ಸಂಭ್ರಮದ ಹೋಳಿ ಆಚರಣೆ
ಕುಣಿಗಲ್: ಬಣ್ಣಗಳ ಹಬ್ಬ ಹೋಳಿಯನ್ನು ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳು, ನಾಗರಿಕರು ಸಂಭ್ರಮ ಸಡಗರದಿಂದ ಆಚರಿಸಿದ್ದು, ಆರ್.ಎಂ.ಸಿ ಜಾಗಿಂಗ್ ಸಮಿತಿ ಸದಸ್ಯರು ನೈಸರ್ಗಿಕ ಬಣ್ಣ ಬಳಸಿ ಈ ಬಾರಿ ವಿನೂತನ ವಾಗಿ ಆಚರಿಸುವ ಮೂಲಕ ಗಮನ ಸಳೆದರು.
ರಾತ್ರಿ ಹನ್ನೆರಡು ಗಂಟೆಗೆ ಹೋಳಿ ಹಬ್ಬದ ಅಂಗವಾಗಿ ಪಟ್ಟಣದ ಸಂತೇಮೈದಾನದಲ್ಲಿ ನೆಡಲಾಗಿದ್ದ ಕಾಮನ ಕಂಬವನ್ನು ದಹಿಸಿದ ನಂತರ, ಬೆಳಗ್ಗೆ ಸೂರ್ಯೋದಯಕ್ಕೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಯುವಕರು, ಮಕ್ಕಳು ಕೆಲವೆಡೆ ಮಹಿಳೆಯರು ವಯೋವಾನದ ಭೇದವಿಲ್ಲದೆ ಬಣ್ಣಗಳನ್ನು ಎರೆಚಾಡಿ ಖುಷಿಪಟ್ಟರು.
ಪಟ್ಟಣದ ಆರ್ಎಂಸಿ ಯಾರ್ಡ್ನ ಜಾಗಿಂಗ್ ಸಮಿತಿ ಸದಸ್ಯರು ಎಲ್ಲಾ ವಾರ್ಡ್ಗಳಿಗೂ ಸಂಚರಿಸಿ, ನೈಸರ್ಗಿಕ ಬಣ್ಣಗಳನ್ನು ವಿತರಿಸುವ ಜೊತೆಯಲ್ಲಿ ಆ ಭಾಗದ ಪ್ರಮುಖರಿಗೆ ಬಣ್ಣ ಹಚ್ಚಿ ಹಬ್ಬದ ಶುಭಾಶಯ ಕೋರಿದರು.
ಅಂತಿಮವಾಗಿ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪ ಸಾಮೂಹಿಕವಾಗಿ ಬಣ್ಣ ಹಚ್ಚಿ, ಎರಚಿ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಶುಭಕೋರಿ ಮಾತನಾಡಿದ ಸಮಿತಿ ಪ್ರಮುಖ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎಲ್.ಹರೀಶ್ ಮಾತನಾಡಿದರು. ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಬಲರಾಮ, ಹೋಳಿ ಹಬ್ಬವು ಹಿಂದುಗಳಿಗೆ ಪವಿತ್ರವಾದ ಹಬ್ಬವಾಗಿದೆ, ಕೆಟ್ಟ ಚಟಗಳನ್ನು ಸಂಪೂರ್ಣವಾಗಿ ದಹಿಸುವುದಾಗಿದೆ ಎಂದರು. ಸಮಿತಿ ಸದಸ್ಯರಾದ ಸಂತೋಷ, ಸುರೇಶ, ರವೀಂದ್ರಕುಮಾರ, ಗಂಗಾಧರ, ಶ್ರೀನಿವಾಸ, ನಾಗೇಶ, ಕುಮಾರ, ಸೂರಿ ಇತರರು ಪಾಲ್ಗೊಂಡಿದ್ದರು.
