ತುಮಕೂರು

ರೈತ ವಿರೋಧಿ ಶಾಸಕ; ಆರೋಪ

Published On :

ತುಮಕೂರು: ಸ್ವತಃ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಕೊಬ್ಬರಿ ಆನ್‌ಲೈನ್ ವ್ಯಾಪಾರಕ್ಕೆ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿಯವರೇ ಪ್ರತ್ಯಕ್ಷ - ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು, ಕೊಬ್ಬರಿ ವರ್ತಕರೊಂದಿಗೆ ಶಾಮೀಲಾಗಿ, ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಬಿ.ಎಸ್. ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ರೈತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರೆವಿಗೆ ತುಮಕೂರು ಜಿಲ್ಲೆಯ ತೆಂಗು - ಕೊಬ್ಬರಿ ರೈತರ ಶೋಷಣೆ ನಿರಂತರವಾಗಿ ಮುಂದುವರೆದಿತ್ತು. ಏಷ್ಯಾದಲ್ಲೇ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಖ್ಯಾತಿಯಾಗಿರುವ ತಿಪಟೂರು ಕೊಬರಿ ಮಾರುಕಟ್ಟೆಯಲ್ಲಿ ರೈತರನ್ನು ಪ್ರತಿ ಹಂತದಲ್ಲೂ ಶೋಷಣೆಗೆ ಒಳಪಡಿಸಿ, ಪ್ರತಿನಿತ್ಯ ಗೋಳು ಹೊಯ್ದುಕೊಳ್ಳಲಾಗುತ್ತಿತ್ತು. ಕೊಬ್ಬರಿ ತೂಕದಲ್ಲಿ ಮೋಸ, ಚೀಲದ ತೂಕದಲ್ಲಿ ಮೋಸ, ಎಲೆಕ್ಟ್ರಾನಿಕ್ ಯಂತ್ರ ತೂಕದಲ್ಲಿ ಮೋಸ, ಕೌಟು, ಚೂರಿಗೆ ಅತ್ಯಂತ ಕಡಿಮೆ ಬೆಲೆ ಕೊಡುವುದು, ಕೊಬ್ಬರಿ ಚೀಲಗಳನ್ನು 40 ಕೆಜಿಗೆ ಸೀಮಿತಗೊಳಿಸಿರುವುದು ಸೇರಿದಂತೆ ಇನ್ನಿತರೆ ಅವ್ಯವಹಾರ ತಡೆಗಟ್ಟುವ ಉದ್ದೇಶದಿಂದಲೇ, ಈ ಶೋಷಣೆಗೆ ಅಂತ್ಯ ಹಾಡಲೆಂದೇ ಕೊಬ್ಬರಿ ಆನ್‌ಲೈನ್ ಟೆಂಡರಿಂಗ್‌ಗೆ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಚಾಲನೆ ನೀಡಿದ ಈ ಕೆಲಸಕ್ಕೆ ತಿಪಟೂರಿನಲ್ಲಿ ಅವರದೇ ಪಕ್ಷದ ಶಾಸಕ ಷಡಕ್ಷರಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತಡೆಯೊಡ್ಡುತ್ತಿದ್ದು, ಕೊಬ್ಬರಿ ವರ್ತಕರ ಪರವಾಗಿ ನಿಂತಿದ್ದಾರೆ ಎಂದು ದೇವರಾಜ್ ಆರೋಪಿಸಿದ್ದಾರೆ.
