ತುಮಕೂರು

ಮೋದಿ ಪ್ರಧಾನಿ; ವಿಜಯೋತ್ಸವ

Published On :

ಚಿಕ್ಕನಾಯಕನಹಳ್ಳಿ: ದೇಶದ 15ನೇ ಪ್ರಧಾನಿಯಾಗಿ  ನರೇಂದ್ರ ಮೋದಿ ಪ್ರಮಾಣವಚನ ಸ್ವೀರಿಸಿದ  ಸಂದರ್ಭವನ್ನು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹರ್ಷದಿಂದ ಆಚರಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಎಚ್.ಬಿ. ಪಂಚಾಕ್ಷರಿಯವರು ದೇಶಕ್ಕೆ ಇಂದು ನಿಜವಾಗಿ ಸ್ವಾತಂತ್ರ ದೊರೆತಿದೆ. ಇದುವರೆಗೆ ರಾಷ್ಟ್ರಾಭಿಮಾನ, ರಾಷ್ಟ್ರನಿಷ್ಠೆಯಿಲ್ಲದ ಸ್ವಾರ್ಥಿಗಳು ದೇಶವನ್ನಾಳುತ್ತಿದ್ದರು.
ಆದರೆ ದೇಶಕ್ಕಿಂದು ಒಬ್ಬ ಸಮರ್ಥ ಮತ್ತು ಖಚಿತ ನಿಲುವು ತಾಳುವ ಧೀಮಂತ ನಾಯಕ ದೊರೆತಿರುವುದು  ಭಾರತೀಯರ ಸೌಭಾಗ್ಯ. ಐದು ದಶಕಗಳ ಕಾಲ ದೇಶವ್ನನಾಳಿದ ಕಾಂಗ್ರೆಸ್ಸಿನ ಓಲೈಕೆ ಮತ್ತು ತುಷ್ಟೀಕರಣ ರಾಜನೀತಿಯಿಂದಾಗಿ ದೇಶದ ಮಾನ ವಿಶ್ವಮಟ್ಟದಲ್ಲಿ ತಲೆಯೆತ್ತದ ರೀತಿಯಲ್ಲಿ ಕುಸಿದಿದೆ. ಹಾಡುಹಗಲೇ ನಮ್ಮ ಸೈನಿಕರ ಶಿರಶ್ಚೇದನ ಮಾಡಿದರು. ಪ್ರತ್ಯುತ್ತರ ನೀಡದ ನಮ್ಮ ನಾಯಕರ ಹೇಡಿತನಕ್ಕೆ ರೋಸಿಹೋದ ಮತದಾರರಿಗೆ, ಏಕೈಕ ಆಶಾಕಿರಣವಾಗಿ ಕಂಡ ಬಿಜೆಪಿಯ ಮೇಲೆ ಭರವಸೆಯಿಟ್ಟು  ದೇಶಾದ್ಯಂತ ಸುನಾಮಿಯ ರೀತಿ ಮತನೀಡಿ, ಆಶೀರ್ವದಿಸಿದ್ದಾರೆ. ಅವರ ನಿರೀಕ್ಷೆಯನ್ನು ಮೋದಿ ಎಂದಿಗೂ ಹುಸಿಯಾಗಿಸಲು ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಎಂ.ಎಂ. ಜಗದೀಶ್, ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್, ಎಪಿಎಂಸಿ ಅಧ್ಯಕ್ಷರಾದ ಅಗಸರಹಳ್ಳಿ ಶಿವರಾಜ್, ತಾಪಂ ಸದಸ್ಯ
ಎ.ಬಿ.ರಮೇಶ್, ಎಪಿಎಂಸಿ ನಿರ್ದೇಶಕ ಈಶ್ವರಮೂರ್ತಿ, ತಾಲೂಕು ಬಿಜೆಪಿ ಯುವಮೋರ್ಚಾ ಮುಖಂಡರಾದ ನವಿಲೆ ಮಧು, ಸುಂದರರಾಜು, ಚೇತನ್ಪ್ರಸಾದ್ ಇದ್ದರು. ಕೊನೆಯಲ್ಲಿ ಎಲ್ಲರಿಗೂ ಲಾಡು ವಿತರಿಸಿದರು.
ಪಟಾಕಿ ಸಿಡಿಸಿ ಸಂಭ್ರಮ
ಪಾವಗಡ: ನರೇಂದ್ರ ಮೋದಿಯವರು ದೇಶದ 15ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ,ಬಿಜೆಪಿ ವಲಯದಲ್ಲಿ ಸಂಭ್ರಮದ ಹೊನಲು ಹರಿದು ಇಲ್ಲಿನ  ಶನೇಶ್ವರ ದೇವಸ್ಥಾನದ ವೃತ್ತದ ಬಳಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಸರ್ಕಲ್ ಬಳಿ ಸುತ್ತುವರಿಸಿದ ಸಾವಿರಾರು ಸಂಖ್ಯೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಬಿಜೆಪಿ ಹಾಗೂ ನೂತನ ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಮೊಳಗಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಮುಖಂಡ ಎಸ್. ಶಿವಪ್ರಸಾದ್, ಪಕ್ಷದ ತಾ.