ಜಿಲ್ಲಾದ್ಯಂತ 398 ರೌಡಿಗಳ ವಶ
ತುಮಕೂರು: ತುಮಕೂರು ಜಿಲ್ಲಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿ 398 ರೌಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ರೌಡಿಗಳು ಸಮಾಜ ವಿದ್ರೋಹಿ ಮತ್ತು ಸಮಾಜ ಸ್ವಾಸ್ಥ್ಯ ಹಾಳು ಮಾಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ, ಜೀವನ ಶೈಲಿ ಬದಲಾಯಿಸಿಕೊಂಡು ಉತ್ತಮ ಮಾರ್ಗಗಳನ್ನು ಅನುಸರಿಸಿ ಜೀವನ ನಡೆಸುವಂತೆ ಎಚ್ಚರಿಕೆ ನೀಡಲಾಗಿದೆ. ತುಮಕೂರು ನಗರದ ಕವಾಯಿತು ಮೈದಾನದಲ್ಲಿ ರೌಡಿಗಳನ್ನು ವಿಚಾರಣೆಗೆ ಒಳಪಡಿಸಿದ ಎಸ್ಪಿ ರಮನ್ ಗುಪ್ತಾ, ಎಎಸ್ಪಿ ಆರ್. ಲಕ್ಷ್ಮಣ್, ಆರಕ್ಷಕ ಉಪಾಧೀಕ್ಷಕ ಎಲ್. ಜಗದೀಶ್, ಅಬ್ದುಲ್ ಖಾದರ್, ಅವರು ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಲೋಕಾಸಭಾ ಚುನಾವಣಾ ನಿಮಿತ್ತ ಒಳ್ಳೆಯ ನಡವಳಿಕೆಯಿಂದ ಇರಲು ಮುಚ್ಚಳಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿದರು.
ತುಮಕೂರು ಜಿಲ್ಲಾದ್ಯಂತ ಈ ಹಿಂದೆ 661 ರೌಡಿಗಳು ಇದ್ದು, ರೌಡಿಗಳ ಚಟುವಟಿಕೆಗಳನ್ನು ಪರಿಶೀಲಿಸಿ, ಅವರಲ್ಲಿ 108 ಜನ ರೌಡಿಗಳನ್ನು ರೌಡಿ ಪಟ್ಟಿಯಿಂದ ತೆಗೆದು, ಹೊಸದಾಗಿ 364 ಜನರ ವಿರುದ್ಧ ರೌಡಿ ಪಟ್ಟಿ ತೆರೆದಿದ್ದು, ಒಟ್ಟು 917 ಜನ ರೌಡಿಗಳು ಜಿಲ್ಲಾದ್ಯಂತ ರೌಡಿ ಪಟ್ಟಿಯಲ್ಲಿರುತ್ತಾರೆ. ಈ ಪೈಕಿ 432 ರೌಡಿಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಒಳ್ಳೆಯ ನಡತೆಯಿಂದ ಇರುವಂತೆ ಮುಚ್ಚಳಿಕೆ ತೆಗೆದುಕೊಳ್ಳಲಾಗಿದೆ. 54 ಜನ ರೌಡಿಗಳು ವಿವಿಧ ಅಪರಾಧಗಳಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಅಲ್ಲದೆ ಪಾವಗಡ ಠಾಣೆಯ ಇಬ್ಬರು ಶಿರಾ ಠಾಣೆಯ ಇಬ್ಬರು ಕ್ಯಾತಸಂದ್ರ ಮತ್ತು ಹೊಸಬಡಾವಣೆ ಠಾಣೆಯ ತಲಾ ಒಬ್ಬರಂತೆ ಒಟ್ಟು 6 ಜನರ ವಿರುದ್ಧ ಗೂಂಡಾ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗಿದೆ.
ಹುಳಿಯಾರು ಸರ್ಕಾರಿ ಪ್ರೌಢಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ
ಹುಳಿಯಾರು: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಾಲಾ ಆವರಣದಲ್ಲಿ ಕೈಗೊಂಡಿರುವ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಪರಿಗಣಿಸಿ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈ ಶಾಲೆಯನ್ನು 2013-14 ನೇ ಸಾಲಿನ ಜಿಲ್ಲಾ ಮಟ್ಟದ ಪರಿಸರ ಮಿತ್ರಶಾಲೆ ಎಂದು ಗುರುತಿಸಿ 10 ಸಾವಿರ ರು. ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಿದ್ದಾರೆ.
ವಿಜ್ಞಾನ ಶಿಕ್ಷಕಿ ವಿದ್ಯಾಕುಂಚನೂರು ಅವರ ಮಾರ್ಗದರ್ಶನದಲ್ಲಿ ಶಾಲೆಯ ಹತ್ತು ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ತಂಡ ಶಾಲೆಯ ಕೈತೋಟದಲ್ಲಿ ಕಾಡುಕೃಷಿ ಯೋಜನೆಯಡಿ ವಿವಿಧ ಪ್ರಕಾರದಲ್ಲಿ ಶಾಲಾಮಟ್ಟದಲ್ಲಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ತರಕಾರಿ ಸೇರಿದಂತೆ ಇತರೆ
ಪದಾರ್ಥಗಳನ್ನು ಬೆಳೆದಿರುವುದಲ್ಲದೆ, ಹೆಚ್ಚುತ್ತಿರುವ ಮಾಲಿನ್ಯವನ್ನು ಯಾವ ರೀತಿ ನಿಯಂತ್ರಣ ಮಾಡಬಹುದು ಎಂಬ ಅರಿವನ್ನು ಮೂಡಿಸುವ ಕಾರ್ಯದಲ್ಲಿ ಈ ತಂಡ ತೊಡಗಿದ್ದು ಪ್ರಶಸ್ತಿಗೆ ಭಾಜನವಾಗಿದೆ.
