ಆನೆ ದಾಳಿಗೆ ಮಹಿಳೆ ಬಲಿ
ಕಣದಲ್ಲಿ ಮಲಗಿದ್ದ ಕರಿಯಮ್ಮ ಸಾವು ಆಕೆಯ ಸಂಬಂಧಿಕರಿಗೆ ರು. 5 ಲಕ್ಷ ಪರಿಹಾರ
ಕನ್ನಡಪ್ರಭ ವಾರ್ತೆ ತುಮಕೂರು ಜ.25
ಆನೆಯ ಉಪಟಳಕ್ಕೆ ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ಸಮೀಪದ ಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ. ತೋಟದ ಕಣವೊಂದರಲ್ಲಿ ಮಲಗಿದ್ದ ಕರಿಯಮ್ಮ (61) ಎಂಬಾಕೆಯೇ ಆನೆ ದಾಳಿಗೆ ತುತ್ತಾದ ಮಹಿಳೆ.
ಮಲ್ಲಸಂದ್ರ ಗ್ರಾಮದ ಕರಿಯಮ್ಮ ಹಾಗೂ ಅವರ ಮಗ ಸಿದ್ದಲಿಂಗಯ್ಯ ಮತ್ತು ಮೊಮ್ಮಗ ಲೋಕೇಶ್ ಎಂಬುವರು ಗ್ರಾಮದ ಪಕ್ಕದಲ್ಲಿಯೇ ಇರುವ ಕಣದಲ್ಲಿ ಮಲಗಿದ್ದಾಗ ರಾತ್ರಿ 12 ಗಂಟೆ ಸುಮಾರಿಗೆ ಆನೆ ಕರಿಯಮ್ಮ ಅವರ ಕಾಲು ತುಳಿದು ಎದೆಯ ಮೇಲೆ ಕಾಲಿಟ್ಟಿತ್ತು.
ತಕ್ಷಣ ಸಿದ್ದಲಿಂಗಯ್ಯ ಎಚ್ಚರಗೊಂಡು ಮಗ ಲೋಕೇಶ್ನನ್ನು ಕರೆದುಕೊಂಡು ಓಡಿ ಹೋಗಿ, ಮಗನನ್ನು ಮನೆಗೆ ಬಿಟ್ಟು ಅಕ್ಕಪಕ್ಕದವರ ಮನೆಯವರಿಗೆ ತಾಯಿಯನ್ನು ಆನೆ ತುಳಿದಿರುವ ವಿಷಯ ತಿಳಿಸಿ ಕಣಕ್ಕೆ ಬಂದು ನೋಡಿದಾಗ ತಾಯಿಯ ಗಂಟಲಿನಿಂದ ಗೊರಗೊರ ಶಬ್ದ ಬರುತ್ತಿತ್ತು.
ತಕ್ಷಣವೇ 108 ಕ್ಕೆ ಸಂಪರ್ಕಿಸಿ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೋಸ್ಕರ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯ ಕರಿಯಮ್ಮ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಮತ್ತು ಸಿಬ್ಬಂದಿ ಕರಿಯಮ್ಮ ಮಲಗಿದ್ದ ಕಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲ್ಲಸಂದ್ರ ವೃತ್ತದ ಗ್ರಾಮಲೆಕ್ಕಿಗ ಭೇಟಿ ನೀಡಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಈ ವರದಿಯನ್ನು ಆಧರಿಸಿ ಅರಣ್ಯ ಇಲಾಖೆಯಿಂದ ಐದು ಲಕ್ಷ ರು. ಪರಿಹಾರ ಘೋಷಿಸಿದ್ದು, ಜಿಲ್ಲಾಸ್ಪತ್ರೆಯ ಶವಾಗಾರ ಮುಂಭಾಗ ಮೃತ ಕರಿಯಮ್ಮನ ಮಗ ಸಿದ್ದಲಿಂಗಯ್ಯನಿಗೆ ಆರಣ್ಯ ಇಲಾಖೆಯ ಹಾಸನ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ. ರಂಗರಾವ್, ಉಪ ಅರಣ್ಯಸಂರಕ್ಷಣಾಧಿಕಾರಿ ಅಮರನಾಥ್ ನೀಡಿದ್ದು, ಉಳಿದ ಮೂರು ಲಕ್ಷ ರು.ಗಳನ್ನು ತಹಶೀಲ್ದಾರ್ ವರದಿ ಬಂದ ಕೂಡಲೇ ವಿತರಿಸುವುದಾಗಿ ತಿಳಿಸಿದರು. ಈ ವೇಳೆ ಉಪವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ, ಡಿ.ಎಸ್. ನಾಗೇಂದ್ರಪ್ಪ ಮತ್ತಿತರರು ಇದ್ದರು.
ಸದ್ಯ ಆನೆಗಳು ಮಲ್ಲಸಂದ್ರ ಕೆರೆಯಲ್ಲಿ ಬೀಡುಬಿಟ್ಟಿದ್ದು, ಶವಾಗಾರದ ಮುಂದೆ ಜಮಾಯಿಸಿದ್ದ ಮಲ್ಲಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಸಾವು, ನೋವು ಸಂಭವಿಸಿದಾಗ ನೀಡುವ ಪರಿಹಾರದಂತೆ ಬೆಳೆ ನಷ್ಟವಾದಾಗಲೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಹಣ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹಾಳು ಮಾಡಿದಾಗಲೂ ಅಧಿಕಾರಿಗಳು ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರಲ್ಲದೆ, ಆಗಿಂದಾಗ್ಗೆ ಜಿಲ್ಲೆಗೆ ಬರುತ್ತಿರುವ ಆನೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

