ತುಮಕೂರು

ವಸಂತೋತ್ಸವದ ಪ್ರಯುಕ್ತ ಅದ್ಧೂರಿ ಹೋಳಿ ಆಚರಣೆ

Published On :

ಪಾವಗಡ: ಶ್ರೀ ರಾಮ ನವಮಿ ಮತ್ತು ಶ್ರೀರಾಮ ಪಟ್ಟಾಭೀಷಕ ನಂತರ ಶುಕ್ರವಾರ ವಸಂತೋತ್ಸವದ ಪ್ರಯುಕ್ತ ಪಟ್ಟಣದ ಆರ್ಯ ವೈಶ್ಯ ಮಂಡಳಿಯ ಯುವಕರು ಹೋಳಿ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆ 9ಗಂಟೆಗೆ ಪಟ್ಟಣದ ಶ್ರೀ ಶನೇಶ್ವರ ವೃತ್ತದ ಬಳಿ ಸೇರಿದ ನೂರಾರು ಆರ್ಯ ವೈಶ್ಯ ಮಂಡಳಿಯ ಯುವಕರು ಕುಂಕುಮ ಮತ್ತು ಅರಿಶಿನ ಬೆರೆಸಿದ ನೀರನ್ನು ಬಕೆಟ್‌ಗಳಲ್ಲಿ ತುಂಬಿಕೊಂಡು ಒಬ್ಬರಿಗೊಬ್ಬರು ಹೋಳಿ ಏರಚುವ ಮೂಲಕ ಅವಾತರ ಪುರುಷ ಮಹಾ ವಿಷ್ಣು ಮತ್ತು  ಶ್ರೀರಾಮನಿಗೆ ಜೈಕಾರ ಹಾಕಿ ಸಂಭ್ರಮ ವ್ಯಕ್ತಪಡಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೊರಟು ಅರ್ಯ ವೈಶ್ಯರಿಗೆ ಸೇರಿದ ವಿವಿಧ ಅಂಗಡಿಗಳ ಬಳಿ ತೆರಳಿ ವ್ಯಾಪಾರದಲ್ಲಿ ನಿರತರಾಗಿದ್ದ ಆರ್ಯ ವೈಶ್ಯ ಯುವಕರಿಗೆ ಹೋಳಿಯನ್ನು ಏರಚುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಪ್ರಜ್ಲಲ್ ಬುಕ್ ಸೆಂಟರ್ ಮಾಲೀಕ ಸತೀಶ್, ಪ್ರವೀಣ್, ಭಾಗ್ಯರಾಜ್, ಡಿಜಿಟಲ್ ಸಂಟರ್ ಮಾಲೀಕ ಹರೀಶ್, ತೆಟುರಾಜ್ ಸೇರಿದಂತೆ ಆರ್ಯ ವೈಶ್ಯ ಮಂಡಳಿಯ ನೂರಾರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಧುಗಿರಿಯಲ್ಲಿ ಶೇ.70.59 ಮತದಾನ
ಮಧುಗಿರಿ: ತುಮಕೂರು ಲೋಕಸಭಾಕ್ಕೆ ಸೇರಿದ ಮಧುಗಿರಿ ವಿಭಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೇ ಬಹುತೇಕ ಶಾಂತಿಯುತ ಮತದಾನ ನಡೆಯಿತು.
ಮಧುಗಿರಿ ತಾಲೂಕಿನಲ್ಲಿ 242 ಮತಗಟ್ಟೆ ಕೇಂದ್ರಗಳಲ್ಲೂ ಯಾವುದೇ ಗಲಾಟೇ ಗದ್ದಲಗಳಿಲ್ಲದೆ ಶಾಂತಿಯುತ ಮತದಾನ ನಡೆದಿದೆ.  ಶೇ.70.59 ಮತದಾನ ಆಗಿದೆ. ಒಟ್ಟು 1 ಲಕ್ಷ 30 ಸಾವಿರದ 400ಕ್ಕೂ  ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಕ್ಷೇತ್ರದಾದ್ಯಂತ ಸುತ್ತಿ ಮತದಾರನ ಬಳಿ ತೆರಳಿ ದೊಡ್ಡ ಮಟ್ಟದ ಪ್ರಚಾರ ನಡೆಸಿದ್ದರು. ಶಾಸಕ ಕೆ.ಎನ್.ರಾಜಣ್ಣ ಮಧುಗಿರಿ ಸರ್ಕಾರಿ ಪಪೂ ಕಾಲೇಜಿನ 166ನೇ ಮತ ಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸುವ ಮೂಲಕ ಗಮನ ಸಳೆದರು. ಪುರವರ ಹೋಬಳಿ ಬ್ಯಾಲ್ಯ ಗ್ರಾ.ಪಂ.ಉಪಾಧ್ಯಕ್ಷ ಹನುಮಂತಪುರ ಭೈರಣ್ಣ ಹಂದ್ರಾಳು ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಶಾಸಕ ಕೆ.ಎನ್.ರಾಜಣ್ಣ ಸುದ್ದಿಗಾರರ ಜತೆ ಮಾತನಾಡಿ,16ನೇ ಲೋಕಸಭಾ ಚುನಾವಣೆ ನಿಮಿತ್ತ ಆಯೋಗ ಎಲ್ಲ ರೀತಿಯಿಂದಲೂ ಬಿಗಿ ಬಂದೋಬಸ್ತ್ ಕ್ರಮ ಕೈಗೊಳ್ಳುವ ಮೂಲಕ ಮುಕ್ತ,ನ್ಯಾಯ ಸಮ್ಮತ ಚುನಾವಣೆ ನಡೆಸಿದ್ದು ಸ್ವಾಗತಾರ್ಹ. ಈ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರ ಜಯ ಖಚಿತ ಎಂದರು.  

