ತುಮಕೂರು

ಯಾರಪ್ಪ ಕಲ್ಪತರು ವಾರಸುದಾರ?

Published On :

 ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ, ತುಮಕೂರು, ಮೇ 15
ಲೋಕಸಭಾ ಮೆಗಾ ಫೈಟ್ ಕ್ಲೈಮ್ಯಾಕ್ಸ್ ತಲುಪಿದ್ದು ತುಮಕೂರಿನ ನೂತನ ದೊರೆ ಯಾರು ಆಗ್ತಾರೆ ಎಂಬುದಷ್ಟೆ ಈಗ ಇರುವ ಕುತೂಹಲ.
 ನಾಲ್ಕು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಜಿ.ಎಸ್. ಬಸವರಾಜು ಅವರು ಈ ಬಾರಿ ಗೆದ್ದರೆ ತುಮಕೂರು ಜಿಲ್ಲೆಯ ಮಟ್ಟಿಗೆ ಐದು ಬಾರಿ ಸಂಸತ್ ಸದಸ್ಯರಾದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ದಿವಂಗತ ಲಕ್ಕಪ್ಪ ಅವರು 4 ಬಾರಿ ಸಂಸತ್ ಸದಸ್ಯರಾಗಿದ್ದರು.
ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಎಸ್.ಪಿ. ಮುದ್ದಹನುಮೇಗೌಡ ಈ ಚುನಾವಣೆಯಲ್ಲಿ ಗೆದ್ದರೆ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ. ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೃಷ್ಣಪ್ಪನವರು ನಿಧನರಾಗಿದ್ದಾರೆ. ಹೀಗಾಗಿ ಒಂದು ವೇಳೆ ಅವರ ಗೆದ್ದರೆ ಮತ್ತೊಂದು ಉಪಚುನಾವಣೆಯನ್ನು ತುಮಕೂರು ಎದುರಿಸಬೇಕಾಗಿದೆ.
 ಮೂರು ಬಾರಿ ಕಾಂಗ್ರೆಸ್‌ನಿಂದ ಒಂದು ಬಾರಿ ಬಿಜೆಪಿಯಿಂದ ಗೆದ್ದಿರುವ ಜಿ.ಎಸ್. ಬಸವರಾಜ್‌ಗೆ ಈ ಬಾರಿ ಟಿಕೆಟ್ ಸಿಗುವುದೇ ಅನುಮಾನ ಎಂಬಂತಿತ್ತು. ಜಿಲ್ಲಾ ಬಿಜೆಪಿ ನಾಯಕರನ್ನು ಎದುರು ಹಾಕಿಕೊಂಡಿದ್ದರಿಂದ ಅವರಿಗೆ ಟಿಕೆಟ್ ಬೇಡವೇ ಬೇಡವೆಂದು ಜಿಲ್ಲಾ ಸಮಿತಿ ಕೇಂದ್ರ ಸಮಿತಿಗೆ ಶಿಫಾರಸು ಮಾಡಿತ್ತು. ಆದರೆ ಯಡಿಯೂರಪ್ಪನವರ ಶಿಷ್ಯರಾದ ಜಿ.ಎಸ್. ಬಸವರಾಜು ಕಡೆಗೂ ಟಿಕೆಟ್ ತರುವಲ್ಲಿ ಯಶಸ್ವಿಯಾದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಬಸವರಾಜು ಅವರಿಗೆ ಟಿಕೆಟ್ ನೀಡಲಾಗಿತ್ತು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರ ವಿರುದ್ಧ 20 ಸಾವಿರ ಮತಗಳ ಅಂತರದಿಂದ ಬಸವರಾಜು ಜಯಗಳಿಸಿದ್ದರು. ಈಗ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜು ಐದನೇ ಬಾರಿ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಜೆಪಿಗೆ ಹ್ಯಾಟ್ರಿಕ್: ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆ ಪಕ್ಷಕ್ಕೆ ಇದು ಹ್ಯಾಟ್ರಿಕ್ ಗೆಲವು. ಈ ಹಿಂದೆ ಎಸ್. ಮಲ್ಲಿಕಾರ್ಜುನಯ್ಯ ಬಳಿಕ ಜಿ.ಎಸ್. ಬಸವರಾಜು ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈ ಬಾರಿ ಬಿಜೆಪಿ ಗೆದ್ದರೆ ಸತತ ಮೂರನೇ ಜಯ ದಾಖಲಿಸಲಿದೆ.
