ಹಾರಾಡಿದ ಮಾದರಿ ವಿಮಾನಗಳು
ತುರುವೇಕೆರೆ: ಶಾಲಾ ವಾರ್ಷಿಕೋತ್ಸವದ ಸಲುವಾಗಿ ಮಕ್ಕಳಿಂದ ಹಾಡು, ನೃತ್ಯ ಮಾಡಿಸಿ ಅತಿಥಿಗಳಿಂದ ಒಂದಿಷ್ಟು ಭಾಷಣ ಮಾಡಿಸುವುದು ಸಾಮಾನ್ಯ. ಆದರೆ ಇಲ್ಲಿಯ ಇಂಡಿಯನ್ ಪಬ್ಲಿಕ್ ಶಾಲೆ ತನ್ನ ಶಾಲಾ
ಆಧಾರಸ್ಥಂಭವಾಗಿರುವ ವಿರಕ್ತ ಮಠದ ಶಿವಯೋಗೀಶ್ವರ ಮಹಾಸ್ವಾಮಿಗಳ 60 ನೇ ಹುಟ್ಟುಹಬ್ಬ ಹಾಗೂ ತನ್ನ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳ ಹಾಗೂ ಇತರೆ ಶಾಲಾ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಹೆಚ್ಚಿಸುವ ಸಲುವಾಗಿ ಮಾದರಿ ವಿಮಾನ ಹಾರಾಟ ಪ್ರಯೋಗವನ್ನು ಮಾಡಿಸುವ ಮೂಲಕ ವಿಶಿಷ್ಟವಾಗಿ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.
ಪಟ್ಟಣದ ಹೊರಪೇಟೆಯಲ್ಲಿ ಕಳೆದ ಆರು ವರ್ಷಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಈ ಸಂಸ್ಥೆ ಎರಡು ದಿನಗಳ ಕಾಲ ಮಾದರಿ ವಿಮಾನವನ್ನು ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ನಿವೃತ್ತ ವಿಮಾನಯಾನ ತರಬೇತುದಾರರಾದ ಜ್ಞಾನ ಸುಬ್ರಮಣಿ, ಬೆಂಗಳೂರು ಮೆಟ್ರೋ ಮುಖ್ಯ ಎಂಜಿನಿಯರ್ ಸೈಮನ್, ಜಗನ್ನಾಥ್ ಹಾಗೂ ಸಿಬ್ಬಂದಿ ನಾಲ್ಕು ಮಾದರಿ ವಿಮಾನಗಳನ್ನು ಆಗಸಕ್ಕೆ ಹಾರಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೂ ವಿಮಾನ ಹಾರಾಟ ಮಾಡುವ ವಿಧಾನ ಹಾಗೂ ವಿಮಾನ ನಿರ್ಮಾಣದ ಹಂತಗಳು ಹಾಗೂ ವಿಮಾನ ಹಾರಾಡಲು ಅಗತ್ಯವಿರುವ ಯಂತ್ರಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ಸುಮಾರು 4 ಅಡಿ ಉದ್ದವಿರುವ ಮಾದರಿ ವಿಮಾನಗಳ ಹಾರಾಟವನ್ನು ವೀಕ್ಷಿಸಿದ ಮಕ್ಕಳು, ಸಾರ್ವಜನಿಕರು ಬೆಂಗಳೂರಿನ ಜಕ್ಕೂರು ವಿಮಾನ ಕೇಂದ್ರಕ್ಕೆ ಹೋಗಿ ಸಾವಿರಾರು ರು. ತೆತ್ತು ನೋಡಬೇಕಿದ್ದ ವಿಮಾನ ಹಾರಾಟವನ್ನು ಸ್ಥಳದಲ್ಲೇ ನೋಡಲು ಅವಕಾಶ ಕಲ್ಪಿಸಿದ ಇಂಡಿಯನ್ ಪಬ್ಲಿಕ್ ಶಾಲೆಯ ಮುಖ್ಯಸ್ಥರಿಗೆ ಧನ್ಯವಾದ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.
