ರೋಟರಿ ಬಾಲಭವನಕ್ಕೆ ಮರುಜೀವ
ಕ.ಪ್ರ. ವಾರ್ತೆ , ಕುಣಿಗಲ್ , ಮೇ 24
ಪುರಸಭೆ ಕಾರ್ಯಾಲಯದ ಅವರಣದಲ್ಲಿ ಕಳೆದೆರಡು ದಶಕಗಳಿಂದ ಪಾಳು ಬಿದ್ದಿದ್ದ ರೋಟರಿ ಬಾಲಭವನಕ್ಕೆ ಪುರಸಭಾಡಳಿತ ಮರುಜೀವ ನೀಡಿ ಪುರಸಭೆವಶಕ್ಕೆ ಪಡೆದು, ಭವನವನ್ನು ಸದ್ಬಳಕೆ ಮಾಡುವ ದಿಸೆಯಲ್ಲಿ ಮುಂದಾಗಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪುರಸಭೆ ಆವರಣದಲ್ಲಿನ ಜಾಗದಲ್ಲಿ 1971ರಲ್ಲಿ ರೋಟರಿ ಅಧ್ಯಕ್ಷರಾದ ವೈ.ಕೆ.ರಾಮಯ್ಯನವರು ರೋಟರಿ ಸಾರ್ವಜನಿಕ ಮಕ್ಕಳ ಗ್ರಂಥಾಲಯ ನಿರ್ಮಾಣ ಮಾಡಲು ಸಂಕಲ್ಪಿಸಿ, ನಗರದ ಪ್ರಮುಖ ಗಣ್ಯರಿಂದ ವಂತಿಗೆ ಸಂಗ್ರಹಿಸಿಲು ನಿರ್ಧರಿಸಿ, 28-11-1971ರಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು. ಹಲವು ಏಳುಬೀಳುಗಳ ಹಾಗೂ ಆರ್ಥಿಕ ಕೊರತೆಯ ನಡುವೆ 15 ವರ್ಷಗಳ ನಂತರ ಕಟ್ಟಡ ಒಂದುಕಾಲು ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡು 16-02-1986ರಲ್ಲಿ ರೋಟರಿ ಮಾಜಿ ಗವರ್ನರ್ ರಮೇಶ್ ಯು ಪೈ, ಸಚಿವ ವೈ.ಕೆ.ರಾಮಯ್ಯನವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ, ಸಾರ್ವಜನಿಕ ಸೇವೆಗೆ ನೀಡಿದ್ದರು. ನಾಗರಿಕರ ಪಾಲಿಗೆ ರೋಟರಿ ಬಾಲಭವನ ಎಂದೆ ಖ್ಯಾತವಾಯಿತು.
ಪ್ರಾರಂಭದ ದಿನಗಳಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿ, ದಿನಕಳೆದ ನಂತರ ತಾಲೂಕಿನಲ್ಲಿ ರೋಟರಿ ಸೇವೆಗಳು ಕಳೆಗುಂದುತ್ತಾ, ರೋಟರಿ ಬಾಲಭವನ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿ, ಇಡೀ ಕಟ್ಟಡ ಧೂಳಿನಮಯವಾಯಿತಲ್ಲದೆ, ಪುರಸಭೆ ಆವರಣದಲ್ಲಿದ್ದು ಪಾಳುಕಟ್ಟಡವಾಗಿ ಗೋಡೆಗಳಲ್ಲಿ ಗಿಡಗಳು ಬೆಳೆದು ಪಳೆಯುಳಿಕೆಯಂತಾಗಿ, ನಾಗರಿಕರ ಅಸಮಾಧಾನಕ್ಕೆ ಕಾರಣವಾಯಿತು.
