ತುಮಕೂರು

ಬೀದಿಗೆ ಬಂದ ಕಾಂಗ್ರೆಸ್ ಜಗಳ

Published On :

ತುರುವೇಕೆರೆ: ಬ್ಲಾಕ್ ಕಾಂಗ್ರೆಸ್ ಸಭೆಗೆ ಆಗಮಿಸುತ್ತಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಡೆದು ತಗಾದೆ ತೆಗೆದ ಪ್ರಕರಣ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಗೀತಾ ರಾಜಣ್ಣನವರು ತಮ್ಮ ಹಾಗೂ ಪಕ್ಷದ ಕಾರ್ಯಾಲಯವನ್ನು ತೆರೆದಿದ್ದಾರೆ. ಇಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿದ್ದ ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ನ ಪದಾಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು.  ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಅವರು ವಹಿಸುವರು ಎಂದು ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಪ್ರಕಟಿಸಿದ್ದರು. ಷಫಿ ಅಹಮದ್ ಕಾರ್ಯಕ್ರಮಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ತುರುವೇಕೆರೆ ಬ್ಲಾಕ್ ಕಾಂಗ್ರೆಸ್ನ ಗುಂಪು ಷಫಿ ಅಹಮದ್ ಅವರ ಕಾರು ತಡೆದು ಕಾರ್ಯಕ್ರಮಕ್ಕೆ ತೆರಳದಂತೆ ಆಗ್ರಹಿಸಿದರು.
ಗೀತಾ ರಾಜಣ್ಣನವರ ಕಡೆಯವರು ತುರುವೇಕೆರೆ ಬ್ಲಾಕ್ ಕಾಂಗ್ರೆಸ್ನ ಗಮನಕ್ಕೆ ತಾರದಂತೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರಿಂದ ತಮ್ಮ ಗುಂಪಿಗೆ ಅವಮಾನವಾಗಿದೆ. ಆದ್ದರಿಂದ ಈ ಸಭೆಗೆ ಹೋಗಬಾರದು ಎಂದು ಪಟ್ಟು ಹಿಡಿದರು. ಷಫಿ ಅಹಮದ್ ಅವರು ದಾರಿಯಲ್ಲಿ ರಂಪಾಟ ಬೇಡವೆಂದು ಹೇಳಿ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಾತುಕತೆ ನಡೆಸುವುದಾಗಿ ಹೇಳಿ ತೆರಳಿದರು. ಕೆಲಕಾಲ ಗೊಂದಲದ ಗೂಡಾಯಿತು. ಕಾರ್ಯಕ್ರಮಕ್ಕೆ ಹೋಗುವುದಿಲ್ಲವೆಂದು ಹೇಳಿ ಗುಂಪಿಗೆ ಷಫಿ ಅಹಮದ್ ಸಮಾಧಾನ ಮಾಡಿದ್ದರು. ಆ ವೇಳೆ ರಾಜ್ಯ ಕಾಂಗ್ರೆಸ್ ಮುಖಂಡರೊಬ್ಬರು ದೂರವಾಣಿ ಕರೆ ಮಾಡಿದ ನಂತರ ಷಫಿ ಅಹಮದ್ ವಿಧಿ ಇಲ್ಲದೇ ಕಾರ್ಯಕ್ರಮಕ್ಕೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
 ಪ್ರವಾಸಿ ಮಂದಿರದಲ್ಲಿದ್ದ ಷಫಿ ಅಹಮದ್ ಅವರನ್ನು ಗೀತಾ ರಾಜಣ್ಣ ನವರ ಬೆಂಬಲಿಗರು ಬಹಳ ಬಿಗಿ ಭದ್ರತೆಯಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರೇ ಸಭೆಗೆ ಕರೆತಂದರು. ಗೀತಾ ರಾಜಣ್ಣ ನವರ ಗುಂಪು ತಾರತಮ್ಯ ಮಾಡುತ್ತಿದೆ. ಹೊಸಬರು ಹಾಗೂ ಹಳಬರು ಎಂದು ವಿಭಜಿಸಿ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು.
ಸಣ್ಣಪುಟ್ಟ ಗೊಂದಲ: ಗೀತಾ ರಾಜಣ್ಣ ನವರ ನೇತೃತ್ವದಲ್ಲಿ ನಡೆದ ಸಭೆಗೆ ತೆರಳಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಮಾತನಾಡಿ ಎಲ್ಲಾ ಪಕ್ಷಗಳಲ್ಲಿ ಇರುವಂತೆ ಇಲ್ಲೂ ಸಣ್ಣ ಪುಟ್ಟ ಗೊಂದಲಗಳು ಇವೆ. ಅವುಗಳನ್ನು ಶೀಘ್ರದಲ್ಲಿ ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್ ಅವರು ಬಗೆಹರಿಸುವರು ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲವೊಂದೇ ಎಲ್ಲರ ಗುರಿಯಾಗಬೇಕು. ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಪಕ್ಷ ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.
ಮಾದರಿ ಕ್ಷೇತ್ರ: ಗೀತಾ ರಾಜಣ್ಣ ಮಾತನಾಡಿ ತಾವು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ತಮ್ಮ ಕಾರ್ಯವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಗುರಿ ಹೊಂದಿರುವುದಾಗಿ ಹೇಳಿದರು. ಸದ್ಯ ತಮ್ಮ ಮನವಿಯನ್ನು ಪುರಸ್ಕರಿಸಿರುವ ಕಾಂಗ್ರೆಸ್ ಸರ್ಕಾರ ಸುಮಾರು 19 ಕೋಟಿ ರು.ಗಳ ಕಾಮಗಾರಿಯನ್ನು ನೀಡಿದೆ. ಇದರಲ್ಲಿ ಪ್ರಥಮ ಹಂತವಾಗಿ ಸಿ ಎಸ್ ಪುರ ಹೋಬಳಿಗೆ ಹೆಚ್ಚು ಅನುದಾನ ಸಿಕ್ಕಿದೆ ಎಂದು ಗೀತಾ ರಾಜಣ್ಣ ಹೇಳಿದರು.
 ಸಿ ಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಟ್ಟಸ್ವಾಮಿ ಮಾತನಾಡಿ ತಾವು ಸದ್ಯ ಸಿ ಎಸ್ ಪುರ ಬ್ಲಾಕ್ ಕಾಂಗ್ರೆಸ್ನ ಕಾರ್ಯಕಾರಿಣಿ ಸಭೆಯನ್ನು ಮಾತ್ರ ಆಯೋಜಿಸಿರುವುದು. ಇದರಲ್ಲಿ ಬೇರೆ ಬ್ಲಾಕ್ ಕಾಂಗ್ರೆಸ್ ಸದಸ್ಯರನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಹಾಗೂ ರಾಜ್ಯ ಮುಖಂಡರು ತಾಲೂಕಿನಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯವನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದು ವಿನಂತಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಉಗ್ರಪ್ಪ, ಪಕ್ಷದ ವಕ್ತಾರ ಸಿದ್ರಾಮಣ್ಣ, ಹಿರಿಯ ಮುಖಂಡರಾದ ವೆಂಕಟೇಶ್ ಮೂರ್ತಿ, ಆನಂದಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎಂ.ಕೆ.ಕೆಂಪರಾಜ್, ಶಿವನಂಜಪ್ಪ, ಜಡೆಯ ರಂಗರಾಜು ಮೊದಲಾದ ಮುಖಂಡರು ಸಭೆಯಲ್ಲಿ ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.