ತುಮಕೂರು

ಮನೆ ಮುಂದಿನ ವಾಹನಗಳಿಗೆ ಬೆಂಕಿ: 6 ಯುವಕರ ಬಂಧನ

Published On :

ತುಮಕೂರು: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿ, ಆತಂಕಕ್ಕೆ ಕಾರಣರಾಗಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ ತಿಳಿಸಿದರು. ಅವರು ತಮ್ಮ ಕಚೇರಿಯಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಇವರು ಮಾದಕ ಪದಾರ್ಥ ಸೇವನೆಯ ಚಟಕ್ಕೆ ಬಿದ್ದು ವಾಹನಗಳಿಗೆ ಬೆಂಕಿಯಿಟ್ಟು ವಿಕೃತ ಸಂತೋಷ ಪಡುತ್ತಿದ್ದು, ಇವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಕರಾಗಿರುವುದು ಆತಂಕಕಾರಿ ಸಂಗತಿ ಎಂದು ರಮಣಗುಪ್ತ ಅಭಿಪ್ರಾಯಪಟ್ಟರು. ತುಮಕೂರು ನಗರದ ಸಪ್ತಗಿರಿ ಬಡಾವಣೆ, ಶಿವಮೂಕಾಂಬಿಕ ನಗರ, ಅಮರಜ್ಯೋತಿನಗರ, ಸರಸ್ವತಿಪುರಂ, ಎಸ್‌ಎಸ್‌ಐಟಿ ಕಾಲೇಜು ಬಳಿ ಕಳೆದ ನಾಲ್ಕೈದು ತಿಂಗಳಲ್ಲಿ ವಾಹನಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳೂರು ದಿಣ್ಣೆ ವಾಸಿಗಳಾದ ಇಮ್ರಾನ್ (21) ಮೊಹಮದ್ ಶಫಿಉಲ್ಲಾ(19), ಮುಬಾರಕ್(18), ಶಾಬೂದ್ದೀನ್(16), ಮೊಹಮದ್(17), ಮೊಹಮದ್(17) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಕುಕೃತ್ಯದಿಂದ ಒಟ್ಟು 31 ಲಕ್ಷ ರು. ಮೌಲ್ಯದ ವಾಹನಗಳು ಬೆಂಕಿಗಾಹುತಿಯಾದವು ಎಂದು ಎಸ್ಪಿ ರಮಣ್ ಗುಪ್ತ ಮಾಹಿತಿ ನೀಡಿದರು. ಆರೋಪಿ ಯುವಕರು ಪಂಕ್ಚರ್ ಹಾಕುವ ಸಲ್ಯೂಷನ್ ಅನ್ನು ಸೇವನೆ ಮಾಡಿ ಉದ್ರೇಕಗೊಂಡು ಮನೆ ಮುಂದೆ ಹಾಗೂ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದರು. ನಗರದ ವಿವಿದೆಡೆ 7 ಕಾರು, 1 ಆಟೋ, 1 ಜೋಕಾಲಿಗೆ ಬೆಂಕಿಯಿಟ್ಟಿದ್ದರು ಎಂದು ವಿವರಿಸಿದರು. ರಸ್ತೆ ಬದಿಯ ಚರಂಡಿ: ಸೇತುವೆ ಕಾಮಗಾರಿಗೆ ಕಲ್ಪು ಚಪ್ಪಡಿ ಸಾಗಿಸುತ್ತಿದ್ದ ಈ ಯುವಕರನ್ನು ಸಾರ್ವಜನಿಕರು ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸಹ ಬೆಂಕಿ ಹಚ್ಚುವ ದುಷ್ಕೃತ್ಯಕ್ಕೆ ಪ್ರೇರಣೆಯಾಗಿದೆ ಎಂದ ಎಸ್ಪಿ, ಹೆಚ್ಚಿನ ವಿದ್ಯಾವಂತರಲ್ಲದ ಈ ಯುವಕರು ಚಟಕ್ಕೆ ಬಿದ್ದು ಇಂತಹ ದುಷ್ಕೃತ್ಯಗಿಳಿದಿದ್ದು, ಮತ್ತೆ ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದೆಂದು ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ರೌಡಿಶೀಟರ್ ಪಟ್ಟಿಗೆ ಇವರನ್ನು ಸೇರಿಸಲಾಗಿದೆಯೆಂದರು. ಆರೋಪಿಗಳ ಬಂಧನಕ್ಕೆ ತಿಲಕ್‌ಪಾರ್ಕ್ ಸಿಪಿಐ ಕೆ.ಆರ್.ರಾಘವೇಂದ್ರ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಧಾಕೃಷ್ಣ, ಅಮರೇಶ್‌ಗೌಡ, ಸಿಬ್ಬಂದಿ ಮುನಾವರ್‌ಪಾಷ, ಅಯೂಬ್‌ಜಾನ್, ಮಹೇಶ್, ನಾರಾಯಣ, ಯಶೋಧರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಪ್ರಕರಣದಲ್ಲಿ ಮೊದಲು ಪ್ರಮುಖ ಆರೋಪಿ ಇಮ್ರಾನ್, ಮಹಮದ್ ಷಫೀಉಲ್ಲಾ ಹಾಗೂ ಮುಬಾರಕ್ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಉಳಿದ ಮೂವರು ಆರೋಪಿಗಳು ಸೆರೆಸಿಕ್ಕಿದ್ದು, ಇವರು ಮಧ್ಯ ರಾತ್ರಿ ಸಮಯದಲ್ಲಿ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಂತೋಷ ಪಡುತ್ತಿದ್ದರು ಎಂದು ತಿಳಿಸಿದರು. ಎಎಸ್ಪಿ ಆರ್.ಲಕ್ಷ್ಮಣ್, ಡಿವೈಎಸ್ಪಿ, ಜಗದೀಶ್ ಸಿಪಿಐ ಕೆ.ಆರ್ ರಾಘವೇಂದ್ರ, ಪಿಎಸ್‌ಐ ರಾಘವೇಂದ್ರ, ಅಮರೇಶ್‌ಗೌಡ ಇತರರು ಹಾಜರಿದ್ದರು.

