ತುಮಕೂರು

ಮಹಿಳೆಯರಿಗೂ ತುಮಕೂರು ಮಣೆ

Published On :

-ಉಗಮ ಶ್ರೀನಿವಾಸ್
ಕ.ಪ್ರ. ವಾರ್ತೆ  ತುಮಕೂರು ಮಾ.28

ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಇಬ್ಬರು ಮಹಿಳೆಯರನ್ನು ಈವರೆಗೆ ಶಾಸನಸಭೆಗೆ ಕಳುಹಿಸುವ ಮೂಲಕ ಹೆಗ್ಗಳಿಕೆ ಮೆರೆದಿದೆ.
ಸ್ವಾತಂತ್ರ್ಯ ಹೋರಾಟಗಾರ್ತಿ ಭಾಗೀರಥಮ್ಮ ಹಾಗೂ ದೇವೇಗೌಡರ ಸೊಸೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರೇ ತುಮಕೂರು ಜಿಲ್ಲೆಯಿಂದ ಶಾಸನಸಭೆಗೆ ಆಯ್ಕೆಯಾಗಿರುವ ಇಬ್ಬರು ಮಹಿಳೆಯರು.
ಒಬ್ಬರು ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದರೆ ಮತ್ತೊಬ್ಬರು ಉಪಚುನಾವಣೆಯಲ್ಲಿ ಶಾಸನಸಭೆಗೆ ಆಯ್ಕೆಯಾದರು. ಸ್ವಾತಂತ್ರ್ಯ ಹೋರಾಟಗಾರ್ತಿ ಭಾಗೀರಥಮ್ಮ ಅವರು 1967 ರಲ್ಲಿ ಕಾಂಗ್ರೆಸ್ ಪಕ್ಷದಿಂದ ತುಮಕೂರು ನಗರ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಶಾಲಿಯಾಗಿದ್ದರು. ಅಂದು ನಡೆದ ಚುನಾವಣೆಯಲ್ಲಿ ಭಾಗೀರಥಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನಯ್ಯ ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಶಾಸನಸಭೆಗೆ ಪ್ರವೇಶಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1967 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಭಾಗೀರಥಮ್ಮ ಅವರು 15178 ಮತಗಳನ್ನು ಪಡೆದರೆ ಇಂಡಿಯನ್ ನ್ಯಾಷನಲ್ ಡೆಮಾಕ್ರೆಸಿಯಿಂದ ಸ್ಪರ್ಧಿಸಿದ್ದ ಟಿ.ಎಸ್. ಮಲ್ಲಿಕಾರ್ಜುನಯ್ಯ ಅರು 10919 ಮತಗಳನ್ನು ಪಡೆದಿದ್ದರು. ಅಂದಿನ ಚುನಾವಣೆಯಲ್ಲಿ 33771 ಮಂದಿ ಮತ ಚಲಾಯಿಸಿದ್ದರು.
ಸುಮಾರು 4 ದಶಕಗಳ ನಂತರ ಅಂದರೆ 2007 ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ  ಮತ್ತೊಬ್ಬ ಮಹಿಳೆಯನ್ನು ಶಾಸನಸಭೆಗೆ ಕಳುಹಿಸಿದ ಕೀರ್ತಿಗೆ ತುಮಕೂರು ಮತ್ತೊಮ್ಮೆ ಪಾತ್ರವಾಯಿತು.
ಆದರೆ 4 ದಶಕಗಳ ಬಳಿಕೆ ಶಾಸನಸಭೆಗೆ ಆಯ್ಕೆಯಾದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೊಸೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ. 2008 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ನಿಂದ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಪುತ್ರ ಗೌರಿಶಂಕರ್ ಆಯ್ಕೆಯಾಗಿದ್ದರು. ಆದರೆ ಆಪರೇಷನ್ ಕಮಲದಿಂದಾಗಿ ಅವರು ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದರು. ಅದೇ ವರ್ಷದ ಡಿಸೆಂಬರ್ನಲ್ಲಿ ಉಪಚುನಾವಣೆ ಘೋಷಣೆಯಾಯ್ತು. ಆಗ ಜೆಡಿಎಸ್ಗೆ ಆ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯವಿತ್ತು.
ಆಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರು. ಆ ಮೂಲಕ ಅನಿತಾ ಕುಮಾರಸ್ವಾಮಿ ಶಾಸನಸಭೆಗೆ ಆಯ್ಕೆಯಾದರು.
ಅಂದಿನ ಚುನಾವಣೆಯಲ್ಲಿ ಜೆಡಿಎಸ್ನ ಅನಿತಾ ಕುಮಾರಸ್ವಾಮಿ 49768 ಮತಗಳನ್ನು ಪಡೆದರೆ ಕಾಂಗ್ರೆಸ್ನ ಕೆ.ಎನ್. ರಾಜಣ್ಣ 46287 ಮತ ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ. ಚನ್ನಿಗಪ್ಪ ಅವರು 31257 ಮತಗಳನ್ನು ಪಡೆದರು. ಒಟ್ಟಾರೆಯಾಗಿ ಇಬ್ಬರು ಮಹಿಳೆಯರನ್ನು ಶಾಸನಸಭೆಗೆ ಕಳುಹಿಸಿದ ಕೀರ್ತಿಗೆ ತುಮಕೂರು ಪಾತ್ರವಾಗಿದ್ದು ಇತಿಹಾಸ.

ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾದಯಾತ್ರೆ
ಕ.ಪ್ರ. ವಾರ್ತೆ ಮಧುಗಿರಿ ಮಾ.28

ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಮಧುಗಿರಿ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹೋರಾಟ ಕೈಗೊಳ್ಳಲು  ಜೆಡಿಎಸ್ ಮುಖಂಡ ಬಿ.ಎನ್. ಶಿವಣ್ಣ ನೇತೃತ್ವದಲ್ಲಿ ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಪಾದಯಾತ್ರೆ ನಡೆಸಿ ಜನರ ಗಮನ ಸಳೆದರು.
 ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ದಂಡಿನಮಾರಮ್ಮ ದೇವಸ್ಥಾನದ ಮುಂಭಾಗ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿ.ಎನ್. ಶಿವಣ್ಣ ಚುನಾವಣೆಗಾಗಿ ರಾಜಕೀಯ ಬೆರಸದೇ ಬಯಲು ಸೀಮೆ ಜನರ ನೀರಿನ ಭವಣೆ ನೀಗಿಸಲು ಮಧುಗಿರಿ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ನಿರಂತರ ಹೋರಾಟ ಕೈಗೊಳ್ಳುವುದಾಗಿ ಶಕ್ತಿ ದೇವತೆ ಮಧುಗಿರಿ ದಂಡಿನಮಾರಮ್ಮ ದೇವಿ ಎದುರು  ಪ್ರತಿಜ್ಞೆ ಸ್ವೀಕರಿಸಿದರು.  ಚುನಾವಣೆ ಬದಿಗೊತ್ತಿ ಈ ಭಾಗದ ಜನತೆಗೆ  ಮೊದಲು ಶಾಶ್ವತ ನೀರಾವರಿ ಯೋಜನೆ ಜಾರಿಗೆ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ಕೈಗೊಳ್ಳುವುದಾಗಿ ಶಿವಣ್ಣ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.