ಯುವ ಜನಾಂಗ ಸಂಘಟಿತವಾಗಲಿ
ಮಧುಗಿರಿ: ಯುವ ಸಮುದಾಯ ನಮ್ಮ ದೇಶದ ಆಸ್ತಿ ಎಂಬ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆಶಯದಂತೆ ಯುವ ಜನಾಂಗ ಸಂಘಟಿತರಾಗುವ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಕೈ ಬಲಪಡಿಸಲು ಮುಂದಾಗಬೇಕು ಎಂದು ತುಮಕೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ರಾಜೇಂದ್ರ ಕರೆ ನೀಡಿದರು.
ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಮಧುಗಿರಿ ತಾ.ಕಾಂಗ್ರೆಸ್ ಸಮಿತಿ ವತಿಯಿಂದ ತುಮಕೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು, ಮಧುಗಿರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಗ್ಗಟ್ಟು ಪ್ರದರ್ಶಿಸಿ: ಯುವ ಜನಾಂಗ ಹೆಚ್ಚು ರಾಜಕೀಯಕ್ಕೆ ಬರಬೇಕು ಎಂಬ ರಾಹುಲ್ ಗಾಂಧಿ ಅವರ ಕನಸು ಸಾಕಾರಗೊಳಿಸುವ ಮೂಲಕ ಪ್ರತಿ ಬೂತ್ ಮಟ್ಟದಲ್ಲೂ ಯುವ ಕಾರ್ಯಕರ್ತರು ಒಗ್ಗಟ್ಟಾಗಿ ಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷ ಬಲವರ್ಧನೆಗೆ ಹೆಚ್ಚು ಒತ್ತು ಕೊಡಬೇಕು. ರಾಜ್ಯದಲ್ಲೇ ಯುವ ಸಂಘಟನೆಯಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿದೆ ಎಂದ ರಾಜೇಂದ್ರ ನನ್ನ ತಂದೆ ಶಾಸಕ ಕೆ.ಎನ್.ರಾಜಣ್ಣ ಅವರ ಆದರ್ಶ ಪರಿ ಪಾಲಿಸುವ ಮೂಲಕ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಗಟ್ಟಿಗೊಳಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತುಂಗೋಟಿ ರಾಮಣ್ಣ ರಾಹುಲ್ ಗಾಂಧಿ ಅವರು ಯುವಕರಿಗೆ ಹೆಚ್ಚು ಆದ್ಯತೆ ನೀಡಿದ್ದು, ಈ ಅವಕಾಶವನ್ನು ಯುವಕರು ಸದ್ಬಳಕೆ ಮಾಡಿಕೊಂಡು ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೆ ಅಧಿಕ ಒತ್ತು ಕೊಡಬೇಕು. ಶಾಸಕ ಕೆ.ಎನ್. ರಾಜಣ್ಣ ಅವರು ಮಧುಗಿರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಕಂದಾಯ ಜಿಲ್ಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಆದ ಕಾರಣ ಅವರ ಕೈ ಬಲಪಡಿಸಲು ಯುವ ಜನಾಂಗ ಮುಂದೆ ಬರಬೇಕು ಎಂದರು.
ಸಾಧನೆ ಜನತೆಗೆ ತಲುಪಿಸಿ: ಕಾರ್ಯಕ್ರಮ ಉದ್ಘಾಟಿಸಿದ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ರಾಜ್‌ಗೋಪಾಲ್ ಮಾತನಾಡಿ, ಯುವ ಜನಾಂಗ ಕಾಂಗ್ರೆಸ್ ಸಾಧನೆಗಳನ್ನು ಜನರಿಗೆ ಮುಟ್ಟಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಮಲ್ಲಿಕಾರ್ಜುನಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಕ್ಷದಿಂದ ಮಾತ್ರ ಈ ದೇಶದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ, ನಾಗೇಂದ್ರ, ನಾಗಭೂಷಣ್, ಮೋಹನ್ಕುಮಾರ್, ರಘುಪತಿ, ಮೊಹಮ್ಮದ್ ಜಾಕೀರ್ ಹುಸೇನ್, ಮಾರುತಿ, ಆನಂದ ಕುಮಾರ್ ಅವರನ್ನು ಸನ್ಮಾನಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ,ಚಂದ್ರಶೇಖರಗೌಡ ಮಾತನಾಡಿದರು.
ತಾ.ಪಂ.ಅಧ್ಯಕ್ಷೆ ಸುನಂದಸಿದ್ದಪ್ಪ, ಸಿದ್ದಗಂಗಾಂಭಿಕೆ, ಮುಖಂಡ ಪಿಸಿಕೆರೆಡ್ಡಿ,ಪ್ರಕಾಶ್, ಸಂಜೀವಗೌಡ, ಡಿ.ಜಿ.ಎಸ್. ಶೆಟ್ಟಿ, ಗೋವಿಂದರಾಜು, ತಾ.ಪಂ.ಸದಸ್ಯೆ ಶಾಂತಮ್ಮ, ಯಶೋಧ, ಪುರಸಭೆ ಸದಸ್ಯ ಶ್ರೀನಿವಾಸ್, ಎಂ.ಎಸ್.ಚಂದ್ರಶೇಖರ್, ನಾರಾಯಣ ಅನೇಕ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