ವಂಚಿತರಾದ ಚಾಲಕ, ನಿರ್ವಾಹಕರು
ತಿಪಟೂರು: ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ತಿಪಟೂರು ಕೆಎಸ್‌ಆರ್‌ಟಿಸಿ ಘಟಕದ ಚಾಲಕ ಹಾಗೂ ನಿರ್ವಾಹಕರನ್ನು ಚುನಾವಣೆಯ ಪ್ರಯುಕ್ತ ವಿವಿಧ ಸ್ಥಳಗಳಿಗೆ ನಿಯೋಜಿಸಲಾಗಿದ್ದರಿಂದ ಎಲ್ಲಾ ನೌಕರರು ಮತದಾನ ಮಾಡುವ ಅವಕಾಶದಿಂದ ವಂಚಿತರಾಗಿದ್ದು, ಇದಕ್ಕೆ ತಾಲೂಕು ಚುನಾವಣಾ ಇಲಾಖೆಯ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಚಾಲಕರು ಹಾಗೂ ನಿರ್ವಾಹಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮತದಾನ ಮಾಡುವುದು ಪ್ರತಿ ಪ್ರಜೆಯ ಆದ್ಯ ಕರ್ತವ್ಯವಾಗಿದ್ದು, ಎಲ್ಲಾ ನೌಕರರು ಮತದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರೂ ಅಧಿಕಾರಿಗಳು ಅವಕಾಶ ವಂಚಿತರನ್ನಾಗಿ ಮಾಡಿದ್ದಾರೆ. ನೌಕರರಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ವಿತರಿಸಿದ್ದು, ಆದರೆ ಅದಕ್ಕೆ ಸಂಬಂಧಿಸಿದಂತೆ ಬ್ಯಾಲೆಟ್ ಪೇಪರ್ ಹಾಗೂ ಮುಂತಾದ ದಾಖಲೆಗಳ ಸಂಬಂಧಪಟ್ಟ ಚುನಾವಣಾ ಸ್ಥಳಗಳಿಗೆ ನೀಡದ ಕಾರಣ ನೌಕರರು ಮತದಾನದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆಯಾದರೂ ಯಾವ ಮತದಾರರಿಗೂ ಈ ರೀತಿ ಅನ್ಯಾಯವಾಗದಂತೆ   ನೋಡಿಕೊಳ್ಳಬೇಕೆಂದು ಮತದಾನ ವಂಚಿತ ನೌಕರರು ಮನವಿ ಮಾಡಿದ್ದಾರೆ.

