ತುಮಕೂರು

ಮಂದಗತಿಯಲ್ಲಿ ಮತದಾನ

Published On :

ಕ.ಪ್ರ.ವಾರ್ತೆ, ತುಮಕೂರು, ಏ.17
ತುಮಕೂರು ನಗರದ ಬಹುತೇಕ ಕಡೆ ಗುರುವಾರ ಮಂದಗತಿಯಲ್ಲಿ ಮತದಾನ ನಡೆಯಿತು.
ಚುನಾವಣೆ ಜನರಲ್ಲಿ ಅಷ್ಟಾಗಿ ಉತ್ಸಾಹ ಕಾಣುತ್ತಿಲ್ಲ ಎಂಬುದು ಈ ಮತದಾನದಿಂದ ವೇದ್ಯವಾಯಿತು.
ತುಮಕೂರಿನ ಗಾಂಧಿನಗರ, ಸೋಮೇಶ್ವರಪುರಂ, ಎಸ್‌ಐಟಿ, ಗೋಕುಲ, ಬಟವಾಡಿ, ಗಾಂಧಿನಗರ ಮುಂತಾದ ಕಡೆಗಳಲ್ಲೂ ಕೂಡ ಮಂದಗತಿಯಲ್ಲಿ ಮತದಾನ ನಡೆಯಿತು. ಮತಗಟ್ಟೆ ಕೇಂದ್ರದ ಬಳಿ ಈ ಹಿಂದಿನ ಚುನಾವಣೆಯಲ್ಲಿ ಇರುತ್ತಿದ್ದ ಜನಜಂಗುಳಿ ಕಾಣುತ್ತಿರಲಿಲ್ಲ. ಸಾಲು ಸಾಲು ರಜೆಯ ಕಾರಣವೋ ಅಥವಾ ಬಿರುಬಿಸಿಲಿನ ಕಾರಣಕ್ಕೋ ಜನ ಅಷ್ಟಾಗಿ ಉತ್ಸಾಹ ತೋರಿಸದೇ ಇದ್ದುದ್ದರಿಂದ ಚುನಾವಣೆ ಅತ್ಯಂತ ನೀರಸವಾಯಿತು.
ಮಧ್ಯಾಹ್ನ 1 ರಿಂದ 3 ಗಂಟೆಯ ಅವಧಿಯಲ್ಲಿ ಬಹುತೇಕ ಮತಗಟ್ಟೆ ಬಳಿ ಜನರೇ ಇಲ್ಲದೇ ಮತಗಟ್ಟೆ ಅಧಿಕಾರಿಗಳು ಮತ್ತು ಪೊಲೀಸರು ಇದ್ದರು. ಮತಗಟ್ಟೆ ಕೇಂದ್ರದ ಬಳಿ ಹಿಂದಿನ ಚುನಾವಣೆ ರೀತಿ ಚರ್ಚೆ ನಡೆಸುವುದಾಗಲಿ ಯಾವುದೂ ಕಾಣುತ್ತಿರಲಿಲ್ಲ.
ಬೆಳಿಗ್ಗೆ ಲವಲವಿಕೆ: ಬೆಳಗ್ಗೆ 7 ಗಂಟೆಗೆ ಒಂದಷ್ಟು ಮಂದಿ ಲವಲವಿಕೆಯಿಂದ ಮತದಾನ ಮಾಡಿದ್ದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಬಿಕೋ ಎನ್ನುತ್ತಿತ್ತು. ಚುನಾವಣೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಜನಜಂಗುಳಿ ಕಡಿಮೆ ಇತ್ತು. ಕೆಲವು ಕಡೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.
ಒಟ್ಟಾರೆಯಾಗಿ ಚುನಾವಣೆ ಅತ್ಯಂತ ನೀರಸದಿಂದ ಕೂಡಿತ್ತು. ಎಲ್ಲಾ ಪಕ್ಷಗಳ ಚುನಾವಣಾ ಏಜೆಂಟ್‌ಗಳು ಕೂಡ ಈ ನೀರಸ ಮತದಾನಕ್ಕೆ ಬೇಸತ್ತು ಹೋಗಿದ್ದರು.
 ಸಾಲು ರಜೆ ಇದ್ದುದ್ದರಿಂದ ಬಹುತೇಕ ಮಂದಿ ಪ್ರವಾಸಕ್ಕೆ ಹೊರಟಿದ್ದರು. ಹೀಗಾಗಿ ಇದೊಂದು ನೀರಸ ಮತದಾನ ಎನ್ನುವುದು ಚುನಾವಣಾ ಏಜೆಂಟ್‌ಗಳ ಆಂಬೋಣ.
ಅಭ್ಯರ್ಥಿಗಳ ಭೇಟಿ: ಉಳಿದಂತೆ ತುಮಕೂರು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಮತ್ತಿತರರು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದರು.
ಅತ್ಯಂತ ಸುಶಿಕ್ಷಿತರು ಇರುವ ಜಾಗಗಳಲ್ಲಿ ಈ ಬಾರಿ ಅತ್ಯಂತ ಕಡಿಮೆ ಮತದಾನವಾಗಿರುವುದು ವಿಶೇಷ. ತುಮಕೂರಿನ ಸೋಮೇಶ್ವರಪುರಂನಲ್ಲಂತೂ ಅತ್ಯಂತ ನೀರಸ ಮತದಾನವಾಗಿತ್ತು. ಸಂಜೆ 5 ಗಂಟೆಯಾದರೂ ಶೇ. 40 ರಷ್ಟು ಮತದಾನವಾಗಿರಲಿಲ್ಲ.
ಒಟ್ಟಾರೆಯಾಗಿ ಅತ್ಯಂತ ಕುತೂಹಲ ಕೆರಳಿಸಿದ್ದ, ಕಳೆದ ಒಂದು ತಿಂಗಳಿನಿಂದ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದ್ದ ಚುನಾವಣೆ ಅತ್ಯಂತ ನೀರಸವಾಗಿ ಮುಕ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.