಾವ್ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನದಾಗಿ ತುರುವೇಕೆರೆ, ಮಾಯಸಂದ್ರ ಮತ್ತಿತರ ಕಡೆ ನಾಲ್ಕು ಹೆಚ್ಚುವರಿ ಶಾಖೆಗಳನ್ನು ತೆರೆದು ರೈತರಿಗೆ ಹೆಚ್ಚಿನ ಸೇವೆ ಒದಗಿಸಲಿದೆ. ಮೈಸೂರು ಬ್ಯಾಂಕ್ ಎಂದೆಂದೂ ನಿಮ್ಮ ಬ್ಯಾಂಕಾಗಿದ್ದು, ಸ್ತ್ರೀಶಕ್ತಿ ಮತ್ತು ರೈತ ಕುಟುಂಬಗಳಿಗೆ ಕಡಿಮೆ ಬಡ್ಡಿಗೆ ಕೋಟ್ಯಂತರ ರು. ಸಾಲ ನೀಡುವ ಮೂಲಕ ಗ್ರಾಮೀಣದ ಸರ್ವತೋಮುಖ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಸಾಲ ಪಡೆದವರೆಲ್ಲರೂ ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ  ಬ್ಯಾಂಕಿನ ಬೆಳವಣಿಗೆಗೂ ಸಹಕಾರಿಯಾಗಬೇಕೆಂದರು.
70 ಕೋಟಿಗೂ ಹೆಚ್ಚು ಸಾಲ: ಎಸ್.ಬಿ.ಎಂ.ಕೃಷಿ ಶಾಖೆಯ ಮುಖ್ಯ ವ್ಯವಸ್ಥಾಪಕ ರಿಷಿ ಚರಣ್ ಮಾತನಾಡಿ ಮಾರನಗೆರೆ ಶಾಖೆಯಿಂದ ವಿವಿಧ ಯೋಜನೆಗಳಿಗೆ ಈವೆರಗೂ ಒಟ್ಟು 70ಕೋಟಿಗೂ ಹೆಚ್ಚು ಸಾಲ ನೀಡಿದ್ಜು, ಇಂದು 1ಕೋಟಿಗೂ ಅಧಿಕ ಸಾಲ ನೀಡಲಾಗುತ್ತಿದೆ ಎಂದರು. ಎಸ್.ಬಿ.ಎಂ.ಮುಖ್ಯ ಶಾಖಾ ವ್ಯವಸ್ಥಾಪಕ ಅಶೋಕ್ ಕುಮಾರ್, ರೀಜನಲ್ ಬ್ಯಾಂಕಿನ ಕಿರಣ್ ಪಾಲ್ ಮತ್ತು ಗೋವಿಂದ ಕೃಷ್ಣ ಪ್ತಾಸ್ತಾವಿಕ ನುಡಿಗಳನ್ನಾಡಿದರು.
 ಬ್ಯಾಂಕಿನಿಂದ ಹತ್ತಾರು ವರ್ಷಗಳಿಂದ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡುವ ಉತ್ತಮ ಬಾಂಧವ್ಯ ಇಟ್ಟಿಕೊಂಡಿರುವ ಹಿರಿಯ ಗ್ರಾಹಕರನ್ನು ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಗೆ ಉಪಕಸುಬುಗಳ ಬಗ್ಗೆ ಮಾಹಿತಿ ನೀಡಿದರು.
  ಈ ಸಂದರ್ಭದಲ್ಲಿ ಅಮೃತೂರಿನ ಕುಣಿಗಲ್ ಜನ್ಮಭೂಮಿ ಜನಪದ ಕಲಾವೃಂದದ ಸಿದ್ದರಾಜು ನೇತೃತ್ವದ ತಂಡ ಬ್ಯಾಂಕಿನ ಸವಲತ್ತುಗಳ ಕುರಿತು ಜನಪದ ಗೀತೆ ಹಾಡಿದರು.
 ಶಶಿಕಲಾ ತಂಡದವರು ಪ್ರಾರ್ಥಿಸಿ, ಮಾರನಗೆರೆ ಎಸ್.ಬಿ.ಎಂ.ಶಾಖೆಯ ಉಪವ್ಯವಸ್ಥಾಪಕ ಬಿ.ಶಾಂತರಾಂ ಸ್ವಾಗತಿಸಿ, ಅಮೃತೂರು ಶಾಖೆಯ ವ್ಯವಸ್ಥಾಪಕ ರಾಮಸ್ವಾಮಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.