ತುಮಕೂರು

ರಾಜ್ಯಾದ್ಯಂತ ಜಾನಪದ ವೈವಿಧ್ಯ

Published On :

ತುಮಕೂರು: ಜಾನಪದ ತಜ್ಞ, ಕರ್ನಾಟಕ ಜಾನಪದ ಪರಿಷತ್ತು, ಜನಪದ ಲೋಕದ ನಿರ್ಮಾತೃ ಎಚ್.ಎಲ್. ನಾಗೇಗೌಡರ ಜನ್ಮಶತಮಾನೋತ್ಸವ ಅಂಗವಾಗಿ ರಾಜ್ಯಾದ್ಯಂತ ಜಾನಪದ ಕಲಾವಿದರು, ವಿದ್ವಾಂಸರ ಸಮ್ಮಿಲನ ವೈವಿಧ್ಯಮಯ ಜಾನಪದ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ  ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ ಹೇಳಿದರು.
ಸಿದ್ದಗಂಗಾ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಜಿಲ್ಲಾ ಘಟಕದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಪದ ಸಂಪತ್ತನ್ನು ಸಂಗ್ರಹಿಸುವ, ಜನಪದ ಕಲೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜಾನಪದ ವಿದ್ವಾಂಸ ಡಾ.ಎಚ್.ಎಲ್. ನಾಗೇಗೌಡ 50 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. 'ಪ್ರವಾಸಿ ಕಂಡ ಇಂಡಿಯಾ' ಎಂಬ 8  ಸಂಪುಟಗಳನ್ನು ತಂದಿದ್ದಾರೆ. ಜನಪದ ಕಲೆ ಉಳಿಸುವ ಹೋರಾಟಕ್ಕೆ ಜೀವವನ್ನು ಮುಡುಪಿಟ್ಟಿದ್ದ ಜನ್ಮಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ ಎಂದರು.
ಶಾಲಾ, ಕಾಲೇಜು, ಜಾತ್ರೆ, ಹಬ್ಬ ಇತ್ಯಾದಿ ಸಂದರ್ಭಗಳಲ್ಲಿ ಜನಪದ ಕಲಾಮೇಳಗಳನ್ನು ಪರಿಷತ್ ಘಟಕಗಳು ಏರ್ಪಡಿಸುತ್ತಿವೆ. ವಿದ್ಯಾರ್ಥಿ, ಯುವಜನರು ಜನಪದ ಕಲೆಗಳನ್ನು ಕಲಿತು, ಅವುಗಳ ಪ್ರಾಮುಖ್ಯತೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಜಿಲ್ಲಾ ಪಂಚಾಯ್ತಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಜಾನಪದ ಪರಿಷತ್ನ ಎಲ್ಲ ಚಟುವಟಿಕೆಗಳಿಗೆ ನೆರವು ನೀಡುತ್ತಿವೆ. ಪ್ರತಿ ಜಿಲ್ಲೆಯಿಂದ ಮೂವರು ಜನಪದ ಕಲಾವಿದರನ್ನು ಆಯ್ಕೆ ಮಾಡಿ ಒಟ್ಟು 100 ಮಂದಿಯನ್ನು ಶತಮಾನೋತ್ಸವದಲ್ಲಿ ಸನ್ಮಾನಿಸಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಎಚ್.ಎಲ್. ನಾಗೇಗೌಡ ಜಾನಪದ ಪ್ರಶಸ್ತಿಯನ್ನು 1 ಲಕ್ಷ ರು.ಮೌಲ್ಯದೊಂದಿಗೆ ಪ್ರದಾನ ಮಾಡುವುದು. ಮಾತ್ರವಲ್ಲ, ಜಾನಪದ ವಿವಿಯಲ್ಲಿ ಎಚ್.ಎಲ್. ನಾಗೇಗೌಡ ಅಧ್ಯಯನ ಪೀಠ ಆರಂಭಿಸುವುದು ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ಗೋವಿಂದರಾಜು, ಹಳ್ಳಿಯಿಂದ ಬಂದು ನಗರ ಪ್ರದೇಶಗಳಲ್ಲಿ ನೆಲೆಸಿರುವ ವಿದ್ಯಾವಂತರು ಗ್ರಾಮಗಳತ್ತ ವಿಮುಖರಾಗಿದ್ದಾರೆ. ಜನಪದ ಕಲೆ, ಸಾಹಿತ್ಯ, ಸಂಗೀತ ಸಂಸ್ಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ ಪಾಶ್ಚಿಮಾತ್ಯ ಪ್ರಭಾವದಿಂದ ಅವುಗಳ ಜೊತೆಗೆ ನಮ್ಮ ನೆಲೆಗಟ್ಟನ್ನು ಮರೆಯುತ್ತಿದ್ದೇವೆ. ಆದ್ದರಿಂದ ಗ್ರಾ.ಪಂ. ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನಪದ ಕಲೆ ಉಳಿಸಲು ಎಲ್ಲಾ ರೀತಿಯ ನೆರವು ನೀಡುತ್ತೇನೆಂದರು.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಯಣ್ಣೆಕಟ್ಟೆ ಚಿಕ್ಕಣ್ಣ ಮಾತನಾಡಿ, ಮುಂದಿನ ಒಂದು ವರ್ಷದಲ್ಲಿ ಜಿಲ್ಲಾ ಘಟಕ ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಪಿಸುವ ಬಗ್ಗೆ ಮಾಹಿತಿ ನೀಡಿದರು.
ಸಿದ್ದಗಂಗಾ ಪ.ಪೂ. ಕಾಲೇಜಿನ ಪ್ರಾಚಾರ್ಯ ಜಿ.ಎಸ್. ರೇಣುಕಪ್ಪ, ಕಲಾವಿದ ಡಾ. ಎಸ್. ಬಾಲಾಜಿ, ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.