ತುಮಕೂರು

ಮೊದಲು ಸೇವೆ, ನಂತರ ಗಳಿಕೆ

Published On :

ತುಮಕೂರು: ಸೇವೆ ಮೊದಲು, ಗಳಿಕೆ ನಂತರವಾಗಿರಲಿ ವಕೀಲರೇ. ವಕೀಲರ ಚಿತ್ತ ಶ್ರೀಸಾಮಾನ್ಯನತ್ತ ಇರಲಿ. ಈ ತತ್ವವೇ ಉತ್ತಮ ವಕೀಲನ ಲಕ್ಷಣ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಘೇಲ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರು ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಇಂದು ಜಗತ್ತು ವ್ಯಾವಹಾರಿಕವಾಗುತ್ತಿದೆ. ವ್ಯವಹಾರವೇ ಎಲ್ಲ ಅಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದರ್ಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಅಕ್ರಮ, ಅನೈತಿಕತೆ, ಅನಾಚಾರಗಳೇ ತುಂಬಿ ತುಳುಕಾಡುತ್ತಿವೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಹಿಂದೆ ಜೀವನ ಶೈಲಿ ಹೇಗಿತ್ತು. ಈಗ ಹೇಗಿದೆ ಎಂಬುದರ ಆತ್ಮಾವಲೋಕನ ಇಂದಿನ ತುರ್ತು. ಈಗ ಜೀವನ ಶೈಲಿ ಬದಲಾಗಿದೆ. ಅಷ್ಟೆ ಅಲ್ಲ ಆಧುನಿಕವಾಗಿದೆ. ಆದರೆ ನೈತಿಕತೆಯಿಂದ ದೂರ ಸಾಗುತ್ತಿದೆ ಎಂದು ನುಡಿದರು.
ಪದೇ-ಪದೇ ಮುಂದೂಡಿಕೆ ಬೇಡ: ಕೇಸ್ಗಳನ್ನು ಪದೇ-ಪದೇ ಮುಂದೂಡುವಂತೆ ಬೇಡಿಕೊಳ್ಳುವುದು ವಕೀಲರು ತಮಗೆ ತಾವೇ ಮಾಡಿಕೊಳ್ಳುವ ಮೋಸ. ವಕೀಲರಿಗೆ ಎಷ್ಟು ವಯಸ್ಸಾಗಿದೆ ಎಂಬುದು ಮುಖ್ಯವಲ್ಲ. ಅವರು ನ್ಯಾಯಾಲಯದಲ್ಲಿ ಎಷ್ಟು ಸಮಯ ಕಳೆದಿದ್ದಾರೆ ಎಂಬುದು ಮುಖ್ಯ. ಎಷ್ಟು ಜನರಿಗೆ ನ್ಯಾಯ ಒದಗಿಸಿದ್ದಾರೆ ಎಂಬುದು ಮುಖ್ಯ. ನಾವೀಗ ಆಧುನಿಕ ಸಮಾಜದಲ್ಲಿದ್ದೇವೆ. ಎತ್ತಿನಗಾಡಿಯಿಂದ ವೇಗವಾಗಿ ಚಲಿಸುವ ಮೋಟಾರ್ ಸೈಕಲ್, ಕಾರ್ ಬಳಸುತ್ತಿದ್ದೇವೆ. ಕಂಪ್ಯೂಟರ್, ರಾಕೆಟ್ ಯುಗದಲ್ಲಿದ್ದೇವೆ. ಆದರೆ ಇದೇ ವೇಗದಲ್ಲಿ, ತ್ವರಿತವಾಗಿ ವ್ಯಾಜ್ಯ ಬಗೆಹರಿಸುವಲ್ಲಿ ತಲ್ಲೀನರಾಗಿದ್ದೇವೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ವಾಗ್ದಾನ ನೀಡಿ: ಸರ್ಕಾರ ಸವಲತ್ತು ನೀಡುತ್ತಿದೆ. ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು, ತ್ವರಿತವಾಗಿ ನ್ಯಾಯದಾನ ಮಾಡಲು ಸಹಕರಿಸುವುದಾಗಿ ವಕೀಲರು ವಾಗ್ದಾನ ನೀಡುವಂತೆ ಕರೆ ನೀಡಿದರು. ಜತೆಗೆ ಕಾಲಮಿತಿಯೊಳಗೆ ನ್ಯಾಯ ತೀರ್ಮಾನ ಮಾಡಲು ವಕೀಲರು ಸಹಕರಿಸಬೇಕು. ಇದಕ್ಕೆ ಇರುವ ಒಂದೇ ಮಾರ್ಗ ಪದೇ-ಪದೇ ಕೇಸ್ಗಳನ್ನು ಮುಂದೂಡುವಂತೆ ನ್ಯಾಯಾಧೀಶರನ್ನು ಕೋರದಿರುವುದು ಎಂದು ವಘೇಲ ಮಾರ್ಮಿಕವಾಗಿ ನುಡಿದರು.
ಹೈಕೋರ್ಟ್ ನ್ಯಾಯಾಧೀಶ ಎನ್.ಕೆ. ಪಾಟೀಲ್, ಸಚಿವರಾದ ಟಿ.ಬಿ. ಜಯಚಂದ್ರ,  ಹೆಚ್.ಸಿ. ಮಹದೇವಪ್ಪ, ಆಡಳಿತಾತ್ಮಕ ನ್ಯಾಯಾಧೀಶ ಅಬ್ದುಲ್ ನಜೀರ್, ಜಿಲ್ಲೆಯ ಹೈಕೋರ್ಟ್ ನ್ಯಾಯಾಧೀಶರಾದ ಫಣೀಂದ್ರ, ರತ್ನಕಲಾ, ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಪ್ರಭಾಕರಶಾಸ್ತ್ರಿ, ಜಿಲ್ಲಾ ನ್ಯಾಯಾಧೀಶರು, ವಕೀಲರು ಇತರರು ಉಪಸ್ಥಿತರಿದ್ದರು.