ಗೆಲ್ಲುವ ವಿಶ್ವಾಸವಿದೆ: ಪುಟ್ಟರಾಜು
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕನಿಷಷ್ಠ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸುವುದಾಗಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಸಂಸತ್ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿದ್ದ ಅಲೆಯನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ತಮ್ಮ ಗೆಲವಿಗೆ ಶ್ರಮಿಸಿದ್ದಾರೆಂಬ ವಿಶ್ವಾಸವಿದೆ ಎಂದರು. ಚುನಾವಣೆಯಲ್ಲಿ ಎಸ್‌ಡಿಪಿಐ, ಸಿಪಿಎಂ ಸೇರಿದಂತೆ ಅನೇಕ ಸಂಘಟನೆಗಳು ಜೆಡಿಎಸ್‌ನ್ನು ಬೆಂಬಲಿಸಿತು. ಮೊದಲಿನಿಂದಲೂ ಕಾಂಗ್ರೆಸ್‌ನ್ನು ವಿರೋಧಿಸುತ್ತಾ ಬಂದಿದ್ದ ರೈತಸಂಘದಲ್ಲಿನ ನಿಷ್ಠಾವಂತ ಕಾರ್ಯಕರ್ತರೂ ತಮಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.

ಹಾವು ಕಡಿದುರೈತ ಸಾವು
ಶ್ರೀರಂಗಪಟ್ಟಣ: ಹಾವು ಕಡಿದು ಆಸ್ಪತ್ರೆಗೆ ದಾಖಲಾಗಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಕೃಷ್ಣಾನಂದ (45) ಸಾವನ್ನಪ್ಪಿದರು. ಏ.11 ರಂದು ಜಮೀನನಲ್ಲಿ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ  ಹಾವು ಕಡಿದು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಅವಘಡ ನಡೆದಾಗ ಜಾಗೃತರಾಗಿ'
ಪಾಂಡವಪುರ: ಲೈಸಿಯಂ ಕಂಪ್ಯೂಟರ್ಸ್ ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಆಶ್ರಯದಲ್ಲಿ ಪಟ್ಟಣದಲ್ಲಿ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗೆ ಆಕಸ್ಮಿಕ ಬೆಂಕಿ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸುವ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ತಾಪಂ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ ಚಾಲನೆ ನೀಡಿ ಮಾತನಾಡಿ, ಆಕಸ್ಮಿಕವಾಗಿ ಬೆಂಕಿ ಅವಘಡಗಳು ನಡೆದಾಗ ತಕ್ಷಣವೇ ಜಾಗೃತರಾಗಬೇಕು. ವಸ್ತುಗಳು ನಷ್ಟವಾಗದಂತೆ ಎಚ್ಚರವಹಿಸಬೇಕು. ಹಾಗೆಯೇ ಎಲೆಕ್ಟ್ರಿಕಲ್ ಹಾಗೂ ಗ್ಯಾಸ್ ಸಿಲಿಂಡರ್ ಸ್ಪಾರ್ಕ್ ಆದಾಗಲೂ ಜಾಗೃತಿ ವಹಿಸಬೇಕು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸುವ ಮೂಲಕ ಹೆಚ್ಚಿನ ಅನಾಹುತವಾಗದಂತೆ ಬೆಂಕಿ ಅವಘಡಗಳನ್ನು ಆದಷ್ಟು ತಡೆಗಟ್ಟಬೇಕು ಎಂದು ಕರೆ ನೀಡಿದರು.
ಪಾಂಡವಪುರ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಆರ್. ಶಿವಪ್ಪ ಉಪನ್ಯಾಸ ನೀಡಿದರು. ಎ ಪ್ಲಸ್, ಬಿ ಪ್ಲಸ್, ಸಿ ಪ್ಲಸ್ ಹಾಗೂ ಡಿ ಪ್ಲಸ್ ಮಾದರಿಯಲ್ಲಿ ಬೆಂಕಿ ನಂದಿಸವ ಕುರಿತು ತಿಳಿಸಿದರು.

