ತುಮಕೂರು

ಪಾವಗಡ ಪುರಸಭೆ ಅಧಿಪತ್ಯಕ್ಕೆ ಚುನಾವಣೆ ಇಂದು

Published On :

ಪಾವಗಡ: ಜಿಲ್ಲಾಧಿಕಾರಿಗಳ ಆದೇಶದಂತೆ ಮಾ.15ರಂದು ಪಾವಗಡ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.
ಕಳೆದ 2013 ಫೆಬ್ರವರಿ 15ರಂದು ಇಲ್ಲಿನ ಪುರಸಭೆಗೆ ಚುನಾವಣೆ ನಡೆದಿದ್ದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ತಡೆ ಬಿದ್ದು ಕಳೆದ ಒಂದು ವರ್ಷದಿಂದ ಉಪವಿಭಾಗಾಧಿಕಾರಿಗಳ ಹಿಡಿತದಲ್ಲಿ ಪುರಸಭೆ ಆಡಳಿತ ನಿರ್ವಹಣೆ ನಡೆಯುತ್ತಿತ್ತು. ನ್ಯಾಯಾಲದಲ್ಲಿ ಪ್ರಕರಣ ಇತ್ಯಾರ್ಥವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಮಾ.15ರಂದು ಪಾವಗಡ ಪುರಸಭೆಯ ಚುನಾವಣೆ ನಡೆಸಲು ಆದೇಶ ಜಾರಿ ಮಾಡಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಆಗಿದೆ. ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಪಟ್ಟಣದ ಪುರಸಭೆಯಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿನ ಪುರಸಭೆಗೆ ಒಟ್ಟು 23 ಮಂದಿ ಚುನಾಯಿತರಾಗಿದ್ದಾರೆ.ಇದರಲ್ಲಿ ಕಾಂಗ್ರೆಸ್ ಬೆಂಬಲಿತ 10 ಹಾಗೂ ಜೆಡಿಎಸ್ ಬೆಂಬಲಿತ 11ಮತ್ತು ಬಿಎಸ್‌ಆರ್ 1ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಒಬ್ಬರು ಇದ್ದಾರೆ. ಕಾಂಗ್ರೆಸ್ ಬೆಂಬಲದಿಂದ ಗೆದ್ದ 23ನೇ ವಾರ್ಡಿನ ಸದಸ್ಯ ಅಲುಕುಂದಪ್ಪ ಎಂಬುವರು ಮೊನ್ನೆಯಷ್ಟೆ ಹೃದಯಾಘಾತದಿಂದ ನಿಧನರಾಗಿದ್ದ ಹಿನ್ನೆಲೆಯಲ್ಲಿ ಈ ಸ್ಥಾನ
ತೆರವಾಗಿ ಕಾಂಗ್ರೆಸ್‌ಗೆ ಒಂದು ಸ್ಥಾನ ನಷ್ಟವಾಗಿ ಜೆಡಿಎಸ್‌ಗೆ ಇದರ ಲಾಭವಾಗಿದೆ. ಅಲ್ಲದೇ ಸ್ವತಂತ್ರವಾಗಿ ಸ್ವರ್ಧಿಸಿ ಗೆದ್ದ ಸದಸ್ಯರೊಬ್ಬರು ಜೆಡಿಎಸ್‌ಗೆ ಬೆಂಬಲ ಸೂಚಿಸುವುದಾಗಿ ಸುದ್ದಿ ಹರಡಿದ್ದು ಶಾಸಕರ ಮತ ಸೇರಿದಂತೆ ಒಟ್ಟು 13ಮಂದಿ ಸದಸ್ಯರು ಜೆಡಿಎಸ್ ಪರ ಮತ ಚಲಾಯಿಸುವುದರಿಂದ ಜೆಡಿಎಸ್ ಬೆಂಬಲಿತರೆ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಲಕ್ಷಣಗಳು ಕಾಣುತ್ತಿವೆ.
ಮೂವರಲ್ಲಿ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಮೂವರಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ಪಟ್ಟಣದ 2ನೇ ವಾರ್ಡಿನಿಂದ ಗೆದ್ದ ಸುಧಾಕರರೆಡ್ಡಿ, 7ನೇ ವಾರ್ಡಿನ ಮಹಾಲಕ್ಷ್ಮೀ ಪ್ರಭಾಕರ್ ಹಾಗೂ 8ನೇ ವಾರ್ಡಿನ ರಾಧಮ್ಮ ಪ್ರಕಾಶಪ್ಪ ಎಂಬುವರ ಮಧ್ಯೆ ಪೈಪೋಟಿ ನಡೆಯುತ್ತಿದ್ದು ಪಕ್ಷದ ಮುಖಂಡರು ಮತ್ತು ಜೆಡಿಎಸ್ ಬೆಂಬಲಿಗ ಸದಸ್ಯರ ಒಲವಿನಂತೆ 2ನೇ ವಾರ್ಡಿನ ಸುಧಾಕರರೆಡ್ಡಿ ಎಂಬುವವರೆ ಅಧ್ಯಕ್ಷರಾಗುವ ಸಂಭವವಿದೆ. ಮಹಾಲಕ್ಷ್ಮೀ ಪ್ರಭಾಕರ್ ಮತ್ತು ರಾಧಮ್ಮ ಪ್ರಕಾಶಪ್ಪ ಅವರೂ ತೀವ್ರ ಪೈಪೋಟಿ ನಡೆಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ 10ತಿಂಗಳಂತೆ ಅವಧಿ ನಿಗದಿಪಡಿಸಿ ಮೂವರಿಗೂ ಅವಕಾಶ ನೀಡುವ ಸಂಭವ ಇದೆ ಎನ್ನಲಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ವಂತಂತ್ರವಾಗಿ ಸ್ಪರ್ಧಿಸಿ ಗೆದ್ದ 12ನೇ ವಾರ್ಡಿನ ಲಕ್ಷ್ಮಮ್ಮ ನಾಗರಾಜ್ ಆಯ್ಕೆಯಾಗುವ ನಿರೀಕ್ಷೆ ಇದೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.