ದಾಖಲೆ ಇಲ್ಲದ ರು. 11.30 ಲಕ್ಷ ವಶ
ಶ್ರೀರಂಗಪಟ್ಟಣ: ದಾಖಲೆ ಇಲ್ಲದೆ ಮೈಸೂರಿನಿಂದ ಹಾಸನಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 11.30 ಲಕ್ಷ ರು. ಹಣವನ್ನು ಪಟ್ಟಣದ ಪೊಲೀಸರು ಕಳಸ್ತವಾಡಿ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಂಡಿದ್ದಾರೆ.
ಕಳಸ್ತವಾಡಿ ಬಳಿಯ ಚುಣಾವಣಾ ಅಕ್ರಮ ತಡೆ ಚೆಕ್ ಪೋಸ್ಟ್ ಬಳಿ ಬಂದ ಇನೊವಾ ಕಾರನ್ನು ತಪಾಸಣೆ ನಡೆಸಿದ ವೇಳೆ ಕಾರಿನ ಡಿಕ್ಕಿಯಲ್ಲಿ 11.30 ಲಕ್ಷ ರು.ಗಳು ಇರುವುದು ಕಂಡು ಬಂದಿತು. ಈ ಕುರಿತಂತೆ ಕಾರಿನ ಮಾಲೀಕ ನಾಗರಾಜುನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಕಾರಿನ ಮಾಲೀಕ ಮೈಸೂರಿನ ಶ್ರೀರಾಂಪುರದ ನಿವಾಸಿ ಎಂದು ತಿಳಿದು ಬಂದಿದೆ. ಹಾಸನ ವ್ಯಕ್ತಿಯೊಬ್ಬನಿಂದ ತೆಗೆದುಕೊಂಡಿದ್ದ ಸಾಲ ತೀರಿಸಲು ಈ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಷಯವನ್ನು ಆದಾಯ ಇಲಾಖೆಯವರಿಗೆ ಒಪ್ಪಿಸಿರುವುದಾಗಿ ಪಟ್ಟಣ ಪೊಲೀಸರು ತಿಳಿಸಿದ್ದಾರೆ.
ಮಳವಳ್ಳಿಗೆ ದೊಡ್ಡಕೆರೆಯೇ ಶೌಚಾಲಯ!
-ಎಂ.ಡಿ. ಉಮೇಶ್ ಮಳವಳ್ಳಿ
ಮಳವಳ್ಳಿ: ಪುರಸಭೆ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಯಾವುದೇ ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ಪಟ್ಟಣದ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಹೊರತು ಪಡಿಸಿದರೆ ಪಟ್ಟಣದ 23 ವಾರ್ಡ್ಗಳಲ್ಲೂ ಶೌಚಾಲಯವಿಲ್ಲ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು ರಸ್ತೆಯಾಗಲಿ, ಕನಕಪುರ-ಕೊಳ್ಳೇಗಾಲ-ಮದ್ದೂರು ರಸ್ತೆಗಳು ಇದಕ್ಕೆ ಹೊರತಾಗಿಲ್ಲ. ಪಟ್ಟಣದ ಪುರಸಭೆಯ ಅಂಚಿನಲ್ಲಿರುವ ದೊಡ್ಡಕೆರೆ ಸುತ್ತಮುತ್ತಲ ಸ್ಥಳಗಳಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ರಸ್ತೆ ಮದ್ದೂರು -ಬೆಂಗಳೂರು ಸಂಪರ್ಕ ಕಲ್ಪಿಸಲಿದೆ. ಪಟ್ಟಣದಿಂದ ಹಾದುಹೋಗುವ ಹಲವಾರು ಪ್ರವಾಸಿ ತಾಣಗಳಿದ್ದು ಪ್ರವಾಸಿಗರು ಪಟ್ಟಣದ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಯಲು ಶೌಚದಿಂದ ಉಂಟಾಗುವ ದುರ್ವಾಸನೆ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯ ಕೋಡಿ ನೀರು ಹರಿದು ಹೋಗುವ ಹಾಸುಗಲ್ಲುಗಳ ಮೇಲೆ ಮನಬಂದಂತೆ ಸಾರ್ವಜನಿಕರು ಮಲ ವಿಸರ್ಜಿಸಿ ಕೆರೆಯ ಅಂದವನ್ನೇ ಹಾಳು ಮಾಡಿದ್ದಾರೆ. ದೊಣ್ಣೇಹಳ್ಳ ಸೇರಿದಂತೆ ಕೆರೆಯ ಏರಿಯ ಸುತ್ತಲು ಇದೇ ಪರಿಸ್ಥಿತಿ. ದೊಣ್ಣೇ ಹಳ್ಳದ ಪಕ್ಕದಲ್ಲಿಯೇ ಸ್ಪೋಟ್ಸ್ ಕ್ಲಬ್, ತಾಲೂಕು ಸೊಸೈಟಿ ಇದೆ. ಪಟ್ಟಣದಿಂದ ಹಾದುಹೋಗುವ ಪ್ರವಾಸಿ ಸ್ಥಾನಗಳಾದ ವಿಶ್ವ ವಿಖ್ಯಾತ ಗಗನಚುಕ್ಕಿ ಜಲಪಾತ, ತಲಕಾಡು, ಮುಡುಕುತೊರೆ, ಬಿಳಿಗಿರಿರಂಗನಬೆಟ್ಟ, ಕೊಳ್ಳೇಗಾಲ, ಚಾಮರಾಜನಗರಕ್ಕೆ ಹಾದು ಹೋಗುವ ಪ್ರವಾಸಿಗರಿಗೆ ಈ ದುರ್ವಾ ಸನೆ ಸ್ವಾಗತ ನೀಡುತ್ತಿದ್ದು, ಪುರಸಭೆ ಇನ್ನಾದರೂ ಎಚ್ಚೆತ್ತು ಸ್ವಚ್ಛಗೊಳಿಸುವುದೇ ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

