ತುಮಕೂರು

ವಿಜೃಂಭಣೆಯ ಬ್ರಹ್ಮರಥೋತ್ಸವ

Published On :

ಕ.ಪ್ರ.ವಾರ್ತೆ  ತುರುವೇಕೆರೆ  ಮಾ 24
ತಾಲೂಕಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಸಮೇತ ಬೇಟೇರಾಯಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಬಹಳ ವಿಜೃಭಣೆಯಿಂದ ನೆರವೇರಿತು.
ಬೆಳಗ್ಗೆಯಿಂದಲೇ ಅನೇಕ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮಂಟಪಪಡಿ ಸೇವೆ, ಬೂತಪ್ಪನ ಮಣೆ ಸೇವೆ ನಡೆಯಿತು. ನೂರಾರು ಮಹಿಳೆಯರಿಂದ ಭಜನಾ ಕಾರ್ಯಕ್ರಮ ಏರ್ಪಾಟಾಗಿತ್ತು. ಶಾಸಕ ಎಂ.ಟಿ.ಕೃಷ್ಣಪ್ಪ, ತಹಸೀಲ್ದಾರ್ ಕೆ.ಜೆ.ಮಂಜೇಗೌಡ, ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ, ಕಾಂಗ್ರೆಸ್ ಮುಖಂಡ ಎಂ.ಎಲ್. ಗೋವಿಂದರಾಜ್ ಗೌಡ, ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ.ಎನ್. ಶಶಿಶೇಖರ್, ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಮೊದಲಾದವರು ಭಾಗವಹಿಸಿದ್ದರು. ದೇವಾಲಯದ ಅಧ್ಯಕ್ಷ ಶಾಮಣ್ಣನವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ರಾಜ್ಯಾದ್ಯಂತ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.

ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 8 ಲಾರಿಗಳ ವಶ
ಕ.ಪ್ರ.ವಾರ್ತೆ  ಕೊರಟಗೆರೆ ಮಾ 24
ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 8 ಲಾರಿಗಳನ್ನು ತಹಸೀಲ್ದಾರ್ ಕೆ. ಏಕೇಶ್‌ಬಾಬು ಮತ್ತು ಅವರ ತಂಡ ವಶಪಡಿಸಿಕೊಳ್ಳುವುದರೊಂದಿಗೆ 30 ದಿನಗಳಲ್ಲಿ ಅಕ್ರಮ ಮರಳು ಲಾರಿಗಳಿಂದ 9.55 ಲಕ್ಷ ರು. ದಂಡ ವಸೂಲಿ ಮಾಡಿರುವುದಾಗಿ ತಿಳಿಸಿದಾರೆ.
ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದ ತಂಡ ಕಳೆದ ರಾತ್ರಿ ಕಾರ್ಯಾಚರಣೆ ಮಾಡಿ ಹೊಳವನಹಳ್ಳಿ ಹೋಬಳಿಯ ಅರಸಾಪುರದ ಗೇಟ್ ಬಳಿ ಮರಳು ತುಂಬಿ ಸಾಗಿಸುತಿದ್ದ 1 ಲಾರಿ, ಕೋಳಾಲ ಹೋಬಳಿಯ ಕೋಳಾಲ ಬಳಿ 2 ಲಾರಿ, ಯಲಚಿಗೆರೆ ಬಳಿ 2 ಲಾರಿ, ಕಸಬಾ ಹೋಬಳಿ ಜಿ.ನಾಗೇನಹಳ್ಳಿ ಬಳಿ 3 ಲಾರಿಗಳು ಸೇರಿದಂತೆ ಒಟ್ಟು 8 ಲಾರಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ತಹಸೀಲ್ದಾರ್ ಕೆ. ಏಕೇಶ್‌ಬಾಬು ಅವರು ಕೊರಟಗೆರೆ ತಹಸೀಲ್ದಾರ್‌ರಾಗಿ ಅಧಿಕಾರ ಸ್ವೀಕರಿಸಿ 30 ದಿನಗಳಲ್ಲಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಿಸುತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದರೊಂದಿಗೆ 9.55 ಲಕ್ಷ ರು. ದಂಡವಿದಿಸುವ ಮೂಲಕ ಸರ್ಕಾರಕ್ಕೆ ಆದಾಯ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾದ ಮಧುಸೂದನ್, ಎ.ಜಿ. ರಾಜು, ನರಸಿಂಹಮೂರ್ತಿ, ಗುರುಸಿದ್ದಯ್ಯ, ಕೆಂಪರಾಮಯ್ಯ, ಶ್ರೀನಿವಾಸ್, ರಂಗನಾಥ್, ನೀಲಕಂಠಯ್ಯ ಭಾಗವಹಿಸಿದ್ದರು.

