ಚಿರತೆ ಕೊನೆಗೂ ಬೋನಿಗೆ
ಕ.ಪ್ರ.ವಾರ್ತೆ , ಕುಣಿಗಲ್ , ಜ.8
ಹುಲಿಯೂರುದುರ್ಗ ಹೋಬಳಿಯ ಚಲಮಸಂದ್ರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಚಿರತೆ, ಗ್ರಾಮಸ್ಥರು ಹೂಡಿದ ತಂತ್ರಕ್ಕೆ ಬೋನಿನಲ್ಲಿ ಬುಧವಾರ ಬೆಳಗ್ಗೆ ಬಂಧಿಯಾಗಿದೆ.
ಹುಲಿಯೂರುದುರ್ಗ ಹೋಬಳಿಯ ಚಲಮಸಂದ್ರ ಗ್ರಾಮ ಸೇರಿದಂತೆ ಬೀಸೆಗೌಡನದೊಡ್ಡಿ, ಹೊನ್ನಮಾಚನಹಳ್ಳಿ, ನಿಡಸಾಲೆ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಕಳೆದೊಂದು ವಾರದ ಕೆಳಗೆ ಚಲಮಸಂದ್ರ ಗ್ರಾಮದಲ್ಲಿ ಮೇಕೆಮಂದೆ ಮೇಲೆ ಚಿರತೆ ದಾಳಿ ನಡೆಸಿ, ಹತ್ತಕ್ಕೂ ಹೆಚ್ಚು ಮೇಕೆ ಬಲಿತೆಗೆದುಕೊಂಡಿತ್ತು.
ಇದನ್ನು ಖಂಡಿಸಿದ ಗ್ರಾಮಸ್ಥರು ಮೇಕೆಯ ಮೃತದೇಹಗಳೊಂದಿಗೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪರಿಹಾರ ಕೊಡಿಸುವ ಜೊತೆಯಲ್ಲಿ ಚಿರತೆ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿದ್ದರು.
ಗ್ರಾಮಸ್ಥರ ಆಗ್ರಹದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಲಮಸಂದ್ರ ಗ್ರಾಮದ ಹೊರವಲಯದಲ್ಲಿ ಚಿರತೆ ಹಿಡಿಯಲು ಕಳೆದ ಆರು ದಿನಗಳ ಹಿಂದೆ ಬೋನ್ ಇರಿಸಿ, ನಾಯಿಯನ್ನು ಕಟ್ಟಿದ್ದರು. ಗ್ರಾಮಗಳ ಮೇಕೆ ರುಚಿ ಕಂಡಿದ್ದ ಚಿರತೆ ನಾಯಿ ಕಟ್ಟಿದ್ದರೂ, ಬೋನ್ ಕಡೆ ಬಾರದೆ ಎಂದಿನಂತೆ ಇತರೆ ಗ್ರಾಮಗಳ ಕಡೆ ತನ್ನ ಬೇಟೆ ಮುಂದುವರೆಸಿತ್ತು. ಚಲಮಸಂದ್ರ ಗ್ರಾಮಸ್ಥರು ತಾವೇ ಒಂದು ಉಪಾಯ ಹೂಡಿ ಗ್ರಾಮದ ಪ್ರಮುಖರೆಲ್ಲಾ ಸೇರಿ ತಲಾ ನೂರು ರೂಪಾಯಿಯಂತೆ ವಂತಿಗೆ ಸಂಗ್ರಹಿಸಿ, ಮೇಕೆಯೊಂದನ್ನು ಖರೀದಿಸಿ, ಅರಣ್ಯ ಇಲಾಖೆ ಚಿರತೆ ಹಿಡಿಯಲು ಇರಿಸಿದ್ದ ಬೋನಿಗೆ ಮಂಗಳವಾರ ರಾತ್ರಿ ಕಟ್ಟಿದರು.
ಬುಧವಾರ ಬೆಳಗಿನ ಜಾವ ಗ್ರಾಮಸ್ಥರ ಉಪಾಯ ಫಲಿಸಿದ್ದು, ಮೇಕೆ ರುಚಿ ಕಂಡಿದ್ದ ಚಿರತೆ ಮೇಕೆ ಹಿಡಿಯಲು ಬೋನ್ನೊಳಗೆ ಪ್ರವೇಶಿಸಿ ಬಂಧಿಯಾಯಿತು. ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ವಿಷಯ ತಿಳಿಸಿದ ಮೇರೆಗೆ, ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಮತ್ತು ಸಿಬ್ಬಂದಿ ಗ್ರಾಮಕ್ಕೆ ತೆರಳಿ, ಜಾನುವಾರು ಭಕ್ಷಕ ಚಿರತೆಯನ್ನು ಪರಿಶೀಲಿಸಿದರು.
ಇದು ಐದು ವರ್ಷ ಪ್ರಾಯದ ಗಂಡು ಚಿರತೆ. ಸೆರೆಸಿಕ್ಕ ಚಿರತೆ ನೋಡಲು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ತರು ಜನಾವಣೆಗೊಂಡಿದ್ದು, ಜನರನ್ನು ನಿಯಂತ್ರಿಸಲು ಸಿಬ್ಬಂದಿ ಪರದಾಡುವಂತಾಯಿತು. ನಂತರ ಬಂಧಿಯಾದ ಚಿರತೆಯನ್ನು ಮುತ್ತತ್ತಿ ಅರಣ್ಯ ವಲಯಕ್ಕೆ ಸುರಕ್ಷಿತವಾಗಿ ಸಾಗಿಸಲಾಯಿತು. ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿದ್ದರು.
ಅನುದಾನ ಕೊರತೆ
ತಾಲೂಕಿನ ವಿವಿಧೆಡೆಯಲ್ಲಿ ಚಿರತೆ ಹಾವಳಿ ಇದೆ. ಹಾವಳಿ ನಿಯಂತ್ರಿಸಲು ತಾಲೂಕಿನ ವ್ಯಾಪ್ತಿಗೆ ಒಂದೇ ಬೋನ್ ಇದೆ ಎಂದು ಅರ್ಎಫ್ಒ ಚಿನ್ನಪ್ಪ ಅಸಹಾಯಕತೆ ವ್ಯಕ್ತಪಡಿಸಿದರು. ಸಮಸ್ಯೆಗಳನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