ಮಾದರಿ ಪ್ರದರ್ಶನ: ಮಾನವಚಾಲಿತ ಯಂತ್ರದ ಮೂಲಕ ಹಾರಾಟ ಮಾಡುವ ವಿಮಾನದ ಮಾದರಿ ಹಾಗೂ ರಿಮೋಟ್ ಕಂಟ್ರೋಲ್ ಮೂಲಕ ಗಗನಕ್ಕೆ ಹಾರುವ ವಿಮಾನದ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಸುಮಾರು 500 ಮೀಟರ್ ವಿಸ್ತಾರದಲ್ಲಿ ಹಾಗೂ ಸುಮಾರು 1 ಕಿಲೋ ಮೀಟರ್ ಎತ್ತರಕ್ಕೆ ಹಾರಿದ ಮಾದರಿ ವಿಮಾನಗಳನ್ನು ನೋಡಲು ವಿದ್ಯಾರ್ಥಿಗಳು ಹಾಗೂ ಪೋಷಕರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನೆರೆದಿದ್ದರು. ವಿಮಾನ ಹಾರುವ ವೇಳೆ ವಿದ್ಯಾರ್ಥಿಗಳ ಕೇಕೆ ಮುಗಿಲು ಮುಟ್ಟುತ್ತಿತ್ತು. ಮಾದರಿ ವಿಮಾನ ಹಾರಾಟವನ್ನು ಬೆಂಗಳೂರಿನ ಡಿಎವಿ ಶಾಲೆ ಅಕಾಡಮಿಕ್ ಡೈರೆಕ್ಟರ್ ಮನೋಹರ್ ದೇಶ್ ಮುಖ್ ಉದ್ಘಾಟಿಸಿದರು. ಕ್ರೀಡಾಂಗಣದ ಸುತ್ತಲೂ ಮರಗಿಡಗಳು ಇದ್ದುದರಿಂದ ಒಂದು ಮಾದರಿ ವಿಮಾನವೊಂದು ರಿಮೋಟ್ ಕಂಟ್ರೋಲ್ನ ವ್ಯಾಪ್ತಿಗೆ ಬಾರದೇ ಇದ್ದ ಪರಿಣಾಮ ದೂರದಲ್ಲಿ ಬಿದ್ದು ಹಾನಿಯಾದ ಪ್ರಸಂಗವೂ ನಡೆಯಿತು.
ವಸ್ತು ಪ್ರದರ್ಶನ: ಇತ್ತ ಶಾಲಾ ಪ್ರಾಂಗಣದಲ್ಲಿ ವಸ್ತು ಪ್ರದರ್ಶವನ್ನು ಏರ್ಪಡಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಇರುವ ಉಡುಪಿನ ಮಾದರಿ, ಕೆಆರ್ಎಸ್ ಡ್ಯಾಂ, ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ, ವಿವಿಧ ಜಾತಿಯ ಹಣ್ಣುಗಳು, ತರಕಾರಿಗಳು, ಹಲವಾರು ವೈಜ್ಞಾನಿಕ ಯಂತ್ರಗಳ ಮಾದರಿಗಳನ್ನು ವಿದ್ಯಾರ್ಥಿಗಳು ತಮ್ಮ ಪೋಷಕರ ನೆರವಿನೊಂದಿಗೆ ಮಾಡಿಸಿದ್ದು ನೋಡುಗರ ಮನ ಸೆಳೆಯಿತು. ಅಕ್ಷರದಲ್ಲಿ ಸಂಕ್ಷಿಪ್ತ ರಾಮಾಯಣ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ನ ಸಮ್ಮೇಳನಾಧ್ಯರ ಭಾವಚಿತ್ರ ಸಹಿತ ಕಿರುಪರಿಚಯ, ರಾಜ್ಯದ ಎಲ್ಲಾ ಮುಖ್ಯ ಮಂತ್ರಿಗಳು, ದೇಶದ ಪ್ರಧಾನಿ, ರಾಷ್ಟ್ರಪತಿ, ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರು...ಹೀಗೆ ವಿವಿಧ ವಿಚಾರವಂತ ಸಂಗತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಐಪಿಎಸ್ ಶಾಲಾ ಸಂಸ್ಥಾಪಕ ಡಾ.ರುದ್ರಯ್ಯ ಹಿರೇಮಠ್, ಮುಖ್ಯೋಪಧ್ಯಾಯಿನಿ ಪುಷ್ಪಾ ಎಸ್. ಪಾಟೀಲ್ ನೇತೃತ್ವದ ತಂಡ ಉತ್ತಮವಾದ ವಸ್ತುಪ್ರದರ್ಶನವನ್ನು ಪಟ್ಟಣದ ಜನತೆಗೆ ಒದಗಿಸಿತ್ತು.
ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಶಿವಯೋಗೀಶ್ವರ ಮಹಾಸ್ವಾಮಿಗಳಿಗೆ ಮುನಿಯೂರಿನ ವೃತ್ತಿನಿರತರೊಬ್ಬರು ಪ್ರದರ್ಶನದ ಸ್ಥಳದಲ್ಲಿ ಕುಂಬಾರಿಕೆ ಕುಸರಿ ಮಾಡುತ್ತಿದ್ದ ದೃಶ್ಯ ಕೆಲ ಕಾಲ ಸ್ಥಳದಲ್ಲೇ ನಿಲ್ಲುವಂತೆ ಮಾಡಿತು. ಕೆಲ ನಿಮಿಷಗಳಲ್ಲೇ ಕಲಾಕಾರ ನಿರ್ಮಿಸಿದ ವಿವಿಧ ಪಾತ್ರೆಗಳು ಶ್ರೀಗಳನ್ನು ಕೆಲಕಾಲ ಸ್ಥಂಭೀಭೂತರನ್ನಾಗಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

