ತುಮಕೂರು

ಪಾದಯಾತ್ರೆ ಮೂಲಕ ಮತಬೇಟೆ

Published On :

ಕನ್ನಡಪ್ರಭ ವಾರ್ತೆ    ತುಮಕೂರು    ಮಾ.23
ಈಗಾಗಲೇ ಎಲ್ಲರಿಗಿಂತ ಮುಂಚೆಯೇ ದೇವೇಗೌಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿರುವ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಭಾನುವಾರ ಬೆಳಗ್ಗೆ
ತುಮಕೂರಿನ ಹನುಮಂತಪುರದ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ಮೂಲಕ ಮತ ಯಾಚನೆ ನಡೆಸಿದರು.
ತಮ್ಮನ್ನು ಸಂಸದರಾಗಿ ಆರಿಸಿದಲ್ಲಿ ನಷ್ಟದಲ್ಲಿರುವ ತುಮಕೂರಿನ ಎಚ್‌ಎಂಟಿ ಪುನಶ್ಚೇತನಕ್ಕೆ ಬದ್ಧರಾಗಿರುವುದಾಗಿಯೂ,  ಕಾರ್ಮಿಕರ ಹಿತ ಕಾಪಾಡುತ್ತೇನೆಂದು ಭರವಸೆ ನೀಡಿದರು.
ತುಮಕೂರು ನಗರ ಸೇರಿದಂತೆ ಎಲ್ಲಾ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಯುಜಿಡಿ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ನೀಡುತ್ತೇನೆ. ಒಮ್ಮೆ ಮತದಾರರು ಅವಕಾಶ ಕೊಟ್ಟರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಶೈಕ್ಷಣಿಕವಾಗಿ ಹೆಸರು ಪಡೆದಿರುವ ತುಮಕೂರು ನಗರಕ್ಕೆ ಪ್ರಮುಖವಾಗಿ ಕ್ರೀಡಾಂಗಣ, ಬಸ್ ತಂಗುದಾಣಗಳು, ಉದ್ಯಾನವಗಳ ಕೊರತೆಯಿದೆ. ಅವುಗಳ ಅಭಿವೃದ್ಧಿಗೆ ಒತ್ತು ಕೊಡಬೇಕೆಂಬುದು ನನ್ನ ಇರಾದೆಯಾಗಿದೆಯೆಂದರು.
8ನೇ ಬಾರಿ ಸ್ಪರ್ಧೆ: ವಿಧಾನಸಭೆ ಸೇರಿದಂತೆ ಒಟ್ಟು 8 ನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ತಾವು, ವಿಶೇಷ ಪ್ರಚಾರ ಕಾರ್ಯತಂತ್ರದೊಂದಿಗೆ ಮತದಾರರನ್ನು, ಪಕ್ಷದ ಮುಖಂಡರು, ಕಾರ್ಯಕರ್ತರನ್ನು ತಲುಪುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಜೆಡಿಎಸ್ ಮಹಿಳಾ ಘಟಕ, ಕಾರ್ಮಿಕ ಘಟಕ, ಯುವ ಘಟಕ, ಪರಿಶಿಷ್ಟ ಜಾತಿ-ವರ್ಗಗಳ ಘಟಕ ಹೀಗೆ ವಿವಿಧ ಘಟಕಗಳ ಸಭೆಯನ್ನು ನಡೆಸಿ ಚುನಾವಣಾ ಪ್ರಚಾರಕ್ಕೆ
ಪದಾಧಿಕಾರಿಗಳನ್ನು ಅಣಿಗೊಳಿಸಿದ್ದೇನೆ. ಈಗಾಗಲೇ ತಿಪಟೂರು, ಮಧುಗಿರಿ, ಕೊರಟಗೆರೆ, ತುಮಕೂರು ನಗರದ ಕೆಂದ್ರ ಸ್ಥಾನಗಳಲ್ಲಿ ಸಮಾವೇಶಗಳನ್ನು ನಡೆಸಿದ್ದು, ಎಲ್ಲಾ ಕ್ಷೇತ್ರ ವ್ಯಾಪ್ತಿಯಲ್ಲೂ ಸಂಚರಿಸಿ ಪಕ್ಷ ಸಂಘಟನೆ ಜತೆಗೆ ಮತದಾರರ ಬೆಂಬಲ ಕೋರಲಾಗುವುದು ಎಂದರು.
ಪ್ರಜ್ಞಾವಂತ ಮತದಾರರ ಬಳಿ ವಿನಯದಿಂದ ಮತಯಾಚಿಸಬೇಕೇ ಹೊರತು ದಬಾಯಿಸಿ, ಹೆದರಿಸಿ, ಬೆದರಿಸಿ ಮತ ಕೇಳುವದಲ್ಲ ಎಂದು ಪರೋಕ್ಷವಾಗಿ ಎದುರಾಳಿ ಅಭ್ಯರ್ಥಿಗಳ ಹೆಸರು ಪ್ರಸ್ತಾಪಿಸದೇ ಮಾರ್ಮಿಕವಾಗಿ ನುಡಿದರು.
ಈ ವೇಳೆ ಜೆಡಿಎಸ್ ಮುಖಂಡ ಗೋವಿಂದರಾಜು. ಜಿ.ಪಂ ಮಾಜಿ ಉಪಾಧ್ಯಕ್ಷ ಟಿ.ಎನ್.ಕೃಷ್ಣಪ್ಪ, ಜಿ.ಪಂ ಅಧ್ಯಕ್ಷೆ ಸಾಕಮ್ಮ ನಾಗರಾಜು, ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಮ್ಮ, ತಾಹಿರಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ಯುವ ಘಟಕದ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್, ನಗರ ಘಟಕದ ಅಧ್ಯಕ್ಷ ಚಂದ್ರಬಾಬು, ತುಮಕೂರು ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯರಾದ ಬಾಲಕೃಷ್ಣ(ಕಿಟ್ಟಿ), ರಾಮಕೃಷ್ಣ, ಪ್ರೆಸ್ ರಾಜಣ್ಣ, ಎಚ್.ಆರ್. ಮುಖಂಡ ಜಹಾಂಗೀರ್ ರವೀಶ್, ಸಿ.ಎಸ್.ಪುಟ್ಟೀರಪ್ಪ, ಗಂಗಣ್ಣ, ಗುರುಪ್ರಕಾಶ್ ಬಳ್ಳುಕರಾಯ, ವಕ್ತಾರ ಮಲ್ಲಿಕಾರ್ಜುನ್ ಮತ್ತಿತರ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.