ಮಹಿಳೆಯರ ಧ್ವನಿ ಅಕ್ಕಮಹಾದೇವಿ
ಕಿಕ್ಕೇರಿ: ಮಹಿಳೆಯರ ಧ್ವನಿಯಾಗಿ ನಿಂತ ಶರಣೆ ಅಕ್ಕಮಹಾದೇವಿಯಾಗಿದ್ದಾರೆ ಎಂದು ಇಂಟರ್ ನ್ಯಾಷನಲ್ ಕನಕದಾಸ ಮಿಷನ್ ಅಧ್ಯಕ್ಷ ಕೋಡಿಹಳ್ಳಿ ನಂಜುಂಡೇಗೌಡ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ನಡೆದ ಮಹಾಶರಣೆ ಅಕ್ಕಮಹಾದೇವಿಯ ಜಯಂತಿಯಲ್ಲಿ ಮಾತನಾಡಿ, ನವ್ಯ ಜಗತ್ತಿನಲ್ಲಿ ಹಬ್ಬಗಳು ಅಬ್ಬರದ ಆಚರಣೆಯಾಗುತ್ತಿದೆ. ವಾಸ್ತವತೆಯ ನೆನಪು ಮಾಸಿ ಡಾಂಬರೀಕರಣ ಮೇಳೈಸಿವೆ ಎಂದು ವಿಷಾದ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ವಚನಗಳ ಮೂಲಕ ಲೋಕದ ಅಂಕು ಡೊಂಕು ಲೋಭ ಮತ್ಸರಗಳನ್ನು ಜಗತ್ತಿಗೆ ತೋರಿಸಿದ ಮಹಾನ್ ಸಾಧ್ವಿ ಅಕ್ಕರವರ ಆದರ್ಶ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದರು. ದೇವರಾಜು, ವಕೀಲ ಎಲ್.ಕೆ. ಕಾಳೇಗೌಡ, ಕುಮಾರಸ್ವಾಮಿ, ಬಲರಾಮೇಗೌಡ ಇದ್ದರು.

ಅಧ್ಯಯನ ಪ್ರವಾಸ
ಮಳವಳ್ಳಿ: ಮಂಡ್ಯ ಜಿಲ್ಲಾ ದಾಸಶ್ರೇಷ್ಠ ಕನಕದಾಸ, ಸಂಗೊಳ್ಳಿರಾಯಣ್ಣ ವಿಚಾರ ವೇದಿಕೆ ವತಿಯಿಂದ ಕಾಗಿನೆಲೆ ಶ್ರೀ ಕ್ಷೇತ್ರಕ್ಕೆ ಅಧ್ಯಯನ ಪ್ರವಾಸ ಮೇ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರವಾಸವನ್ನು ಮಾಡಲಿಚ್ಚಿಸುವ ಬಡವರಿಗೆ ಉಚಿತ ಸೌಲಭ್ಯ ಒದಗಿಸಲಾಗುವುದು. ಆಸಕ್ತರು ಮಂಡ್ಯ ಜಿಲ್ಲಾ ದಾಸಶ್ರೇಷ್ಠ ಕನಕದಾಸ, ಸಂಗೊಳ್ಳಿರಾಯಣ್ಣ ವಿಚಾರ ವೇದಿಕೆ, ಎನ್‌ಇಎಸ್ ಬಡಾವಣೆ ಮಳವಳ್ಳಿ ಕಚೇರಿಯಲ್ಲಿ ಖುದ್ದಾಗಿ ಹೆಸರು ನೋಂದಾಯಿಸಲು ಕೋರಲಾಗಿದೆ. ಮಾಹಿತಿಗಾಗಿ ಟಿ.ಪಿ.ಕರಿಯಪ್ಪ- 9036335063ಗೆ  ಅಥವಾ ಇಮೇಲ್ ವಿಳಾಸ  ್ಞಛಟಿಛ್ಞಛಡಛಟ್ಜ್ಟಿಟಟ್ಝಝ್ಝ್ಛಛ್ಠಛಢಜಜ್ಝ್ಞಜಣ್ಜಟಛ್ಝಟ.್ಛ್ಟಟ ಗೆ ಸಂಪರ್ಕಿಸ ಬಹುದಾಗಿದೆ.

