ತುಮಕೂರು

ನಾನು ಗೆಲ್ಲೋದು ನಿಶ್ಚಿತ

Published On :

ತುಮಕೂರು: ಈ ಬಾರಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಹಲವು ವಿಘ್ನಗಳನ್ನು ಎದುರಿಸಿದ್ದ, ತುಮಕೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ತುಮಕೂರಿನ ಕಾಲ್ಟೆಕ್ಸ್ ಸರ್ಕಲ್ ನಲ್ಲಿರುವ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದರು.
ಬಿ.ಎಸ್. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಬಸವರಾಜು ಈ ಬಾರಿ ಕೊನೆ ಕ್ಷಣದವರೆಗೆ ಬಿಜೆಪಿ ಟಿಕೆಟ್ ಪಡೆಯಲು ಹರಸಾಹಸ ನಡೆಸಿದ್ದು ಇತಿಹಾಸ. ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣನವರೊಂದಿಗಿನ ಭಿನ್ನಾಭಿಪ್ರಾಯ ನಾಮಪತ್ರ ಸಲ್ಲಿಕೆ ವೇಳೆ ಶಮನಗೊಂಡಂತೆ ಕಂಡು ಬಂತು. ಸೊಗಡು ಶಿವಣ್ಣ ಜಿಎಸ್‌ಬಿ ಜತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದಿದ್ದು, ನಾಮಪತ್ರ ಸಲ್ಲಿಕೆ ವೇಳೆ ಜಿಎಸ್‌ಬಿ ಪರ ಸೂಚಕರಾಗಿ ಹೋಗಿದ್ದು ಗಮನಾರ್ಹವಾಗಿತ್ತು.
ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ 1 ಗಂಟೆಯ ವೇಳೆಗೆ ಜಿ.ಎಸ್. ಬಸವರಾಜು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ, ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್, ಮಾಜಿ ಸಚಿವ ಸೋಮಣ್ಣ, ಎಂಎಲ್‌ಸಿ ವೈ. ಎ. ನಾರಾಯಣಸ್ವಾಮಿ ಇತರರೊಡನೆ ಆಗಮಿಸಿ ಸದ್ದಿಲ್ಲದೆ ನಾಮಪತ್ರ ಸಲ್ಲಿಸಿದರು.
ಮಧ್ಯಾಹ್ನ 1 ಗಂಟೆಯ ವೇಳೆಗೆ ಮತ್ತೊಮ್ಮೆ ಬಾಜಾ ಬಜಂತ್ರಿಯೊಂದಿಗೆ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಜಿ.ಎಸ್. ಬಸವರಾಜು ಎರಡನೇ ಬಾರಿಗೆ ಮೇಲಿನ ಮುಖಂಡರೊಂದಿಗೆ ಅಲ್ಲದೇ, ಮಾಜಿ ಸಚಿವ ಸೊಗಡು ಶಿವಣ್ಣನವರೊಡಗೂಡಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.
ನಾನೇ ಗೆಲ್ಲೋದು: ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎಸ್. ಬಸವರಾಜು, ಪಕ್ಷದ ಎಲ್ಲ ಮುಖಂಡರು, ಎಲ್ಲರೂ ಒಗ್ಗೂಡಿ ನಾಮಪತ್ರ ಸಲ್ಲಿಸಿದ್ದೇವೆ. ಅದೇ ರೀತಿ ಒಗ್ಗೂಡಿ ಚುನಾವಣೆ ಎದುರಿಸುತ್ತೇವೆ. ಇಲ್ಲಿ ಬಂದಿರುವ ಜನತೆ ಸ್ವಯಂ ಪ್ರೇರಣೆಯಿಂದ ಬಂದಿರುವಂತವರು. ನಾವ್ಯಾರು ಕರೆದುಕೊಂಡು ಬಂದಿಲ್ಲ. ದೇಶದಲ್ಲಿ ಬೀಸುತ್ತಿರುವ ನರೇಂದ್ರ ಮೋದಿ ಅಲೆ, ತಾವು ವೈಯಕ್ತಿಕವಾಗಿ ಮಾಡಿರುವ ಅಭಿವೃದ್ಧಿ ಕೆಲಸ - ಕಾರ್ಯಗಳು ತಮ್ಮ ಗೆಲವಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು. ಮೋದಿ ಅಲೆಯೊಂದೇ ಸಾಕೆ, ಮೋದಿ ಬರಬೇಕೆ ಎಂಬ ಪ್ರಶ್ನೆಗೆ ಅಲೆಯೊಂದೇ ಸಾಕಾಗಲ್ಲ, ಮೋದಿ ಬರಬೇಕು. ಮೋದಿ ಬಂದರೆ ಒಳ್ಳೇದು ಎಂದು ಉತ್ತರಿಸಿದರು. ನಾನು ಗೆಲ್ಲೋದು ನಿಶ್ಚಿತ. ಮೋದಿ ಪ್ರಧಾನಿ ಆಗೋದು ಖಚಿತ ಎಂದು ಜಿಎಸ್‌ಬಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ಮನ್ನಿಸಿ: ಮುಂದಿನ ದಿನಗಳಲ್ಲಿ ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳುತ್ತೇನೆ. ಹಿಂದೆ ನಾನು ಅಷ್ಟಾಗಿ ಸೇವೆ, ಸಹಾಯ ಮಾಡಲಾಗದ ಸ್ಥಿತಿಯಲ್ಲಿದ್ದೆ. ಇನ್ನು ಮುಂದೆ ಕಾರ್ಯಕರ್ತರ ಒಡನಾಡಿಯಾಗಿರುತ್ತೇನೆ. ನನ್ನನ್ನು ಗೆಲ್ಲಿಸಿದರೆ ಚಿರಋಣಿಯಾಗಿರುತ್ತೇನೆ. ಎಲ್ಲ ಮನ್ನಿಸಿ, ನನ್ನ ಗೆಲ್ಲಿಸಿ ಎಂದು ಬಸವರಾಜು ಕಾರ್ಯಕರ್ತರು, ಮುಖಂಡರಿಗೆ ಮನವಿ ಮಾಡಿದ್ದು ವಿಶೇಷವಾಗಿತ್ತು. ಬಿಜೆಪಿ ಶಕ್ತಿ ಏನೆಂಬುದನ್ನು ತೋರಿಸಿ. ಮೋದಿ ಪ್ರಧಾನಿಯಾಗಲು ಸಹಕರಿಸಿ. ದೇಶದ ಹಿತ ಕಾಪಾಡಿ ಎಂದು ಬಸವರಾಜು ತಮ್ಮ ಬೆಂಬಲಿಗರಿಗೆ ಇದೇ ವೇಳೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.