ಮಟ್ಕಾ: ಗೂಂಡಾ ಕಾಯ್ದೆಯಡಿ ಬಂಧನ
ತುಮಕೂರು:
ಮಟ್ಕಾ ದಂಧೆಯಲ್ಲಿ ತೊಡಗುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ರಮಣಗುಪ್ತ ಎಚ್ಚರಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಶಿರಾ ಮತ್ತು ತುಮಕೂರಿನಲ್ಲಿ ಹಲವು ವರ್ಷಗಳಿಂದ ಮಟ್ಕಾ ದಂಧೆ ನಡೆಸಿ, ರೈತರು, ಕೂಲಿಕಾರ್ಮಿಕರು, ಆಟೋರಿಕ್ಷಾ ಚಾಲಕರು, ಬಡಮಧ್ಯಮ ವರ್ಗದವರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಿರಾದ ಬಸ್ ಏಜೆಂಟ್ ಶಿವಕುಮಾರ್ ಹಾಗೂ ತುಮಕೂರಿನ ಶಾಂತಿನಗರದ ಮಂಜುನಾಥ ಅಲಿಯಾಸ್ ಹಟ್ಟಿ ಮಂಜ ಗೂಂಡಾಕಾಯ್ದೆಯಡಿ  ಬಂದಿತ ಆರೋಪಿಗಳಾಗಿದ್ದಾರೆ. ಶಿರಾ ಶಿವಕುಮಾರ್ ವಿರುದ್ಧ 5 ಮಟ್ಕಾ ಪ್ರಕರಣ ದಾಖಲಾಗಿವೆ. ನ್ಯಾಯಾಲಯದಲ್ಲಿ ಈತನಿಗೆ ಹಿಂದೆ ಶಿಕ್ಷೆಯೂ ಆಗಿತ್ತು. ಅಂತೆಯೇ ತುಮಕೂರಿನ ಮಂಜುನಾಥ ರೌಡಿಪಟ್ಟಿಯಲ್ಲಿದ್ದು, 5 ಕೊಲೆ, ಕೊಲೆಯತ್ನ, ಹಲ್ಲೆ ಹೊಡೆದಾಟ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟಿದ್ದ. ಈತನನ್ನು ಅನೈತಿಕ ವ್ಯವಹಾರ, ಜೂಜು, ಮಟ್ಕಾ ನಿಗ್ರಹ ಕಾಯ್ದೆಯಡಿ ಬಂಧಿಸಿ ತುಮಕೂರು ಉಪಕಾರಾಗೃಹದಲ್ಲಿ ಬಂಧನದಲ್ಲಿಡಲಾಗಿದೆಯೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.