ತುಮಕೂರು

ಪೂರ್ವಭಾವಿ ಸಭೆ

Published On :

ಕೊರಟಗೆರೆ: ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ, ಚಾಲಕರ ಮತ್ತು ಇಲಾಖಾ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಫೆ.11 ರಂದು ಸಂಜೆ 4 ಕ್ಕೆ ಕೆಎಸ್‌ಆರ್‌ಟಿಸಿ ಆವರಣದಲ್ಲಿ ಏರ್ಪಡಿಸಲಾಗಿದೆ. ಪಟ್ಟಣದ ಫ್ರೆಂಡ್ಸ್ ಗ್ರೂಪ್ ಸೇವಾಸಮಿತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜಗ್ಗೇಶ್ ಅಭಿಮಾನಿಗಳ ಸಮಾಜ ಸೇವಾ ಸಂಘ ಸಹಯೋಗದೊಂದಿಗೆ  ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕೊರಟಗೆರೆ ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಸೂಚನಾ ಪಲಕಗಳಿಲ್ಲದೆ ಅಫಘಾತಗಳು ಸಂಭವಿಸುತಿದ್ದು ಈ ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ಸಭೆ ನಡೆಸಲಾಗುವುದು.

ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಸಾಂಸ್ಕೃತಿಕ ಕಾರ್ಯಕ್ರಮ ಅಗತ್ಯ
ಮಧುಗಿರಿ: ಚಿಕ್ಕ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರತರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಎಂದು ಎಲ್‌ಐಸಿ ಅಧಿಕಾರಿ ಬಿ.ಎನ್. ನಾಗರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಕಾರ್ಡಿಯಲ್ ಶಾಲೆ ವತಿಯಿಂದ ಏರ್ಪಟಾಗಿದ್ದ ಕಾರ್ಡಿಯಲ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸವ ನಿಟ್ಟಿನಲ್ಲಿ ಗುಣ ಮಟ್ಟದ ಶಿಕ್ಷಣ ಕಲಿಸಿ  ಸತ್ಪ್ರಜೆಗಳನ್ನಾಗಿಸಲು ಶ್ರಮಿಸಬೇಕು ಎಂದರು. ಕಾರ್ಯದರ್ಶಿ ಎಂ.ಕೆ.ನಂಜುಂಡಯ್ಯ, ಖಜಾಂಚಿ ಶೈಲಶ್ರೀನಾಗರಾಜು, ನಿರ್ದೇಶಕ ಪಿ.ರಮೇಶ್, ಮುಖ್ಯ ಶಿಕ್ಷಕಿ ಶಕುಂತಲಾ, ಆಡಳಿತಾಧಿಕಾರಿ ರಾಜು ಮೊದಲಾದವರು ಇದ್ದರು.   

ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲೂ ಮುಂದು
ಮಧುಗಿರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಗಂಡು ಮಕ್ಕಳ ಕಲಿಕಾ ಸಾಮರ್ಥ್ಯಕ್ಕಿಂತ ಹೆಣ್ಣು ಮಕ್ಕಳ ಕಲಿಕಾ ಸಾಮರ್ಥ್ಯ ಎಲ್ಲ ರಂಗಗಳಲ್ಲೂ ಮುಂದಿದೆ ಎಂದು ನಿವೃತ್ತ ಶಿಕ್ಷಕ ಎಚ್. ಗೋವಿದರಾಜು ಅಭಿಪ್ರಾಯಪಟ್ಟರು. ಇಲ್ಲಿನ ಚಿರೆಕ್ ಪಬ್ಲಿಕ್ ಶಾಲೆ ಆವರಣದಲ್ಲಿ ಏರ್ಪಟಾಗಿದ್ದ   ತಾತ-ಅಜ್ಜಂದಿರ  ದಿನಾಚರಣೆ  ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು, ತಾತ-ಅಜ್ಜಿ  ದಿನಾಚರಣೆ ಜನ ಮೆಚ್ಚುವಂಥ ವಿಶೇಷ ಕಾರ್ಯಕ್ರಮ ಇದಾಗಿದ್ದು, ತಾತ-ಅಜ್ಜಿ  ನಡುವೆ ಬೆಳೆದ ಮೊಮ್ಮಕ್ಕಳು ಶಿಸ್ತು, ಸಂಯಮ ಪಾಲಿಸುತ್ತಾರೆ. ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಅಂತರಿಕ್ಷದಲ್ಲಿ ಹಾರಾಡುತ್ತಾ ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ ಎಂದು ಶ್ಲಾಘಿಸಿದರು. ಮೊಮ್ಮಗ ತಾತನ ಮಾರ್ಗದರ್ಶನದಲ್ಲಿ ಅಜ್ಜಿಗೆ ಮೇಕಫ್ ಮಾಡುವ ಕಾರ್ಯಕ್ರಮ, ಮ್ಯೂಸಿಕಲ್‌ಚೇರ್ ಜನ ಮೆಚ್ಚುಗೆಗೆ ಪಾತ್ರವಾಯಿತು. ಸಂಸ್ಥಾಪಕ ಅಧ್ಯಕ್ಷ ಭಾಸ್ಕರರೆಡ್ಡಿ ರಾಘವೇಂದ್ರ, ಮಧು, ದೇವರಾಜು ಉಪಸ್ಥಿತರಿದ್ದರು. ಅಜ್ಜ ಆಲದ ಮರ, ಅಜ್ಜಿ ಮಾವಿನ ಮರ, ಹಕ್ಕಿಪಿಕ್ಕಿಗಳು ನಾವೆಲ್ಲ ಎಂಬ ನೃತ್ಯ ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮ  ಕಣ್ಮನ ಸಳೆಯಿತು. ಜ್ಯೋತಿ ಸ್ವಾಗತಿಸಿ, ನಿರ್ಮಲ ನಿರೂಪಿಸಿ, ದೇವರಾಜು ವಂದಿಸಿದರು.