ಅಧ್ಯಕ್ಷ ವಕೀಲ ಮುರಳೀಧರ್, ಮುಖಂಡರಾದ ಜಿ.ಟಿ. ಗಿರೀಶ್, ಶಿವಕುಮಾರ್ ಸಾಕೇಲ್, ರವಿ, ರೈತ ಸಂಘದ ನರಸಿಂಹರೆಡ್ಡಿ, ರಂಗಸಮುದ್ರ ಜಯರಾಮ್ ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿ ಸಂಭ್ರಮ ವ್ಯಕ್ತಪಡಿಸಿದರು.
ಚಾಯ್ವಾಲಾನಿಂದ ಉಚಿತ ಚಹ ವಿತರಣೆ
ತುರುವೇಕೆರೆ: ಕಳೆದ 13 ವರ್ಷಗಳಿಂದ ಇವರ ಉದ್ಯೋಗ ಟೀ, ಕಾಫಿ ಮಾಡುವುದೇ. ಈತ ವಿದ್ಯಾವಂತನಾಗಿದ್ದರೂ ಸಹ ಯಾವುದೇ ಉದ್ಯೋಗಕ್ಕೆ ಹೋಗದೇ ಟೀ ಕಾಫಿ ಮಾತ್ರ ಮಾರುವ ಕಾಯಕ ಆರಂಭಿಸಿದರು. ಇಂದು ತಾಲೂಕಿನಲ್ಲಿ ಇವರು ತೇಜು ಟೀ ಎಂದೇ ಪ್ರಸಿಧ್ಧಿಯಾಗಿದ್ದಾರೆ.
ಕೇವಲ ಕಾಫಿ ಟೀ ಮಾಡಿಕೊಂಡೇ ಉತ್ತಮ ಜೀವನ ನಿರ್ವಹಿಸುತ್ತಿರುವ ತೇಜು ಅವರು ಮೋದಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಲುವಾಗಿ ಸಾಯಂಕಾಲ 4 ರಿಂದಲೇ ತಮ್ಮ ಅಂಗಡಿಗೆ ಬರುವ ಎಲ್ಲರಿಗೂ ಉಚಿತವಾಗಿ ಟೀ ವಿತರಣೆ ಮಾಡಿದರು. ಸಾಯಂಕಾಲ 4 ಗಂಟೆಗೆ ಆರಂಭಗೊಂಡ ಇವರ ಉಚಿತ ಟೀ ವಿತರಣಾ ಕಾರ್ಯ ರಾತ್ರಿ 8 ರ ತನಕವೂ ಮುಂದುವರೆದಿತ್ತು. ಕನಿಷ್ಠ 2 ಸಾವಿರಕ್ಕೂ ಹೆಚ್ಚು ಮಂದಿಗೆ ಟೀ ವಿತರಣೆ ಮಾಡಲಾಯಿತು.
ಕಾರ್ಯಕರ್ತರ ಹರ್ಷ
ತುರುವೇಕೆರೆ: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತು.
 ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೇರಿದ ನೂರಾರು ಕಾರ್ಯಕರ್ತರು ಮೋದಿಗೆ ಜಯಘೋಷ ಹಾಕಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿದರು. ವಯಸ್ಸಿನ ಭೇದಭಾವವಿಲ್ಲದೇ ಹಲವಾರು ಮುಖಂಡರು ಕುಣಿದು ಕುಪ್ಪಳಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅರಳೀಕೆರೆ ರವಿಕುಮಾರ್, ಮಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ, ಮೃತ್ಯುಂಜಯ, ಹಾಲೇಗೌಡ, ವಿರೂಪಾಕ್ಷ, ಹುಚ್ಚೇಗೌಡ ಮೊದಲಾದ ಮುಖಂಡರು ಹಾಜರಿದ್ದು ಮೋದಿಯವರ ಪದಗ್ರಹಣ ಸಮಾರಂಭವನ್ನು ವೀಕ್ಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.