ಇಲ್ಲಿ ಮೂಲಸೌಕರ್ಯಗಳೇ ಮಾಯ!
ಶಿರಾ: ಇಲ್ಲಿನ 10ನೇ ವಾರ್ಡ್ ಲಾಡಪುರಕ್ಕೆ ಸಂಬಂಧಿಸಿದ ಭವಾನಿನಗರ ಬಡಾವಣೆಗೆ ನಾಲ್ಕೈದು ವರ್ಷಗಳ ಹಿಂದೆ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿತ್ತು. ಆದರೆ ಕಾಮಗಾರಿ ಅರ್ಪೂರ್ಣಗೊಂಡಿರುವುದರಿಂದ ಜನರು ಅನಾನುಕೂಲಗಳನ್ನು ಎದುರಿಸುವಂತಾಗಿದೆ.
ಸರ್ಕಾರದ ಯೋಜನೆಯಡಿ ಸರಕಾರದ ಅಂಗಸಂಸ್ಥೆ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಅವಶ್ಯಕ ಮೂಲಭೂತ ಸೌಕರ್ಯಗಳ ಕೊರತೆ ಪಟ್ಟಿ ಮಾಡಿದರೆ ಯೋಜನೆ ಹಳ್ಳ ಹಿಡಿದಿರುವುದು ಕಣ್ಣಿಗೆ ರಾಚುತ್ತದೆ.
ಸುಮಾರು 160 ಕುಟುಂಬ ವಾಸಿಸುತ್ತಿರುವ ಪ್ರದೇಶದಲ್ಲಿ 154 ಸೈಟುಗಳನ್ನು ವಿಂಗಡಿಸಿ, ಅದರ ಪೈಕಿ 120ರಷ್ಟು ಮನೆಗಳನ್ನು ಕಟ್ಟಿ ಫಲಾನುಭವಿಗಳಿಗೆ ನೀಡಲಾಗಿದೆಯಾದರೂ, ಕಳಪೆ ಕಾಮಗಾರಿಯಿಂದ ಮಳೆಗಾಲದಲ್ಲಿ ಮನೆಗಳು ಸೋರುತ್ತಿವೆ ಎಂದು ಸ್ಥಳೀಯರು ಮಾಧ್ಯಮಗಳ ಮುಂದೆ ದೂರಿದ್ದಾರೆ.
ರಸ್ತೆ ಎಲ್ಲಿ?: ಡಾಂಬರು ಕಾಣಬೇಕಿದ್ದ ರಸ್ತೆಗಳು ಕೇವಲ ಜಲ್ಲಿ ಹೊಡೆದು ನೆಲಸಮತಟ್ಟು ಮಾಡುವಷ್ಟಕ್ಕೆ ಸೀಮಿತವಾಗಿದ್ದು, ಎದ್ದು ನಿಂತ ಜಲ್ಲಿ ಕಲ್ಲು ಓಡಾಡುವವರಿಗೆ ಸವಾಲಾಗಿವೆ. ಸುಮಾರು 200ಮೀ ಉದ್ದದ ಕಲ್ಲು ಕಟ್ಟಡದ ದೊಡ್ಡ ಚರಂಡಿ ಸ್ಥಿತಿ ಕೂಡಾ ಭಿನ್ನವಾಗಿಲ್ಲ. ಐಎಚ್ಎಸ್ಡಿಪಿ ಯೋಜನೆ ಅಡಿ 2010-11ನೇ ಸಾಲಿನಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಇನ್ನೂ ನೀರನ್ನೇ ಕಂಡಿಲ್ಲ. ಇನ್ನು ನೀರು ಸರಬರಾಜು ಮಾಡುವ ಮಾತು ದೂರವೇ ಸರಿ.
ಚರಂಡಿಗೆಂದು ಸುಮಾರು 25 ಲಕ್ಷ, ರಸ್ತೆಗೆ 15ರಿಂದ 20 ಲಕ್ಷ, ಮನೆ ನಿರ್ಮಾಣ, ಮೇಲ್ತೊಟ್ಟಿ ನಿರ್ಮಾಣ ಮುಂತಾದವಕ್ಕೆ ಕೋಟಿಗಳೇ ಖರ್ಚಾಗಿದ್ದರೂ, ಸವಲತ್ತುಗಳು ಮರೀಚಿಕೆಯಾಗಿಯೇ ಉಳಿದಿವೆ.
ಸ್ಪಂದಿಸದ ಅಧಿಕಾರಿ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯ ನಗರ ಸಭೆ ಸದಸ್ಯ ಅಂಜಿನಪ್ಪ, ಕೊಳಗೇರಿ ಅಭಿವೃದ್ಧಿ ಮಂಡಲಿ ಎಇಇ ದೂರವಾಣಿಗೆ ಸಿಗುವುದಿಲ್ಲ. ಸಿಕ್ಕಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಇಲ್ಲಿನ ಚರಂಡಿ, ರಸ್ತೆ, ಒಳಚರಂಡಿ ಮೊದಲಾಗಿ ಯಾವುದೇ ಕಾಮಗಾರಿ ಪೂರ್ತಿಗೊಳಿಸಿಲ್ಲ. ಅಧಿಕಾರಿ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಕುರಿತು ಕ್ರಮ ಕೈಗೊಳ್ಳಬೇಕಿದೆ.
ಕಳಪೆ ಅಸಮರ್ಪಕ ಕಾಮಗಾರಿ ನಡೆಸಿರುವ ಮಂಡಳಿ ಕಾಗದದ ಮೇಲೆ ಕಾಮಗಾರಿ ಮುಗಿಸಿದ್ದರೂ, ಬಡಾವಣೆಯನ್ನು ನಗರಸಭೆಗೆ ವಹಿಸಿಕೊಡುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