ದನಗಳ ಜಾತ್ರೆ ಒಂದು ದಿನಕ್ಕೆ ಸೀಮಿತ
ಕೊರಟಗೆರೆ: ತಾಲೂಕಿನಲ್ಲಿ ಆವರಿಸಿರುವ ಕಾಲುಬಾಯಿ ರೋಗದ ಸಲುವಾಗಿ 5 ದಿನಗಳ ಕಾಲ ನಡೆಯಬೇಕಿದ್ದ ದನಗಳ  ಜಾತ್ರಾ ಮಹೋತ್ಸವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ  ಕೇವಲ 1 ದಿನಕ್ಕೆ ಸೀಮಿತಗೊಳಿಸಲಾಗಿದ್ದು ರೈತ  ಬಾಂಧವರು ಸಹಕರಿಸುವಂತೆ ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಸುಕ್ಷೇತ್ರದ ಬಸವಲಿಂಗಮಹಾಸ್ವಾಮೀಜಿಗಳು ತಿಳಿಸಿದ್ದಾರೆ. ಅವರು ಪಟ್ಟಣದ ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕೊರಟಗೆರೆ ತಾಲೂಕಿನ ತಂಗನಹಳ್ಳಿ ದೇವರಾಯನದುರ್ಗ ತಪ್ಪಲಿನಲ್ಲಿರುವ ಶ್ರೀ ಕಾಶಿ  ಅನ್ನಪೂರ್ಣೇಶ್ವರಿ ಸುಕ್ಷೇತ್ರ ತಿಮ್ಮಪ್ಪಸ್ವಾಮಿ ಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ಭಾರಿ ನಡೆಯಬೇಕಿದ್ದ 5 ದಿನಗಳ ಧನಗಳ ಜಾತ್ರೆಯನ್ನು ತಾಲೂಕಿನಲ್ಲಿ ಉದ್ಭವಿಸಿರುವ ಕಾಲುಬಾಯಿ ರೋಗದಿಂದ ಈ ಬಾರಿ ಫೆ.14 ಶುಕ್ರವಾರದಂದು ಸ್ಥಳೀಯರಿಗಾಗಿ ಒಂದು ದಿನ ಮಾತ್ರ ನಡೆಯಲಿದೆ ಎಂದರು.