ಹಣ ಬಿಡುಗಡೆಗೆ ಸಚಿವರ ಪಣ
ತುಮಕೂರು: ತುಮಕೂರಿನಲ್ಲಿ ಇನ್ನಷ್ಟು ನ್ಯಾಯಾಲಯ ಕಟ್ಟಡ ಕಟ್ಟಲು ಜಿಲ್ಲಾ ಕಾನೂನು ಸಚಿವ ಜಯಚಂದ್ರ ಹಾಗೂ ಹೈಕೋರ್ಟ್ ರು.9 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಣಕಾಸು ಇಲಾಖೆಗೆ ಮಂಜೂರಾತಿಗೆ ಕೋರಿಕೆ ಸಲ್ಲಿಸಲಾಗುವುದು. ಹಣ ನೀಡಲು ಸೂಕ್ತ ಕ್ರಮ ಕೈಗೊಂಡು, ಶೀಘ್ರದಲ್ಲೇ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಸಚಿವ ಮಹದೇವಪ್ಪ ಭರವಸೆ ನೀಡಿದರು. ಸಮಾರಂಭದಲ್ಲಿ ಸಂಸದ ಜಿ.ಎಸ್. ಬಸವರಾಜ್ ಉಪಸ್ಥಿತರಿದ್ದರು. ತುಮಕೂರು ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿದ, ತುಮಕೂರು ಜಿಲ್ಲೆಯವರೇ ಆದ ಟಿ.ಬಿ. ಜಯಚಂದ್ರ ಕಾನೂನು ಸಚಿವರಾಗಿರುವುದು. ಬಸವರಾಜ್ ಸಂಸದರಾಗಿರುವುದು ಗಮನಾರ್ಹ ಸಂಗತಿ ಎಂದು ಮಹದೇವಪ್ಪ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.