9000 ಮುಟ್ಟಿದ ಕೊಬ್ಬರಿ: ತಿಪಟೂರಿನಲ್ಲಿ ಆನ್‌ಲೈನ್ ಟೆಂಡರ್ ಮೂಲಕ ಕೊಬ್ಬರಿ ವ್ಯಾಪಾರಕ್ಕೆ ಚಾಲನೆ ನೀಡಿದ ನಂತರ, ಕೊಬ್ಬರಿ ಕ್ವಿಂಟಲ್‌ಗೆ ದಾಖಲೆಯ 9000 ರು. ತಲುಪಿದೆ. ರೈತರಿಂದ ಖರೀದಿಸಿದ ಕೊಬ್ಬರಿಗೆ ಕೆಲವೇ ಗಂಟೆಗಳಲ್ಲಿ, ಅಂದರೆ ಮಾರಾಟ ಮಾಡಿದ ನಂತರ ದಿನದ ಬೆಳಗ್ಗೆ 11.30 ರೊಳಗೆ ಹಣ ಸಂಪೂರ್ಣವಾಗಿ ಸಂದಾಯವಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ, ವರ್ತಕರ ಕುತಂತ್ರಕ್ಕೆ ಅವಕಾಶವಿಲ್ಲದೆ ಸಲೀಸಾಗಿ ನಡೆಯುತ್ತಿರುವ, ರೈತರಿಗೆ ಸಂಪೂರ್ಣ ಸಹಕಾರಿಯಾಗಿರುವ ಈ ಕೊಬ್ಬರಿ ಆನ್‌ಲೈನ್ ಟೆಂಡರಿಂಗ್‌ನಿಂದ ರೈತರು ಬಹುವರ್ಷಗಳ ಶೋಷಣೆಯಿಂದ ಮುಕ್ತರಾಗಿದ್ದಾರೆ.
ಈಗ ತಾನೆ ನಿಟ್ಟುಸಿರು ಬಿಡುತ್ತಿದ್ದಾರೆ. ಇದಕ್ಕೆ ಕಲ್ಲಾಕುವ ಕೆಲಸಕ್ಕೆ ಮುಂದಾಗಿರುವ ಕೊಬ್ಬರಿ ವರ್ತಕರ ದುರ್ವರ್ತನೆಗೆ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಕುಮ್ಮಕ್ಕು ನೀಡುತ್ತಿರುವುದು ಖಂಡನೀಯ ಎಂದಿದ್ದಾರೆ ದೇವರಾಜ್. ಈ ಆನ್‌ಲೈನ್ ಕೊಬರಿ ವ್ಯಾಪಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಿಪಟೂರು ಕೊಬ್ಬರಿ ವರ್ತಕರು, ಕಳೆದ 9 ವಾರಗಳಿಂದ ವ್ಯಾಪಾರ ಬಂದ್ ಮಾಡಿದ್ದರು. ಅನಿರ್ಧಿಷ್ಟಾವಧಿ ಬಂದ್ ಮಾಡುವ ಬೆದರಿಕೆ ಹಾಕಿದ್ದರೂ, ಅವರು ಅಂದುಕೊಂಡಂತೆ ಆಗುತ್ತಿಲ್ಲ. ಆದರೆ ಶಾಸಕ ಷಡಕ್ಷರಿ ಮಾತ್ರ ವರ್ತಕರ ಪರ ನಿಂತು, ರೈತ ವಿರೋಧಿಯಾಗಿದ್ದಾರೆ ಎಂದು ದೇವರಾಜ್ ದೂರಿದ್ದಾರೆ.