ಸ್ವಸಹಾಯ ಸಂಘಗಳಿಂದ ಸಬಲೀಕರಣ ಸಾಧ್ಯ
ಕ.ಪ್ರ.ವಾರ್ತೆ  ತಿಪಟೂರು ಮಾ 24
ಗ್ರಾಮೀಣ ಹಾಗೂ ನಗರದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆರ್ಥಿಕ ಅಭಿವೃದ್ಧಿ ಸಾಧಿಸಲು ಸ್ವಸಹಾಯ ಸಂಘಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಪ್ರಾಂಶುಪಾಲ ಡಾ.ಜಯದೇವಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೋಟನಾಯಕನಹಳ್ಳಿ ಮತ್ತು ಹುಚ್ಚಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದ 5ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸಬಲೀಕರಣ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ನಾಲ್ಕು ಗೋಡೆಗಳ ಮಧ್ಯೆ ಬದುಕುವ ಮಹಿಳೆಯರು, ಪುರುಷರಿಗಿಂತಲೂ ಮೀರಿದ ವ್ಯವಹಾರಿಕ ಜ್ಞಾನ ಹೊಂದಿದ್ದು, ಆರ್ಥಿಕವಾಗಿ ಕಂಗೆಟ್ಟ ಕುಟುಂಬಗಳ ಹಿಂದೆ ಅಶಕ್ತ ಮಹಿಳೆಯರ ಪಾತ್ರವಿರುತ್ತದೆ. ಆದ್ದರಿಂದ ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗದೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಸ್ವಾವಲಂಬನೆ ಜೀವನವನ್ನು ನಡೆಸಬಹುದೆಂದು ತಿಳಿಸಿದರು.
 ಎಸ್‌ವಿಪಿ ಕಾಲೇಜಿನ ಉಪನ್ಯಾಸಕ ಪ್ರೊ.ರೇಣುಕಯ್ಯ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಮಕ್ಕಳ ಶೈಕ್ಷಣಿಕ ಜೀವನವನ್ನು ನಿರ್ಧರಿಸುವುದು ಪೋಷಕರ ಹಕ್ಕು. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ತಾವೆ ದಾರಿ ದೀಪವಾಗಬೇಕು. ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ನಮ್ಮ-ನಿಮ್ಮದ್ದಾಗಿದ್ದು, ಸಮುದಾಯದ ಜೊತೆ ಕ್ರಿಯಾಶೀಲತೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತಹ ಗುಣಗಳನ್ನು ಬೆಳೆಸುವಂತಹ ಶಿಕ್ಷಣ ಇಂದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅಗತ್ಯವಿದೆ ಎಂದರು. ವಿದ್ವಾನ್ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರಾಧಿಕಾರಿಗಳಾದ ಡಾ.ಡಿ.ಆರ್. ಹೊನ್ನಾಂಜಿನಯ್ಯ, ಪ್ರೊ. ಜ್ಯೋತಿಕಿರಣ್, ಎಸ್.ನಾಗರಾಜು, ಕೆ.ವಿ.ನೀಲಕಂಠಸ್ವಾಮಿ, ಡಾ.ಎಲ್.ಎಮ್.ವೆಂಕಟೇಶ್, ಕೆ.ಜೆ. ಮಹೇಶ್, ವಿಜಯಲಕ್ಷ್ಮಿ, ಕವಿ ಪರಪ್ಪ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.