ತುಮಕೂರು

ಗೋಶಾಲೆ ಬದಲಿಗೆ ಕಸಾಯಿಖಾನೆ

Published On :

ಕ.ಪ್ರ. ವಾರ್ತೆ    ತುಮಕೂರು    ಜ. 21
ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವ ಬದಲು ರಾಜ್ಯ ಸರ್ಕಾರ ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸರ್ಕಾರವಿದ್ದಾಗ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹಲವಾರು ಗೋಶಾಲೆ ನಿರ್ಮಿಸಲಾಗಿತ್ತು. ಈಗ ಕಾಲುಬಾಯಿ ಜ್ವರದಿಂದ ರಾಸುಗಳು ತತ್ತರಿಸುತ್ತಿವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ದಿವ್ಯ ಮೌನವಹಿಸಿ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ಕಾಲುಬಾಯಿ ಜ್ವರದ ನೆಪ ಹೇಳಿ ದನದ ಜಾತ್ರೆಗಳನ್ನು ನಿಲ್ಲಿಸಿರುವುದಕ್ಕೆ ತೀವ್ರ ಆಕ್ಷೇಪ ಮಾಡಿದರು. ಮೊದಲು ಲಸಿಕೆ ಹಾಕಿಸಲಿ ಎಂದು ಜಯಚಂದ್ರಗೆ ಮನವಿ ಮಾಡಿದರು. ನಮ್ಮ ಸರ್ಕಾರವಿದ್ದಾಗ ಇದ್ದ 8 ಟಿಎಂಸಿ ನೀರಿನಲ್ಲಿ ಸಾಕಷ್ಟು ಕುಡಿಯುವ ನೀರನ್ನು ನೀಡಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು 12 ಟಿಎಂಸಿ ನೀರಿದ್ದರೂ ನೀರು ಕೊಡುವ ಗೋಜಿಗೆ ಹೋಗಿಲ್ಲ ಎಂದು ಹರಿಹಾಯ್ದರು.
40 ಕೋಟಿ ಏನು ಮಾಡ್ತಾರೋ: ತಮ್ಮ ಸರ್ಕಾರವಿದ್ದಾಗ 40 ಕೋಟಿ ರು. ನೀಡಿದ್ದೇವೆ. ಇನ್ನು ಟೆಕ್ನಿಕಲ್ ಬಿಡ್ ಕೂಡ ಕರೆದಿಲ್ಲ. ಕೆಲಸ ಕಾರ್ಯ ಕೂಡ ಮಾಡ್ತಾ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ 30 ಕೋಟಿ ರು. ನಗರೋತ್ಥಾನಕ್ಕೆ ನೀಡಿದ ಹಣವನ್ನು ಸದುಪಯೋಗ ಪಡಿಸಿಕೊಂಡಿಲ್ಲ ಎಂದರು.
ಅಧಿಕಾರಿಗಳು ಏಜೆಂಟ್: ರಾಜ್ಯ ಸರ್ಕಾರ ಅಧಿಕಾರಿಗಳನ್ನು ಏಜೆಂಟ್ ಆಗಿ ಬಳಸಿಕೊಂಡು ಸುಲಿಗೆ ಮಾಡ್ತಾ ಇದೆ ಎಂದು ಆರೋಪಿಸಿದ ಅವರು ಪ್ರಾಮಾಣಿಕ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುತ್ತಿದೆ ಎಂದು ಶಿವಣ್ಣ ಆರೋಪಿಸಿದರು.
ಆಶ್ರಯ ಮನೆ ಎತ್ತಂಗಡಿ: ತುಮಕೂರಿನ ಕುರಿಪಾಳ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಆಶ್ರಯ ಮನೆಯನ್ನು ನಮ್ಮ ಸರ್ಕಾರ ನೀಡಿತ್ತು. ಆದರೆ ಈಗ ಯಾರೋ ಒಬ್ಬರು ಧನವಂತರು ಅರಮನೆಯಂತಹ ಮನೆ ಕಟ್ಟಿಸುವ ಸಲುವಾಗಿ ಈ ಆಶ್ರಯ ಮನೆ ಕೆಡವಲು ಹೊಂಚು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಹಣ ಎಲ್ಲಾ ನಮ್ಮದೇ: ಶೆಟ್ಟಿಹಳ್ಳಿ ಮೇಲ್ಸೇತುವೆ, ಕೋರ್ಟ್ ಕಟ್ಟಡ ಎಲ್ಲದಕ್ಕೂ ಹಣ ಬಿಡುಗಡೆ ಮಾಡಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ನವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಕಳೆದ 8 ತಿಂಗಳಿಂದ ಗಾಢ ನಿದ್ರೆಗೆ ಶರಣಾಗಿದೆ ಎಂದರು.
ಮೆಡಿಕಲ್ ಕಾಲೇಜಿಗೆ ಮನವಿ: ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ಬಜೆಟ್ನಲ್ಲಿ ಹಣ ಮೀಸಲಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಒಂದು ವೇಳೆ ಮೆಡಿಕಲ್ ಕಾಲೇಜು ಸ್ಥಾಪನೆಯಾಗದಿದ್ದರೆ ಹೋರಾಟ ಮಾಡುವ  ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ನಂದೀಶ್, ಪ್ರೇಮಾ ಹೆಗ್ಗಡೆ, ಸ್ನೇಕ್ ನಂದೀಶ್ ಇತರರು ಇದ್ದರು.