ತನಿಖಾ ಆಯೋಗಕ್ಕೆ ಒತ್ತಾಯ: ಬಹುಕಾಲದಿಂದಲೂ ಬೇರು ಬಿಟ್ಟುಕೊಂಡಿರುವ ಇಂತಹ ಮಾರುಕಟ್ಟೆಯ ವಂಚನೆಗಳನ್ನು ಹೋಗಲಾಡಿಸಲು ಸರ್ಕಾರ ಜಾರಿಗೆ ತಂದಿರುವ ರೈತಸ್ನೇಹಿ ಏಕೀಕೃತ ಮಾರುಕಟ್ಟೆಯ ವೇದಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ರೈತ ಎಲ್ಲ ಕಾಲದಲ್ಲೂ ಸಾಲಗಾರನಾಗಿ ಉಳಿಯುತ್ತಿರುವುದಕ್ಕೆ ಸಾಲ ಕೊಟ್ಟವನ ಹುನ್ನಾರಗಳನ್ನು ಬಟಾಬಯಲು ಮಾಡಬೇಕಿದೆ. ರೈತರನ್ನು ಪ್ರತಿದಿನ ದುಸ್ಥಿತಿಗೆ ತಳ್ಳುತ್ತಿರುವ ಕೊಬರಿ ಮಾರುಕಟ್ಟೆಯ ವರ್ತಕರ ಮೋಸದ ವಿರುದ್ಧ ತಿರುಗಿ ಬೀಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ರೈತರಿದ್ದಾರೆ. ಕೊಬ್ಬರಿ ಆನ್‌ಲೈನ್ ಟೆಂಡರಿಂಗ್ ಮಾರುಕಟ್ಟೆಯನ್ನು ಬುಡಮೇಲು ಮಾಡಲು ಹೊರಟಿರುವ ಮಾರುಕಟ್ಟೆ ವಿರೋಧಿ ರೈತಶಕ್ತಿಗಳ ವಿರುದ್ಧ, ಈ ವರೆವಿಗೆ ನಡೆದಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆ ಅವ್ಯವಹಾರ, ವರ್ತಕರ ದುರ್ವರ್ತನೆ, ಬಿಳಿ ಚೀಟಿ ವ್ಯವಹಾರ ಸೇರಿದಂತೆ ಆನ್‌ಲೈನ್ ಟೆಂಡರಿಂಗ್ ವ್ಯಾಪಾರಕ್ಕೆ ತಡೆಯೊಡ್ಡುತ್ತಿರುವ ಎಲ್ಲ ಪಕ್ಷಗಳ ಮುಖಂಡರ ವಿರುದ್ಧ ವಿಶೇಷ ತನಿಖಾ ತಂಡವನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಧನಂಜಯಾರಾಧ್ಯ, ಗಂಗಾಧರಯ್ಯ, ಪರಮಶಿವಯ್ಯ, ದೇವರಾಜ್ ಟಿ.ಎಸ್. ಸತೀಶ್ ಕೆಂಕೆರೆ ಸೇರಿದಂತೆ ಇತರ ರೈತ ಮುಖಂಡರು ಉಪಸ್ಥಿತರಿದ್ದರು.



ಬಿ.ಸಿ. ನಾಗೇಶ್
ವೈಯಕ್ತಿಕ ಬೆಂಬಲ
ಕೊಬ್ಬರಿ ವರ್ತಕರೂ ಆಗಿರುವ ತಿಪಟೂರಿನ ಬಿಜೆಪಿ ಮಾಜಿ ಶಾಸಕ ಬಿ.ಸಿ. ನಾಗೇಶ್ ಈ ಕೊಬ್ಬರಿ ಆನ್‌ಲೈನ್ ವ್ಯಾಪಾರಕ್ಕೆ ವೈಯಕ್ತಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಈ ಪ್ರಕಾರವೇ ಕೊಬ್ಬರಿ ಖರೀದಿಸುತ್ತಿದ್ದಾರೆ. ಮಿಕ್ಕಂತೆ, ತಾಲೂಕು, ಜಿಲ್ಲೆ ಬಿಜೆಪಿ ಘಟಕವಾಗಲೀ, ಮಾಜಿ ಶಾಸಕ ನಂಜಾಮರಿಯವರಾಗಲೀ, ಒಟ್ಟಾರೆ ಯಾವೊಂದು ಪಕ್ಷದ ರಾಜಕೀಯ ಮುಖಂಡರು ರೈತರ ಪರ ನಿಂತಿಲ್ಲ ಎಂದು ದೇವರಾಜ್ ಆಕ್ರೋಶವ್ಯಕ್ತಪಡಿಸಿದ್ದಾರೆ.
ಬೆಳಗಾಂ
ಅಧಿವೇಶನದಲ್ಲಿ
ತೀರ್ಮಾನ
ಈ ಕೊಬ್ಬರಿ ಆನ್‌ಲೈನ್ ವ್ಯಾಪಾರಕ್ಕೆ ಬೆಳಗಾಂ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರ ಕೊಬರಿ ಆನ್ ಲೈನ್ ವ್ಯಾಪಾರಕ್ಕೆ ಸಿದ್ಧತೆ ನಡೆಸಿತ್ತು ಎಂದು ರೈತ ಸಂಘದ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.