ವಿಜೃಂಭಣೆಯ ಪಾತಾಳೇಶ್ವರ ಜಾತ್ರೆ
ಮಳವಳ್ಳಿ: ತಾಲೂಕಿನ ಪೂರಿಗಾಲಿ ಗ್ರಾಮದ ಹೊರವಲಯದಲ್ಲಿರುವ ಪಾತಾಳೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಸೋಮವಾರ ರಾತ್ರಿ ಕುರುಬ ಸಮುದಾಯದ ಮಡಿವಂತಿಕೆಯೊಂದಿಗೆ 19 ಗಡಿಗಳ ಉತ್ಸವ ಹಾಗೂ ಕೊಂಡ ಸೇರಿದಂತೆ ಪೂಜ ಕುಣಿತದ ಜೊತೆಗೆ ಡೊಳ್ಳುಕುಣಿತ, ವೀರಗಾಸೆ, ನಂದಿ ಕಂಬದ ಕುಣಿತದ ನಂತರ ಮಂಗಳವಾರ ಬೆಳಿಗ್ಗೆ ಮೂರ್ತಿಯ ಮೆರವಣಿಗೆ ನಡೆದವು. ದೊಡ್ಡ ದೇವ ಪಾತಾಳೇಶ್ವರ ಜಾತ್ರೆ 18 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯಾಗಿದ್ದು, ವಿದೇಶಗಳಿಂದಲೂ ಭಕ್ತಾದಿಗಳು ಬರುತ್ತಾರೆ. ದೇವಾಲಯದ ಸನ್ನಿಧಿಯಲ್ಲಿ ನೆರೆದ 2 ಲಕ್ಷಕ್ಕೂ ಹೆಚ್ಚಿನ ಭಕ್ತಸಾಗರಕ್ಕೆ ಅನ್ನದಾಸೋಹ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಕಾರು ಪಲ್ಟಿ: ಎಂಟು ಮಂದಿ ಪ್ರಾಣಾಪಾಯದಿಂದ ಪಾರು
ಮೈಸೂರು: ಕಾರೊಂದು ಪಲ್ಟಿಯಾಗಿ 8 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಕೆ.ಆರ್. ಮಿಲ್ ಬಳಿ ಶುಕ್ರವಾರ ನಡೆದಿದೆ. ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಒಂದೇ ಕುಟುಂಬದ 8 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಕೆ.ಆರ್. ಮಿಲ್ ಬಳಿ ಬಂದಾಗ ರಸ್ತೆಬದಿಯಲ್ಲಿದ್ದ ಮಣ್ಣಿನಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ 8 ಮಂದಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಪಲ್ಟಿಯಾದ ಕಾರಿನಲ್ಲಿದ್ದವರನ್ನು ಸಾರ್ವಜನಿಕರು ರಕ್ಷಿಸಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಎನ್.ಆರ್. ಸಂಚಾರ ಠಾಣೆ ಪೊಲೀಸರು ರಸ್ತೆಬದಿಯಲ್ಲಿದ್ದ ಕಾರನ್ನು ಪಕ್ಕಕ್ಕೆ ಸರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.