ಕಾಂಗ್ರೆಸ್‌ಗೆ ಪ್ರತಿಷ್ಠೆ: ಇನ್ನು ಈ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ತವರು ಕ್ಷೇತ್ರವಿದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಿದ ಸ್ಪರ್ಧಿಸಿ ಪರಮೇಶ್ವರ್ ಪರಾಭವಗೊಂಡಿದ್ದರು. ಈ ಬಾರಿ ತುಮಕೂರಿಗೆ ಯಾರಿಗೆ ಟಿಕೆಟ್ ನೀಡಬೇಕೆಂಬ ಜವಾಬ್ದಾರಿಯನ್ನು ಪರಮೇಶ್ವರ್‌ಗೆ ವಹಿಸಲಾಗಿತ್ತು. ಹೀಗಾಗಿ ಜೆಡಿಎಸ್ ನಿಂದ ಮುದ್ದಹನುಮೇಗೌಡರನ್ನು ಕರೆತಂದು ಟಿಕೆಟ್ ನೀಡಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಈ ಕ್ಷೇತ್ರ ಗೆಲ್ಲಬೇಕಾಗಿದೆ.  ಕಳೆದ ಬಾರಿ ಪರಾಭವಗೊಂಡಿದ್ದ ಮುದ್ದಹನುಮೇಗೌಡರು ಅನುಕಂಪದ ಮತವನ್ನು ಅವಲಂಬಿಸಿದ್ದಾರೆ. ಜತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ನೆರವಿಗೆ ಬರುತ್ತದೆ ಎಂಬ ನಿರೀಕ್ಷೆ ಇದೆ. ಎಲ್ಲಕ್ಕೂ ಮಿಗಿಲಾಗಿ ಕಳೆದ 30 ವರ್ಷಗಳಿಂದ ತುಮಕೂರು ಲೋಕಸಭೆ ಕ್ಷೇತ್ರದಿಂದ ಒಕ್ಕಲಿಗ ಸಮುದಾಯದವರು ಆಯ್ಕೆಯಾಗಿಲ್ಲ ಎಂಬ ಅಂಶ ಕೂಡ ನೆರವಿಗೆ ಬರುತ್ತದೆ ಎಂಬ ನಿರೀಕ್ಷೆ ಗೌಡರದ್ದು.
ಜೆಡಿಎಸ್ ಭವಿಷ್ಯವೇನು?: ಜೆಡಿಎಸ್ ಶಾಸಕರ ವಿರೋಧದ ನಡುವೆಯೂ ದೇವೇಗೌಡರು ತುಮಕೂರಿಗೆ ಎ. ಕೃಷ್ಣಪ್ಪನವರನ್ನು ಕಣಕ್ಕಿಳಿಸಿದ್ದರು. ಆದರೆ ಕೃಷ್ಣಪ್ಪನವರು ಸಾವನ್ನಪ್ಪಿದ್ದಾರೆ. ದೇವೇಗೌಡರು ಕೂಡ ಈ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು. 1996 ರಲ್ಲಿ ಹಿಂದುಳಿದ ವರ್ಗದ ಸಿ.ಎನ್. ಭಾಸ್ಕರಪ್ಪ ಇಲ್ಲಿ ಜಯಸಾಧಿಸಿದ್ದರು. ಅದೇ ಪ್ರಯೋಗವನ್ನು ಈ ಬಾರಿ ದೇವೇಗೌಡರು ಮಾಡಿದ್ದಾರೆ. ಆದರೆ ಕೃಷ್ಣಪ್ಪನಿಧನರಾಗಿರುವುದರಿಂದ ಜೆಡಿಎಸ್ ಈ ಕ್ಷೇತ್ರ ಗೆದ್ದರೂ ಉಪಯೋಗವಿಲ್ಲ ಎಂಬಂತಾಗಿದೆ. ಯಾವ ಅಭ್ಯರ್ಥಿಗೆ ಜಯಮಾಲೆ ಬೀಳುತ್ತದೆ ಎಂಬುದಷ್ಟೆ ಈಗ ಇರುವ ಕುತೂಹಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.