ತಂಡದ ವಿದ್ಯಾರ್ಥಿಗಳಾದ ಚಂದ್ರಕಲಾ, ಲಕ್ಷ್ಮೀ, ರಮ್ಯ, ಕಲ್ಲೇಶ್, ನವೀನ್, ಪ್ರಮೋದ್, ಪ್ರವೀಣ್, ಗಿರೀಶ್, ಗೌತಮ್, ಹೇಮಂತ್ ಅವರನ್ನು ವಿದ್ಯಾಕುಂಚನೂರು ಸೇರಿದಂತೆ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.
ಅಧ್ಯಕ್ಷರಾಗಿ ಯರ್ರಪ್ಪ ಆಯ್ಕೆ
ಶಿರಾ: ತಾಲೂಕಿನ ಬೇವಿನಹಳ್ಳಿ ಗ್ರಾಮದ ಬೇವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಸಿದ್ದಾಪುರದ ಯರ್ರಪ್ಪ, ಉಪಾಧ್ಯಕ್ಷರಾಗಿ ಬೇವಿನಹಳ್ಳಿಯ ಶಾರದಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾಗಿ ಶಿಕ್ಷಕ ಬಿ.ಆರ್.ರಾಮಣ್ಣ ಕಾರ್ಯ ನಿರ್ವಹಿಸಿದರು ಎಂದು ಕಾರ್ಯದರ್ಶಿ ಬಿ.ಆರ್. ಯೋಗಾನಂದ ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ಗಳ ನೇಮಕ
ಶಿರಾ: ಮತದಾರರಿಗೆ ಹಣ, ಮದ್ಯ, ಉಚಿತ ಆಹಾರ ಉಡುಗೊರೆ ಮತ್ತು ಇತರೆ ವಸ್ತುಗಳ ಆಸೆ ಆಮಿಷಗಳನ್ನು ನೀಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಬಗ್ಗೆ ಬರುವ ದೂರುಗಳು ಹಾಗೂ ಅಭ್ಯರ್ಥಿಯ ಹಣ ಖರ್ಚು ಮಾಡಿದ ಬಗ್ಗೆ ಬರುವ ದೂರುಗಳ ಬಗ್ಗೆ ಕ್ರಮ ವಹಿಸಲು ಫ್ಲೈಯಿಂಗ್ ಸ್ಕ್ವಾಡ್ಗಳನ್ನು ನೇಮಕ ಮಾಡಿ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದರಂತೆ ತಾಲೂಕಿಗೆ ಹನುಮಂತರಾಜು ಮೊ. 8904244434, ಶ್ರೀನಿವಾಸ್, ಎಚ್. ಶಶಿಧರ್ ಮೊ. 9611789551, ಪೊಲೀಸ್ ಇಲಾಖೆಯಿಂದ ನರಸಿಂಹಮೂರ್ತಿ ಮೊ. 9535751198, ಪ್ರಾಣೇಶ್ ರಾವ್ ಮೊ. 9845538942, ಬಾಲಕೃಷ್ಣ ಎಚ್.ಸಿ. ನಟರಾಜು, ರಂಗನಾಥ್, ಎ.ಪಿ.ಸಿ. ಜಗದೀಶ್, ವಿಡಿಯೋ ಗ್ರಾಫರ್ ಮಂಜುನಾಥ್ ಅವರನ್ನು ನೇಮಿಸಲಾಗಿದೆ.
ಕೃಷ್ಣಮೂರ್ತಿ ಆಯ್ಕೆ
ಶಿರಾ: ತಾಲೂಕಿನ ಲಕ್ಕನಹಳ್ಳಿಯ ಟಿ.ಕೃಷ್ಣಮೂರ್ತಿ ಅವರನ್ನು ಜಯಕರ್ನಾಟಕ ವೇದಿಕೆಯ ರಾಜಾಧ್ಯಕ್ಷ ಮುತ್ತಪ್ಪ ರೈ ಅವರು ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

