ಕಟ್ಟಿದ ಹಣಕ್ಕೆ ಪಂಗನಾಮ!
ತುರುವೇಕೆರೆ: ಭಾರತೀಯ ಜೀವವಿಮಾ ನಿಗಮದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೈಕ್ರೋ ವಿಮೆ ವಿಭಾಗದಲ್ಲಿ ತಿಂಗಳ ಕಂತುಗಳ ಆಧಾರದ ಮೇಲೆ ಕಟ್ಟಲಾಗಿದ್ದ ಸಾವಿರಾರು ರು.ಗಳಿಗೆ ಪಂಗನಾಮ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಮುತ್ತುಗದಹಳ್ಳಿಯ ಆ ಸಂಸ್ಥೆಯ ಜೀವವಿಮಾ ಪ್ರತಿನಿಧಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯ ಮನೆ ಮುಂದೆ ಧಾವಿಸಿದ ಗ್ರಾಮದ ನೂರಾರು ಗ್ರಾಹಕರು ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂರು.
ಅಲ್ಲದೇ ತಾವು ಕಟ್ಟಿರುವ ಹಣಕ್ಕೆ ಪ್ರತಿಯಾಗಿ ಮನೆಯ ವಸ್ತುಗಳನ್ನಾದರೂ ನೀಡಬೇಕು ಎಂದು ಒತ್ತಾಯಿಸಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.
ಫೈನಾನ್ಸ್ ನಲ್ಲಿ ಗ್ರಾಹಕರಿಗೆ ಮೋಸ : ತಾಲೂಕಿನ ಹೊರಪೇಟೆಯಲ್ಲಿ ಭಾರತೀಯ ಜೀವವಿಮಾ ನಿಗಮದ ವತಿಯಿಂದ ನಡೆಸಲಾಗುವ ಮೈಕ್ರೋ ಫೈನಾನ್ಸ್ ಎಂಬ ಸಂಸ್ಥೆಯನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ತೆರೆಯಲಾಗಿತ್ತು. ತಾಲೂಕಿನಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲಾಗಿದೆ. ಇವರಲ್ಲಿ ಅಂಗನವಾಡಿ ಕಾರ್ಯಕರ್ತರೂ ಇದ್ದಾರೆ. ತಿಂಗಳಿಗೆ 100 ರು.ಗಳಿಂದ 1000 ರು.ಗಳ ವರೆಗೂ ಮೈಕ್ರೋ ಫೈನಾನ್ಸ್ಗೆ ಕಟ್ಟುವ ವ್ಯವಸ್ಥೆ ಮಾಡಲಾಗಿತ್ತು. ಇದರಂತೆ ತಾಲೂಕಿನಲ್ಲಿ ಸುಮಾರು ಆರೇಳು ಸಾವಿರ ಮಂದಿ ಗ್ರಾಹಕರು ಹಣವನ್ನು ತಮ್ಮ ಶಕ್ತಾನುಸಾರ ಕಟ್ಟಿದ್ದಾರೆ.
ಕಚೇರಿಗೆ ಬೀಗ: ಇನ್ನೇನು ಹಣ ಕಟ್ಟಿದವರ ಅವಧಿ ಮುಗಿಯಿತು ಎನ್ನುವಷ್ಟರಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ಕಚೇರಿಗೆ ಬೀಗ ಜಡಿದು ಕಾಲು ಕಿತ್ತರು. ಇದರಿಂದಾಗಿ ಕಂಗಾಲಾದ ಪ್ರತಿನಿಧಿಗಳು ಹಾಗೂ ಗ್ರಾಹಕರು ಸ್ಥಳೀಯ ಜೀವವಿಮಾ ನಿಗಮದ ಕಚೇರಿಗೆ ತೆರಳಿ ಪ್ರತಿಭಟನೆಯನ್ನೂ ಮಾಡಿದ್ದರು. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರೂ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಸ್ಥಳೀಯವಾಗಿ ಸಂಸ್ಥೆ ನಡೆಸುತ್ತಿದ್ದ ವ್ಯಕ್ತಿ, ಪ್ರಧಾನ ಕಚೇರಿಗೇ ಸೂಕ್ತ ಮಾಹಿತಿ ಒದಗಿಸದೇ ವಂಚನೆ ಮಾಡಿರುವುದೂ ಬೆಳಕಿಗೆ ಬಂದಿತ್ತು.