ಯೋಜನೆ ಸದುಪಯೋಗ ಪಡಿಸಿಕೊಳ್ಳಿ: ಶಾಸಕ
ಮಧುಗಿರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಜಿಲ್ಲೆಯಲ್ಲಿ ಹತ್ತು ಹಲವು ಪ್ರಗತಿಪರ ಕಾರ್ಯಕ್ರಮ ರೂಪಿಸಿದ್ದು ಜನರು  ಇದನ್ನು ಸ್ವೀಕರಿಸಿ ಲಾಭ ಪಡೆಯುವ ಮೂಲಕ ಅಭಿವೃದ್ಧಿಯಡೆಗೆ ಸಾಗಬೇಕು ಎಂದು ಕೊರಟಗೆರೆ ಶಾಸಕ ಪಿ.ಸುಧಾಕರ್‌ಲಾಲ್ ಕರೆ ನೀಡಿದರು. ಮಧುಗಿರಿ ತಾಲೂಕಿನ ಪುರವರ ಗ್ರಾಮ ಪಂಚಾಯಿತಿ  ಆವರಣದಲ್ಲಿ  ಏರ್ಪಟಾಗಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪುರವರ ಗ್ರಾ.ಪಂಚಾಯಿತಿ  ಇವರ ಸಂಯುಕ್ತಾಶ್ರಯದಲ್ಲಿ ಶುದ್ಧ ಗಂಗಾ ಘಟಕ ಹಾಗೂ ಸಾಧನ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಯೋಜನಾಧಿಕಾರಿ ಜಿನ್ನಪ್ಪ ಮಾತನಾಡಿ, ಡಿ. ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಜಿಲ್ಲೆಗೆ ಯೋಜನೆ ಬಂದಿದೆ. ಮತ್ತಷ್ಟು ಅಬಿವೃದ್ಧಿ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕದುರಮ್ಮ ಹನುಮಂತರಾಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಜಿ.ಪಂ.ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್, ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮೀಕಾಂತ, ಗ್ರಾ.ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಪಘಾತ: ಬೈಕ್ ಸವಾರರ ಸಾವು
ಚಿಕ್ಕನಾಯಕನಹಳ್ಳಿ: ರಾಜ್ಯಸಾರಿಗೆ ಬಸ್‌ಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೆ  ಮೃತಪಟ್ಟಿರುವ ಘಟನೆ  ಜರುಗಿದೆ. ತಾಲೂಕಿನ ಜೆ.ಸಿ.ಪುರದ ಬಳಿಯಿರುವ ಬ್ಯಾಡರಹಳ್ಳಿ ಗೇಟ್‌ನಲ್ಲಿ ಮುಂದೆ ನಿಂತಿದ್ದ ಖಾಸಗಿ ಬಸ್ಸನ್ನು ಸಾರಿಗೆ ಸಂಸ್ಥೆ ಬಸ್ ಓವರ್‌ಟೇಕ್ ಮಾಡುವಾಗ ಎದುರಿನಿಂದ ಬಂದ ಬೈಕ್ ಬಸ್ಸಿಗೆ ಗುದ್ದಿದ ಪರಿಣಾಮ ತರಬೇನಹಳ್ಳಿಯ ಶಿವಾನಂದಮೂರ್ತಿಯವರ ಮಗ ಮಂಜುನಾಥ್ (38) ಹಾಗೂ ಹಿಂದೆ ಕುಳಿತಿದ್ದ  ಮಾರಸಂದ್ರ ಪಾಳ್ಯದ ಶಿವಶಂಕರ್ (45)ಇಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ.  ಸ್ಥಳಕ್ಕೆ ಹೋದ ಪೊಲೀಸರು ರಸ್ತೆಯಲ್ಲಿ ಬಿದ್ದದ್ದ ಶವಗಳನ್ನು ಆಸ್ಪತ್ರೆಗೆ ಸಾಗಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.  

ಇಂದಿನಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ
ತುಮಕೂರು: ತುರುವೇಕೆರೆಯ ಕೆ. ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಫೆ.10 ಮತ್ತು 11 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಶಾಸಕ ಎಂ.ಟಿ. ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸುವರು. ನಾಡಧ್ವಜಾರೋಹಣವನ್ನು ಕೋಳಾಲ ಗಂಗಾಧರ ಹಾಗೂ ಪರಿಷತ್ ಧ್ವಜಾರೋಹಣವನ್ನು ಸೋಮು ಭಾಸ್ಕರಾಚಾರ್ ನೆರವೇರಿಸುವರು. ಅಂದು ಬೆಳಗ್ಗೆ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಎಂ.ಡಿ. ಲಕ್ಷ್ಮೀನಾರಾಯಣ್ ಉದ್ಘಾಟಿಸುವರು.  ಮುಖ್ಯ ಅತಿಥಿಯಾಗಿ ಜಿ.ಪಂ. ಸಿಇಓ ಗೋವಿಂದರಾಜು, ಎಸ್ಪಿ ರಮಣಗುಪ್ತ ಆಗಮಿಸುವರು. ಮಧ್ಯಾಹ್ನ 2.30 ರಿಂದ ವಿವಿಧ ಗೋಷ್ಠಿಗಳು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.