ಆತ್ರಾ ಬಿದ್ದು ಗೋತ್ರ ಕೆಡಿಸ್ಕೊಂಡ ಕ್ರೇಜಿ
ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಆತುರ ಬಿದ್ದು ಗೋತ್ರಾ ಕೆಡಿಸಿಕೊಳ್ಳುತ್ತಾ ಇದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವ್ಯಂಗ್ಯವಾಡಿದ್ದಾರೆ. ಅಧಿಕಾರದ ಗದ್ದುಗೆ ಏರಿ ಆಡಳಿತ ನಡೆಸುವ ಬದಲು ಮುಖ್ಯಮಂತ್ರಿಯಾಗಿ ಧರಣಿ ಕುಳಿತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.


ಕೆಲ ಎಂಪಿಗಳಿಗೆ ಟಿಕೆಟ್ ಇಲ್ಲ
ಕೆಲ ಬಿಜೆಪಿ ಎಂಪಿಗಳಿಗೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂದು ಸೊಗಡು ಶಿವಣ್ಣ ಹೇಳಿದ್ದಾರೆ. ಹಾಲಿ ಎಂಪಿಗಳಲ್ಲಿ ಕೆಲವರಿಗೆ ಟಿಕೆಟ್ ನೀಡದಿರಲು ವರಿಷ್ಠರು ನಿರ್ಧರಿಸಿದ್ದಾರೆ ಎಂದರು.


ನಾನು ಟಿಕೆಟ್ ಆಕಾಂಕ್ಷಿ
ಮುಂಬರುವ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ತಾವು ಟಿಕೆಟ್ ಆಕಾಂಕ್ಷಿ ಎಂದು ಸೊಗಡು ಶಿವಣ್ಣ ತಿಳಿಸಿದರು. ತಾವು ಹಾಗು ಎಂ.ಬಿ. ನಂದೀಶ್ ಅವರು ಟಿಕೆಟ್ ಕೇಳುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸದಸ್ಯತ್ವ ಮುಂದುವರಿಸಲು ಆಗೋಲ್ಲ
ನಗರಸಭೆ ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರನ್ನು ಮುಂದುವರೆಸಲು ಬರುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. ಒಂದು ವೇಳೆ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯತ್ವ ಮುಂದುವರಿಸಿದರೆ ನಗರಪಾಲಿಕೆ ಮಾಡುವುದರಲ್ಲಿ ಅರ್ಥವೇ ಎಲ್ಲ ಎಂದರು. ಅಲ್ಲದೇ ತಿದ್ದುಪಡಿ ತಂದರೆ ಕಾನೂನಿಗೆ ಅಗೌರವ ತೋರಿದಂತಾಗುತ್ತದೆ. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಬಾರದು ಎಂದರು.



ಸೊಗಡು ಬಿರಿಯಾನಿ ಪ್ರೀತಿ....

ತಮಗೆ ಮುಸ್ಲಿಂ ಬಾಂಧವರ ಪರಿಚಯ ಕಡಿಮೆ. ಕೆಲವರ ಮನೆಗೆ ಬಿರಿಯಾನಿ ತಿನ್ನಲಿಕ್ಕೆ ಹೋಗ್ತಾ ಇರ್ತಿನಿ. ಅಂತವರ ಪರಿಚಯ ತಮಗೆ ಇದೆ ಎಂದು ಸೊಗಡು ಶಿವಣ್ಣ ಚಟಾಕಿ ಸಿಡಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.