ಕಳೆದ ತಿಂಗಳ ಹಿಂದೆಯಷ್ಟೇ ಎಲ್ಐಸಿ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡು ಕೆಲ ಕಾಲ ಕಾಲಾವಕಾಶ ಪಡೆಯಲಾಗಿತ್ತು. ಇದರ ಅನ್ವಯ ಅಧಿಕಾರಿಗಳು ನೀಡಿದ್ದ ಗಡುವು ಸಹ ಮುಗಿದಿದ್ದು ತಾವು ಕಟ್ಟಿದ್ದ ಹಣ ವಾಪಸು ಬಾರದ ಹಿನ್ನೆಲೆಯಲ್ಲಿ ಮುತ್ತುಗದಹಳ್ಳಿಯ ನೂರಾರು ಗ್ರಾಹಕರು ಗ್ರಾಮದಲ್ಲೇ ಇದ್ದ ಸಂಸ್ಥೆಯ ಪ್ರತಿನಿಧಿಯು ಹಾಗೂ ಅಂಗನವಾಡಿ ಕಾರ್ಯಕರ್ತೆಯೂ ಆಗಿರುವ ಚಂದ್ರಕಲಾರ ಮನೆ ಮುಂದೆ ಮಂಗಳವಾರ ರಾತ್ರಿ ಧಾವಿಸಿ ಚಂದ್ರಕಲಾರವರನ್ನು ತರಾಟೆಗೆ ತೆಗೆದುಕೊಂಡರು. ತಾವು ನೀಡಿರುವ ಹಣವನ್ನು ಕೂಡಲೇ ಹಿಂತಿರುಗಿಸುವಂತೆ ಆಗ್ರಹಿಸಿದ್ದರು.
ಅಸಾಧ್ಯ: ಆದರೆ ಚಂದ್ರಕಲಾರವರು ಗ್ರಾಹಕರು ಕಟ್ಟಿದ್ದ ಹಣವನ್ನು ತಾವು ವಿಮಾ ಸಂಸ್ಥೆಗೆ ಕಟ್ಟಿದ್ದು ಸಿಬ್ಬಂದಿಯೇ ನಾಪತ್ತೆಯಾಗಿದ್ದಾರೆ. ಆದ್ದರಿಂದ ತಾವು ಹಣ ನೀಡಲು ಅಸಾಧ್ಯವೆಂದು ತಮ್ಮ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಒಪ್ಪದ ಗ್ರಾಹಕರು ತಾವು ಕಷ್ಟಪಟ್ಟು ಕಟ್ಟಿರುವ ಹಣವನ್ನು ಕಳೆದುಕೊಳ್ಳಲು ತಯಾರಿಲ್ಲದಿರುವುದರಿಂದ ಕೂಡಲೇ ಹಣವನ್ನು ಹಿಂತಿರುಗಿಸಬೇಕು. ಇಲ್ಲದಿದ್ದರೆ ಮನೆಯಲ್ಲಿರುವ ವಸ್ತುಗಳನ್ನಾದರೂ ಹಣ ನೀಡುವವರೆಗೆ ಇಟ್ಟಿರಬೇಕು ಎಂದು ಹೇಳಿ ಕೆಲವು ವಸ್ತುಗಳನ್ನು ಆಕೆಯಿಂದ ಬಲವಂತದಿಂದ ಪಡೆದುಕೊಂಡು ಹೋದರೆಂದು ತಿಳಿದುಬಂದಿದೆ. ಮತ್ತೂ ಕುಪಿತರಾದ ಕೆಲ ಗ್ರಾಹಕರು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದರು ಎಂದು ತಿಳಿದುಬಂದಿದೆ.
ಸಿಡಿಪಿಓ ಮಧ್ಯ ಪ್ರವೇಶ: ಅಂಗನವಾಡಿ ಕಾರ್ಯಕರ್ತೆಯರು ಮೈಕ್ರೋ ಫೈನಾನ್ಸ್ ಸಂಸ್ಥೆಯ ಹಣಕಾಸು ವ್ಯವಹಾರದಲ್ಲಿ ಸಿಲುಕಿಹಾಕಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಡಿಪಿಓ ರವೀಂದ್ರ ವಿಮಾ ಕಂಪನಿ ಮಾಡಿರುವ ದ್ರೋಹಕ್ಕೆ ಅಂಗನವಾಡಿ ಕೇಂದ್ರಗಳನ್ನು ನಡೆಸಲು ತೊಂದರೆಯುಂಟಾಗುತ್ತಿದೆ. ಇದರಿಂದಾಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ವಿಮಾ ಸಂಸ್ಥೆಯೊಂದಿಗೆ ತಾವೇ ವ್ಯವಹರಿಸಿ ಪರಿಹಾರವನ್ನು ಕಂಡುಹಿಡಿಯುವುದಾಗಿ ರವೀಂದ್ರ ಗ್ರಾಹಕರಿಗೆ ಭರವಸೆ ನೀಡಿದ್ದಾರೆ.
ಹಣ ನೀಡಲೇ ಬೇಕು ಎಂದು ಆಗ್ರಹಿಸಿ ಪ್ರತಿನಿಧಿಯ ಮನೆ ಮುಂದೆ ಗ್ರಾಹಕರೊಬ್ಬರು ಮಗಳ ಮದುವೆಯ ಲಗ್ನ ಪತ್ರಿಕೆ ಸಹಿತ ಆಗಮಿಸಿದ್ದರು. ಹಣವಿಲ್ಲದೆ ತಮ್ಮ ಗಂಡನನ್ನು ಆಸ್ಪತ್ರೆಗೆ ತೋರಿಸಲು ಆಗದೇ ಸಂಕಟ ಪಡುತ್ತಿದ್ದ ದಂಪತಿ ಇದ್ದರು. ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದವರು ಪ್ರತಿನಿಧಿಯ ಮನೆ ಮುಂದೆ ಹಿಡಿಶಾಪ ಹಾಕುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