ದಿನಕಳೆದಂತೆ ಪುರಸಭೆ ಕೆಲಸ ಕಾರ್ಯಗಳು, ಕಾರ್ಯನಿರ್ವಹಿಸುವ ವಿಭಾಗಗಳು ಹೆಚ್ಚಾಗುತ್ತಾ ಪುರಸಭೆಯ ಕಟ್ಟಡ ಚಿಕ್ಕದಾಗತ್ತಿರುವ ಸಮಯದಲ್ಲಿ ಪಕ್ಕದಲ್ಲೆ ಹಾಳು ಬೀಳುತ್ತಿದ್ದ ರೋಟರಿ ಬಾಲಭವನ ಬಳಸಿಕೊಳ್ಳುವಂತೆ ಹಲವು ಸಂಘ, ಸಂಸ್ಥೆಗಳು ಹಾಗೂ ನಾಗರಿಕರು ಒತ್ತಾಯ ಮಾಡಿ, ಈ ಮೂಲಕವಾದರೂ ಬಾಲಭವನ ಸದ್ಬಳಕೆಯಾಗುವ ಆಶೆ ವ್ಯಕ್ತವಾಯಿತು.
ಅಭಿವೃದ್ಧಿ: ಕಳೆದ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡ ನಂತರ, ಪುರಸಭೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ಈ ಬಾಲಭವನ ಸದ್ಬಳಕೆ ಬಗ್ಗೆ ಚಿಂತಿಸಿ, ಪಾಳು ಬಿದಿದ್ದ ರೋಟರಿ ಬಾಲಭವನವನ್ನು ಪುರಸಭಾಧಿಕಾರಿಗಳು, ಸ್ವಚ್ಚಗೊಳಿಸಿ, ಸದರಿ ಭವನವನ್ನು ಸಾಮಾನ್ಯಸಭೆ ನಡೆಸುವ ಸಭಾಂಗಣವಾಗಿ ಹಾಗೂ ಅಧ್ಯಕ್ಷರ, ಉಪಾಧ್ಯಕ್ಷರಿಗೆ ಕೊಠಡಿ ಕಲ್ಪಿಸಲು ಚಿಂತಿಸಿ, ಅಭಿವೃದ್ಧಿಗೊಳಿಸಲಾಗಿದೆ.
ಈ ಮಧ್ಯೆ ಶಾಸಕ ಡಿ.ನಾಗರಾಜಯ್ಯನವರು ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಶುಭಾ, ಪಾಳು ಬೀಳುತ್ತಿದ್ದ ರೋಟರಿ ಭವನದ ಸದ್ಬಳಕೆ ಬಗ್ಗೆ ಶಾಸಕರಿಗೆ ವಿವರಿಸಿದರು. ಶಾಸಕರು ನವೀಕರಣ ಕಾರ್ಯವನ್ನು ವೀಕ್ಷಿಸಿ ಹಲವು ಸಲಹೆ ಸೂಚನೆ ನೀಡಿರುವುದು ಬಾಲಭವನದ ಸದ್ಬಳಕೆಗೆ ಪೂರಕವಾಗಿ ಪರಿಣಮಿಸಿದೆ. ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಎಲ್.ಹರೀಶ್, ಆಯಿಶಾಬೀ, ಅನ್ಸರ್ಪಾಶ ಹಾಜರಿದ್ದು, ಹಳೇಯ ಸಭಾಂಗಣದಲ್ಲಿ ಜಾಗದ ಕೊರತೆಯಿದ್ದು, ಬಾಲಭವನದ ಹಾಲ್ನ್ನು ನೂತನ ಸಭಾಂಗಣವನ್ನಾಗಿ ನವೀಕರಿಸಲು ಹಲವು ಸಲಹೆ ಸೂಚನೆ ನೀಡಿ ಪೂರಕವಾಗಿ ಸ್ಪಂದಿಸಿದ್ದಾರೆ. ಒಟ್ಟಿನಲ್ಲಿ ಕಳೆದೆರಡು ದಶಕಗಳಿಂದಲೂ ಪಾಳುಬೀಳುತ್ತಿದ್ದ ರೋಟರಿ ಬಾಲಭವನ ಸದ್ಬಳಕೆಗೆ ಪುರಸಭಾಡಳಿತ ಮುಂದಾಗಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

