ಮಹಿಳೆ ಅಬಲೆಯಲ್ಲ ಸಬಲೆ
ತಿಪಟೂರು: ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗದೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ತಾವೇ ನಿರ್ವಹಿಸಿಕೊಂಡು ಆದರ್ಶ ಮಹಿಳೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತಿದ್ದಾಳೆಂದು ನ್ಯಾಯಾಧೀಶೆ ಕೆ.ಬಿ.ಗೀತಾ ತಿಳಿಸಿದರು.
ಪಟ್ಟಣದ ಕಲ್ಪತರು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ಅಬಲೆಯಲ್ಲ ಸಬಲೆ. ಮಹಿಳೆ ಆತ್ಮಸ್ಥೈರ್ಯದಿಂದ ಯಾವುದೇ ಕೆಲಸ ಮಾಡಿದರು ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ ಪರಿಪೂರ್ಣ ಮಹಿಳೆಯಾಗಬೇಕೆಂದು ಕರೆ ನೀಡಿದರು.
ಇತ್ಯರ್ಥ ಮಾಡಿಕೊಳ್ಳಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್. ಶಿಲ್ಪ ಸಮಾಜದಲ್ಲಿರುವ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಿದರೆ ಮಾತ್ರ ಮಹಿಳಾ ಅಭಿವೃದ್ಧಿ ಸಾಧ್ಯ ಎಂದರಲ್ಲದೆ ಸಣ್ಣಪುಟ್ಟ ಜಗಳಗಳಿಗೆ ನ್ಯಾಯಾಲಯದ ಮೊರೆ ಹೋಗದೆ ತಮ್ಮ ತಮ್ಮಲ್ಲಿಯೇ ಇತ್ಯರ್ಥ ಮಾಡಿಕೊಳ್ಳಬೇಕೆಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಮಹಿಳೆ ಮತ್ತು ಕಾನೂನು ವಿಷಯವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಮೂರ್ತಿ ಮಾತನಾಡಿ ನಮ್ಮ ದೇಶದ ಸಂಸ್ಕೃತಿಯನ್ನು ಪ್ರಕೃತಿಗೆ ತಕ್ಕಂತೆ ಅಳವಡಿಸಿಕೊಂಡರೆ ಸುಸಂಸ್ಕೃತರಾಗಿ ಬದುಕಲು ಸಹಾಯವಾಗುತ್ತದೆ. ಮಹಿಳೆಯರು ದೌರ್ಜನ್ಯಗಳಿಗೆ ಒಳಗಾದರೆ ಕಾನೂನಿನಲ್ಲಿ ಕಠಿಣ ಕಾಯ್ದೆಗಳಿದ್ದು, ಅವುಗಳನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳಲು ಮಹಿಳೆಯರು ಕ್ರಮವಹಿಸುವುದು ಸೂಕ್ತ ಎಂದರು.
ಕೆವಿಕೆಯ ವಿಷಯ ತಜ್ಞೆ ರೂಪ ಬಿ.ಪಾಟೀಲ್ ಪೌಷ್ಠಿಕ ಆಹಾರದ ಮಹತ್ವ ಕುರಿತು ಮಾತನಾಡಿ ಮಹಿಳೆಯರು ಆರೋಗ್ಯವಾಗಿ ಸದೃಢ ಜೀವನ ನಡೆಸಬೇಕಾದರೆ ಸಮತೋಲನ ಆಹಾರ ಮುಖ್ಯ. ಪ್ರತಿದಿನ ಹಣ್ಣು, ಸೊಪ್ಪು, ತರಕಾರಿಗಳನ್ನು ಸೇವಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯದಿಂದಿರಲು ಸಾಧ್ಯ ಎಂದರು.
ಸಿಡಿಪಿಓ ಓಂಕಾರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ನವೀನಾ, ಅಂಗನವಾಡಿ ಕಾರ್ಯಕರ್ತೆ ಅನುಸೂಯಮ್ಮ, ಸ್ತ್ರೀಶಕ್ತಿ ಒಕ್ಕೂಟದ ನಿರ್ದೇಶಕರು, ಇಲಾಖೆ ಸಿಬ್ಬಂದಿ, ಮೇಲ್ವಿಚಾರಕಿಯರು ಸೇರಿದಂತೆ 400ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಮಹಿಳೆಯರು ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸುವರ್ಣಮ್ಮ, ಮಂಜುಳಾ ಪ್ರಾರ್ಥಿಸಿ, ಎಸಿಡಿಪಿಓ ಸುಂದರಮ್ಮ ಸ್ವಾಗತಿಸಿ, ಬಿ.ಎನ್.ಪ್ರೇಮ ನಿರೂಪಿಸಿ, ಲೀಲಾಬಾಯಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

